ಅಫ್ಘಾನಿಸ್ತಾನ ವಿರುದ್ಧದ ಚಾಂಪಿಯನ್ಸ್ ಟ್ರೋಫಿ ಪಂದ್ಯವನ್ನು ಇಂಗ್ಲೆಂಡ್ ಬಹಿಷ್ಕರಿಸುವುದಿಲ್ಲ: ಇಸಿಬಿ

PC : PTI
ಲಂಡನ್: ಬಹಿಷ್ಕರಿಸುವ ಕರೆಗಳ ಹೊರತಾಗಿಯೂ ಅಫ್ಘಾನಿಸ್ತಾನದ ವಿರುದ್ಧ 2025ರ ಆವೃತ್ತಿಯ ಚಾಂಪಿಯನ್ಸ್ ಟ್ರೋಫಿ ಪಂದ್ಯ ಆಡುವುದನ್ನು ಮುಂದುವರಿಸಲು ನಿರ್ಧರಿಸಲಾಗಿದೆ ಎಂದು ಇಂಗ್ಲೆಂಡ್ ಹಾಗೂ ವೇಲ್ಸ್ ಕ್ರಿಕೆಟ್ ಮಂಡಳಿ(ಇಸಿಬಿ)ಗುರುವಾರ ಪ್ರಕಟಿಸಿದೆ.
ತಾಲಿಬಾನ್ ಆಳ್ವಿಕೆಯ ನಂತರ ತನ್ನ ಮಹಿಳಾ ಕ್ರಿಕೆಟ್ ವ್ಯವಸ್ಥೆಯನ್ನು ವಿಸರ್ಜಿಸಿದ ಅಫ್ಘಾನಿಸ್ತಾನ ದೇಶದ ವಿರುದ್ಧದ ಕ್ರಿಕೆಟ್ ಪಂದ್ಯವನ್ನು ಬಹಿಷ್ಕರಿಸುವಂತೆ ಇಂಗ್ಲೆಂಡ್ನಲ್ಲಿ ಭಾರೀ ಒತ್ತಾಯ ಕೇಳಿಬಂದಿತ್ತು.
ತಾಲಿಬಾನ್ ಆಳ್ವಿಕೆಯಲ್ಲಿ ಅಫ್ಘಾನಿಸ್ತಾನ ದೇಶದಲ್ಲಿ ಮಹಿಳೆಯರ ಹಕ್ಕುಗಳ ವ್ಯಾಪಕ ಉಲ್ಲಂಘನೆಯ ಹಿನ್ನೆಲೆಯಲ್ಲಿ ಮುಂಬರುವ ಅಫ್ಘಾನ್ ವಿರುದ್ಧದ ಪುರುಷರ ಚಾಂಪಿಯನ್ಸ್ ಟ್ರೋಫಿ ಪಂದ್ಯವನ್ನು ಇಂಗ್ಲೆಂಡ್ ಬಹಿಷ್ಕರಿಸಬೇಕೆಂಬ ಕರೆಗಳ ಕುರಿತು ಇಂದು ಇಸಿಬಿ ಮಂಡಳಿ ಚರ್ಚಿಸಿದೆ ಎಂದು ಹೇಳಿಕೆಯೊಂದರಲ್ಲಿ ತಿಳಿಸಲಾಗಿದೆ.
ಪಂದ್ಯವನ್ನು ಬಹಿಷ್ಕರಿಸುವ ವಿಚಾರದ ಬಗ್ಗೆ ವಿಭಿನ್ನ ಅಭಿಪ್ರಾಯಗಳನ್ನು ಮಂಡಳಿಯು ಗುರುತಿಸಿದ್ದು, ಅದನ್ನು ಎಚ್ಚರಿಕೆಯಿಂದ ಆಲಿಸಿದೆ. ಈ ವಿಷಯವನ್ನು ಚರ್ಚಿಸಲು ನಾವು ಸರಕಾರ, ಐಸಿಸಿ, ನಮ್ಮ ಇಂಗ್ಲೆಂಡ್ ಪುರುಷರ ಆಟಗಾರರು ಹಾಗೂ ಇತರರೊಂದಿಗೆ ನಿಕಟ ಸಂಪರ್ಕದಲ್ಲಿದ್ದೇವೆ ಎಂದು ಇಸಿಬಿ ತಿಳಿಸಿದೆ.
ಇಂಗ್ಲೆಂಡ್ ತಂಡವು ಲಾಹೋರ್ನ ಗದ್ದಾಫಿ ಸ್ಟೇಡಿಯಮ್ನಲ್ಲಿ ಫೆ.26ರಂದು ನಡೆಯಲಿರುವ ‘ಬಿ’ ಗುಂಪಿನ ಪಂದ್ಯದಲ್ಲಿ ಅಫ್ಘಾನಿಸ್ತಾನ ತಂಡವನ್ನು ಎದುರಿಸಲಿದೆ.