ಕೆಕೆಆರ್ ʼಮೆಂಟರ್ʼ ಆಗಿ ಡ್ವೇನ್ ಬ್ರಾವೊ ನೇಮಕ
ಡ್ವೇನ್ ಬ್ರಾವೊ (Photo: PTI)
ಹೊಸದಿಲ್ಲಿ: 2025ರ ಐಪಿಎಲ್ ಋತುವಿಗೆ ಹಾಲಿ ಚಾಂಪಿಯನ್ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವು ವೆಸ್ಟ್ ಇಂಡೀಸ್ ತಂಡದ ಮಾಜಿ ಆಲ್ರೌಂಡರ್ ಡ್ವೇನ್ ಬ್ರಾವೊ ಅವರನ್ನು ತನ್ನ ಮೆಂಟರ್ ಆಗಿ ನೇಮಕ ಮಾಡಿದೆ. ಭಾರತ ತಂಡದ ಕೋಚ್ ಆಗಿ ನೇಮಕಗೊಂಡಿರುವ ಗೌತಮ್ ಗಂಭೀರ್ ಅವರ ಸ್ಥಾನವನ್ನು ಬ್ರಾವೊ ತುಂಬಲಿದ್ದಾರೆ.
ಬ್ರಾವೊ ಕೆಕೆಆರ್ ತಂಡದ ಮೆಂಟರ್ ಆಗಿ ನೇಮಕಗೊಂಡಿರುವುದರಿಂದ, ಅವರು ಈವರೆಗೆ ಗುರುತಿಸಿಕೊಂಡಿದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡದೊಂದಿಗಿನ ಸಂಬಂಧವನ್ನು ಕಡಿದುಕೊಳ್ಳಲಿದ್ದಾರೆ. ಐಪಿಎಲ್ 2024ರ ಋತುವಿನಲ್ಲಿ ಡ್ವೇನ್ ಬ್ರಾವೊ ಸಿಎಸ್ಕೆ ತಂಡದ ಬೌಲಿಂಗ್ ಕೋಚ್ ಆಗಿ ಕಾರ್ಯನಿರ್ವಹಿಸಿದ್ದರು.
ಇಂದು ಎಲ್ಲ ಮಾದರಿಯ ಕ್ರಿಕೆಟ್ನಿಂದ ಡ್ವೇನ್ ಬ್ರಾವೊ ನಿವೃತ್ತಿ ಘೋಷಿಸಿದ ನಂತರ, ಈ ನೇಮಕಾತಿ ಪ್ರಕಟಣೆಯಾಗಿದೆ. ಟಿ-20 ಕ್ರಿಕೆಟ್ ಮಾದರಿಯಲ್ಲಿ 582 ಪಂದ್ಯಗಳಿಂದ ಅತ್ಯಧಿಕ 631 ವಿಕೆಟ್ ಕಿತ್ತಿರುವ ಡ್ವೇನ್ ಬ್ರಾವೊ, ತಾನು ಗಾಯಗೊಂಡಿರುವುದರಿಂದ ನಿವೃತ್ತಿ ನಿರ್ಧಾರ ಪ್ರಕಟಿಸಿರುವುದಾಗಿ ದೃಢಪಡಿಸಿದ್ದಾರೆ.