ದುಲೀಪ್ ಟ್ರೋಫಿ: ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಬುಮ್ರಾ ಅನುಪಸ್ಥಿತಿ ಪ್ರಶ್ನಿಸಿದ ಸಂಜಯ್ ಮಾಂಜ್ರೇಕರ್
ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ | PTI
ಹೊಸದಿಲ್ಲಿ: ಈಗಾಗಲೇ ಉತ್ತಮ ವಿಶ್ರಾಂತಿ ಪಡೆದಿರುವ ಭಾರತದ ದಿಗ್ಗಜರಾದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಹಾಗೂ ಜಸ್ಪ್ರಿತ್ ಬುಮ್ರಾ ಅವರನ್ನು ದುಲೀಪ್ ಟ್ರೋಫಿಯ ಮೊದಲ ಸುತ್ತಿನ ಪಂದ್ಯಾವಳಿಯಲ್ಲಿ ಸೇರಿಸಬೇಕಾಗಿತ್ತು ಎಂದು ಭಾರತದ ಮಾಜಿ ಕ್ರಿಕೆಟಿಗ ಸಂಜಯ್ ಮಾಂಜ್ರೇಕರ್ ಸಲಹೆ ನೀಡಿದ್ದಾರೆ.
ಸೆಪ್ಟಂಬರ್ 5ರಂದು ಬೆಂಗಳೂರು ಹಾಗೂ ಅನಂತಪುರದಲ್ಲಿ ದುಲೀಪ್ ಟ್ರೋಫಿ ಆರಂಭವಾಗುವ ಮೂಲಕ ಭಾರತದ ದೇಶೀಯ ಕ್ರಿಕೆಟ್ ಋತುವಿಗೆ ಚಾಲನೆ ಸಿಗಲಿದೆ. ಪಂದ್ಯಾವಳಿಯ ಮಾದರಿಯನ್ನು ವಲಯಗಳ ಬದಲಿಗೆ ಭಾರತ ಎ, ಭಾರತ ಬಿ, ಭಾರತ ಸಿ ಹಾಗೂ ಭಾರತ ಡಿ ಎಂದು ನಾಲ್ಕು ತಂಡಗಳನ್ನಾಗಿ ವಿಂಗಡಿಸಲಾಗಿದೆ.
ಭಾರತವು ಕಳೆದ 5 ವರ್ಷಗಳಲ್ಲಿ 249 ಅಂತರ್ರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದು ರೋಹಿತ್ ಇದರಲ್ಲಿ ಕೇವಲ ಶೇ.59ರಷ್ಟು ಆಡಿದ್ದಾರೆ. ವಿರಾಟ್ ಶೇ.61 ಹಾಗೂ ಬುಮ್ರಾ ಶೇ.34ರಷ್ಟು ಆಡಿದ್ದಾರೆ. ಇವೆಲ್ಲರೂ ಉತ್ತಮ ವಿಶ್ರಾಂತಿ ಪಡೆದ ಭಾರತದ ಆಟಗಾರರಾಗಿದ್ದು, ಅವರನ್ನು ದುಲೀಪ್ ಟ್ರೋಫಿಗೆ ಆಯ್ಕೆ ಮಾಡಬೇಕಾಗಿತ್ತು ಎಂದು ಮಾಂಜ್ರೇಕರ್ ಎಕ್ಸ್ನಲ್ಲಿ ಬರೆದಿದ್ದಾರೆ.
ಯಾವುದೇ ಕಾರಣವನ್ನು ನೀಡದೆ ರವೀಂದ್ರ ಜಡೇಜರನ್ನು ದುಲೀಪ್ ಟ್ರೋಫಿಯಲ್ಲಿ ಭಾಗವಹಿಸುವುದರಿಂದ ಬಿಸಿಸಿಐ ವಿನಾಯಿತಿ ನೀಡಿದೆ. ಮುಹಮ್ಮದ್ ಸಿರಾಜ್ ಹಾಗೂ ಉಮ್ರಾನ್ ಮಲಿಕ್ ಅನಾರೋಗ್ಯದಿಂದ ಚೇತರಿಸಿಕೊಳ್ಳುತ್ತಿದ್ದಾರೆ. ಈ ಇಬ್ಬರ ಬದಲಿಗೆ ನವದೀಪ್ ಸೈನಿ ಹಾಗೂ ಗೌರವ್ ಯಾದವ್ ಆಯ್ಕೆಯಾಗಿದ್ದಾರೆ.