ಪಾಕಿಸ್ತಾನ ವಿರುದ್ಧ 3ನೇ ಟೆಸ್ಟ್ ಪಂದ್ಯಕ್ಕೆ ಇಂಗ್ಲೆಂಡ್ ತಂಡ ಪ್ರಕಟ
ರೆಹಾನ್ ಅಹ್ಮದ್ ಸಹಿತ ಮೂವರು ಸ್ಪಿನ್ನರ್ಗಳ ಸೇರ್ಪಡೆ

PC ; PTI
ಲಂಡನ್ : ಪಾಕಿಸ್ತಾನ ಕ್ರಿಕೆಟ್ ತಂಡದ ವಿರುದ್ಧ ರಾವಲ್ಪಿಂಡಿಯಲ್ಲಿ ನಡೆಯಲಿರುವ ಮೂರನೇ ಹಾಗೂ ಅಂತಿಮ ಟೆಸ್ಟ್ ಪಂದ್ಯಕ್ಕೆ ಇಂಗ್ಲೆಂಡ್ ತಂಡವು ಮೂವರು ಸ್ಪಿನ್ನರ್ಗಳನ್ನು ಸೇರಿಸಿಕೊಂಡಿದ್ದು, ರೆಹಾನ್ ಅಹ್ಮದ್ಗೆ ಅವಕಾಶ ನೀಡಲಾಗಿದೆ ಎಂದು ಇಂಗ್ಲೆಂಡ್ ಹಾಗೂ ವೇಲ್ಸ್ ಕ್ರಿಕೆಟ್ ಮಂಡಳಿ(ಇಸಿಬಿ)ಮಂಗಳವಾರ ತಿಳಿಸಿದೆ.
ಇಂಗ್ಲೆಂಡ್ ತಂಡ ಮೊದಲ ಟೆಸ್ಟ್ ಪಂದ್ಯವನ್ನು ಇನಿಂಗ್ಸ್ ಹಾಗೂ 47 ರನ್ಗಳಿಂದ ಗೆದ್ದುಕೊಂಡಿತ್ತು. ಎರಡನೇ ಪಂದ್ಯವನ್ನು 152 ರನ್ ಅಂತರದಿಂದ ಗೆದ್ದುಕೊಂಡಿರುವ ಪಾಕಿಸ್ತಾನ ತಂಡವು ಸರಣಿಯನ್ನು 1-1ರಿಂದ ಸಮಬಲಗೊಳಿಸಿದೆ. ಸ್ಪಿನ್ ದ್ವಯರಾದ ನುಮಾನ್ ಅಲಿ ಹಾಗೂ ಸಾಜಿದ್ ಖಾನ್ ಎಲ್ಲ 20 ವಿಕೆಟ್ಗಳನ್ನು ಉರುಳಿಸಿದ್ದರು.
ಪಾಕಿಸ್ತಾನವು ಅಂತಿಮ ಟೆಸ್ಟ್ಗೆ ಸ್ಪಿನ್ ಸ್ನೇಹಿ ಪಿಚ್ ಸಿದ್ಧಪಡಿಸುವ ನಿರೀಕ್ಷೆ ಇದೆ. ಇಂಗ್ಲೆಂಡ್ ತಂಡವು ಸ್ಪಿನ್ನರ್ಗಳಾದ ರೆಹಾನ್ ಅಹ್ಮದ್ ಶುಐಬ್ ಬಶೀರ್ ಹಾಗೂ ಜಾಕ್ ಲೀಚ್ರನ್ನು ಆಡುವ 11ರ ಬಳಗದಲ್ಲಿ ಸೇರಿಸಿಕೊಂಡಿದೆ. ವೇಗದ ಬೌಲರ್ ಅಟ್ಕಿನ್ಸನ್ಗೆ ಮಾತ್ರ ಅವಕಾಶ ನೀಡಲಾಗಿದ್ದು, ಇನ್ನಿಬ್ಬರು ವೇಗಿಗಳಾದ ಬ್ರೆಂಡನ್ ಕರ್ಸ್ ಹಾಗೂ ಮ್ಯಾಥ್ಯೂ ಪಾಟ್ಸ್ರನ್ನು ಹೊರಗಿಡಲಾಗಿದೆ.
20ರ ಹರೆಯದ ಅಹ್ಮದ್ 2022ರಲ್ಲಿ ಇಂಗ್ಲೆಂಡ್ ತಂಡ ಪಾಕಿಸ್ತಾನಕ್ಕೆ ಪ್ರವಾಸ ಕೈಗೊಂಡಿದ್ದಾಗ ತನ್ನ ಚೊಚ್ಚಲ ಟೆಸ್ಟ್ ಪಂದ್ಯ ಆಡಿದ್ದರು. ತನ್ನ ಚೊಚ್ಚಲ ಪಂದ್ಯದಲ್ಲೇ 5 ವಿಕೆಟ್ ಗೊಂಚಲು ಪಡೆದಿದ್ದರು. ಪ್ರವಾಸಿಗರು ಸರಣಿಯಲ್ಲಿ 3-0 ಅಂತರದಿಂದ ಕ್ಲೀನ್ಸ್ವೀಪ್ ಸಾಧಿಸಲು ನೆರವಾಗಿದ್ದರು.
►ಇಂಗ್ಲೆಂಡ್ ಆಡುವ 11ರ ಬಳಗ
ಝಾಕ್ ಕ್ರಾಲಿ, ಬೆನ್ ಡಕೆಟ್, ಒಲಿ ಪೋಪ್, ಜೋ ರೂಟ್, ಹ್ಯಾರಿ ಬ್ರೂಕ್, ಬೆನ್ ಸ್ಟೋಕ್ಸ್(ನಾಯಕ), ಜೆಮಿ ಸ್ಮಿತ್, ಗಸ್ ಅಟ್ಕಿನ್ಸನ್, ರೆಹಾನ್ ಅಹ್ಮದ್, ಜಾಕ್ ಲೀಚ್, ಶುಐಬ್ ಬಶೀರ್.