ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿ | ನ್ಯೂಝಿಲ್ಯಾಂಡ್ ತಂಡದಿಂದ ಹೊರಗುಳಿದ ಎಜಾಝ್ ಪಟೇಲ್
ಎಜಾಝ್ ಪಟೇಲ್ | PC : X
ವೆಲ್ಲಿಂಗ್ಟನ್ : ಇತ್ತೀಚೆಗೆ ಭಾರತ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದಲ್ಲಿ ಒಟ್ಟು 11 ವಿಕೆಟ್ಗಳನ್ನು ಕಬಳಿಸಿ ನ್ಯೂಝಿಲ್ಯಾಂಡ್ ತಂಡವು ಸರಣಿ ಕ್ಲೀನ್ಸ್ವೀಪ್ ಸಾಧಿಸಲು ನೆರವಾಗಿದ್ದ ಸ್ಪಿನ್ನರ್ ಎಜಾಝ್ ಪಟೇಲ್ರನ್ನು ಮುಂಬರುವ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಿಂದ ಕೈಬಿಡಲಾಗಿದೆ.
ಪಟೇಲ್ 160 ರನ್ಗೆ 11 ವಿಕೆಟ್ಗಳನ್ನು ಕಬಳಿಸಿದ್ದು ನ್ಯೂಝಿಲ್ಯಾಂಡ್ ತಂಡ 3ನೇ ಟೆಸ್ಟ್ ಪಂದ್ಯವನ್ನು 25 ರನ್ನಿಂದ ಗೆದ್ದುಕೊಂಡಿತ್ತು. ಭಾರತವನ್ನು ಅದರದೇ ನೆಲದಲ್ಲಿ ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಕ್ಲೀನ್ಸ್ವೀಪ್ ಗೆ ಒಳಪಡಿಸಿದ ಮೊದಲ ತಂಡ ಎನಿಸಿಕೊಂಡಿತ್ತು.
ಇಂಗ್ಲೆಂಡ್ ವಿರುದ್ಧದ 3 ಪಂದ್ಯಗಳ ಟೆಸ್ಟ್ ಸರಣಿಗಾಗಿ ಆಯ್ಕೆಗಾರರು 14 ಸದಸ್ಯರ ತಂಡವನ್ನು ಶುಕ್ರವಾರ ಪ್ರಕಟಿಸಿದ್ದು, ಪಟೇಲ್ಗೆ ಸ್ಥಾನ ನೀಡಲಾಗಿಲ್ಲ. ಭಾರತ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ 157 ರನ್ಗೆ 13 ವಿಕೆಟ್ಗಳನ್ನು ಕಬಳಿಸಿದ್ದ ಮಿಚೆಲ್ ಸ್ಯಾಂಟ್ನರ್ ತಂಡದಲ್ಲಿರುವ ಏಕೈಕ ಪ್ರಮುಖ ಸ್ಪಿನ್ನರ್ ಆಗಿದ್ದು, ಸ್ಯಾಂಟ್ನರ್ 2ನೇ ಹಾಗೂ 3ನೇ ಟೆಸ್ಟ್ ಪಂದ್ಯವನ್ನು ಮಾತ್ರ ಆಡಲಿದ್ದಾರೆ.
ಗಾಯದ ಸಮಸ್ಯೆಯಿಂದಾಗಿ ಭಾರತ ವಿರುದ್ಧ ಸರಣಿಯಿಂದ ವಂಚಿತರಾಗಿದ್ದ ಕೇನ್ ವಿಲಿಯಮ್ಸನ್ ತಂಡಕ್ಕೆ ವಾಪಸಾಗಿದ್ದಾರೆ. ಟಾಮ್ ಲ್ಯಾಥಮ್ ನಾಯಕತ್ವವನ್ನು ಉಳಿಸಿಕೊಂಡಿದ್ದು, ಹೊಸಮುಖ, ಆಲ್ರೌಂಡರ್ ನಾಥನ್ ಹಾರಿಸ್ಗೆ ಕರೆ ನೀಡಲಾಗಿದೆ.
ಮೊದಲ ಟೆಸ್ಟ್ ಪಂದ್ಯವು ನ.28ರಂದು ಕ್ರೈಸ್ಟ್ಚರ್ಚ್ನಲ್ಲಿ ಆರಂಭವಾಗಲಿದೆ. 2ನೇ ಟೆಸ್ಟ್ ಪಂದ್ಯವು ವೆಲ್ಲಿಂಗ್ಟನ್ನಲ್ಲಿ ಡಿ.6ರಿಂದ 10ರ ತನಕ ಹಾಗೂ ಮೂರನೇ ಪಂದ್ಯವು ಹ್ಯಾಮಿಲ್ಟನ್ನಲ್ಲಿ ಡಿ.14ರಿಂದ ಆರಂಭವಾಗಲಿದೆ.
*ನ್ಯೂಝಿಲ್ಯಾಂಡ್ ಟೆಸ್ಟ್ ತಂಡ: ಟಾಮ್ ಲ್ಯಾಥಮ್(ನಾಯಕ), ಟಾಮ್ ಬ್ಲಂಡೆಲ್,ಡೆವೊನ್ ಕಾನ್ವೆ, ಜೇಕಬ್ ಡಫಿ, ಮ್ಯಾಟ್ ಹೆನ್ರಿ, ಡೇರಿಲ್ ಮಿಚೆಲ್, ವಿಲ್ ಒ ರೂರ್ಕಿ, ಗ್ಲೆನ್ ಫಿಲಿಪ್ಸ್, ರಚಿನ್ ರವೀಂದ್ರ, ಮಿಚೆಲ್ ಸ್ಯಾಂಟ್ನರ್, ನಾಥನ್ ಸ್ಮಿತ್, ಟಿಮ್ ಸೌಥಿ, ಕೇನ್ ವಿಲಿಯಮ್ಸನ್, ವಿಲ್ ಯಂಗ್.