ದುಲೀಪ್ ಟ್ರೋಫಿ: ಸ್ಟಾರ್ ಆಟಗಾರರ ಅನುಪಸ್ಥಿತಿ, ರಿಂಕು ಸಿಂಗ್ಗೆ ಕರೆ

ರಿಂಕು ಸಿಂಗ್ | PC : PTI
ಹೊಸದಿಲ್ಲಿ: ಬಾಂಗ್ಲಾದೇಶ ವಿರುದ್ಧದ ಆರಂಭಿಕ ಟೆಸ್ಟ್ ಪಂದ್ಯಕ್ಕೆ ಬಹುತೇಕ ಪ್ರಮುಖ ಆಟಗಾರರು ಭಾರತೀಯ ಕ್ರಿಕೆಟ್ ತಂಡಕ್ಕೆ ಆಯ್ಕೆಯಾಗಿರುವ ಹಿನ್ನೆಲೆಯಲ್ಲಿ ಮಧ್ಯಮ ಸರದಿಯ ಬ್ಯಾಟರ್ ರಿಂಕು ಸಿಂಗ್ರನ್ನು ದುಲೀಪ್ ಟ್ರೋಫಿಯ ಎರಡನೇ ಸುತ್ತಿನ ಪಂದ್ಯಕ್ಕೆ ಕರೆ ನೀಡಲಾಗಿದೆ.
ಶುಭಮನ್ ಗಿಲ್, ಕೆ.ಎಲ್.ರಾಹುಲ್ ಹಾಗೂ ರಿಷಭ್ ಪಂತ್ಗೆ ಅನಂತಪುರದಲ್ಲಿ ಸೆ. 12ರಿಂದ ಆರಂಭವಾಗಲಿರುವ ದುಲೀಪ್ ಟ್ರೋಫಿಯ ಎರಡನೇ ಸುತ್ತಿನ ಪಂದ್ಯದಿಂದ ಮಂಗಳವಾರ ವಿಶ್ರಾಂತಿ ನೀಡಲಾಗಿದೆ. ಇತರ ಆಟಗಾರರಾದ ಧ್ರುವ್ ಜುರೆಲ್, ಅಕ್ಷರ್ ಪಟೇಲ್, ಯಶಸ್ವಿ ಜೈಸ್ವಾಲ್, ಕುಲದೀಪ್ ಯಾದವ್ ಹಾಗೂ ಆಕಾಶ್ದೀಪ್ ರವಿವಾರ ಪ್ರಕಟಿಸಲಾಗಿರುವ ಮೊದಲ ಟೆಸ್ಟ್ ತಂಡಕ್ಕೆ ಆಯ್ಕೆಯಾಗಿದ್ದಾರೆ.
ಈ ಎಲ್ಲ ಆಟಗಾರರಿಗೆ ಎರಡನೇ ಸುತ್ತಿನ ದುಲೀಪ್ ಟ್ರೋಫಿ ಪಂದ್ಯದಲ್ಲಿ ಆಡುವುದರಿಂದ ವಿನಾಯಿತಿ ನೀಡಲಾಗಿದೆ.
ಸರ್ಫರಾಝ್ ಖಾನ್ ಹಾಗೂ ಎಡಗೈ ಬೌಲರ್ ಯಶ್ ದಯಾಳ್ ಇಬ್ಬರೂ ಮೊದಲ ಟೆಸ್ಟ್ಗೆ ಆಯ್ಕೆ ಮಾಡಲಾಗಿರುವ 16 ಸದಸ್ಯರ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಆದರೆ ಈ ಇಬ್ಬರನ್ನು ದುಲೀಪ್ ಟ್ರೋಫಿಯ ಜವಾಬ್ದಾರಿಗಳಿಂದ ಮುಕ್ತಗೊಳಿಸಿಲ್ಲ. ಹೀಗಾಗಿ ಈ ಇಬ್ಬರು ಚೆನ್ನೈನಲ್ಲಿ ಬಾಂಗ್ಲಾದೇಶ ವಿರುದ್ಧ ಭಾರತ ಆಡಲಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಅಡುವ 11ರ ಬಳಗದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇಲ್ಲ.
ಆಯ್ಕೆಗಾರರು ಗಿಲ್ ಬದಲಿಗೆ ಪ್ರಥಮ್ ಸಿಂಗ್(ರೈಲ್ವೇಸ್), ಕೆ.ಎಲ್.ರಾಹುಲ್ ಸ್ಥಾನಕ್ಕೆ ಅಕ್ಷಯ್ ವಾಡ್ಕರ್(ವಿದರ್ಭ ಸಿಎ), ಜುರೆಲ್ ಬದಲಿಗೆ ಎಸ್.ಕೆ. ರಶೀದ್(ಆಂಧ್ರ ಸಿಎ)ಅವರನ್ನು ಆಯ್ಕೆ ಮಾಡಿದ್ದಾರೆ ಎಂದು ಬಿಸಿಸಿಐ ಹೇಳಿಕೆಯೊಂದರಲ್ಲಿ ತಿಳಿಸಿದೆ.