ಈ ವರ್ಷದ ಐಪಿಎಲ್ನಿಂದ ಹಿಂದೆ ಸರಿದ ಇಂಗ್ಲೆಂಡ್ ಬ್ಯಾಟರ್ ಹ್ಯಾರಿ ಬ್ರೂಕ್
ನಿಯಮದ ಪ್ರಕಾರ 2 ವರ್ಷ ನಿಷೇಧಕ್ಕೊಳಗಾಗುವ ಭೀತಿ

ಹ್ಯಾರಿ ಬ್ರೂಕ್ | PC : PTI
ಲಂಡನ್: ಇಂಗ್ಲೆಂಡ್ ಬ್ಯಾಟರ್ ಹ್ಯಾರಿ ಬ್ರೂಕ್ ಸತತ ಎರಡನೇ ವರ್ಷವೂ ಐಪಿಎಲ್ ಟೂರ್ನಿಯಿಂದ ಹೊರಗುಳಿದಿದ್ದು, ಈ ಹಿನ್ನೆಲೆಯಲ್ಲಿ ಅವರು ಎರಡು ವರ್ಷಗಳ ಕಾಲ ಸ್ಪರ್ಧಾವಳಿಯಲ್ಲಿ ಭಾಗವಹಿಸದಂತೆ ನಿಷೇಧಕ್ಕೊಳಗಾಗುವ ಭೀತಿ ಎದುರಿಸುತ್ತಿದ್ದಾರೆ.
ಐಪಿಎಲ್-2025ರ ಹರಾಜಿಗೆ ಮುಂಚಿತವಾಗಿ ಲೀಗ್ನ ಆಡಳಿತ ಮಂಡಳಿಯು ಒಂದು ನಿಯಮವನ್ನು ಜಾರಿಗೆ ತಂದಿದ್ದು, ಆ ನಿಯಮದ ಪ್ರಕಾರ, ‘‘ಆಟಗಾರರ ಹರಾಜಿನಲ್ಲಿ ನೋಂದಾಯಿಸಿಕೊಳ್ಳುವ ಹಾಗೂ ಹರಾಜಿನಲ್ಲಿ ಆಯ್ಕೆಯಾದ ನಂತರ ಋತುವಿನ ಆರಂಭಕ್ಕೆ ಮೊದಲು ತನ್ನನ್ನು ತಾನು ಲಭ್ಯವಿಲ್ಲ ಎಂದು ಘೋಷಿಸಿಕೊಳ್ಳುವ ಯಾವುದೇ ಆಟಗಾರನನ್ನು 2 ವರ್ಷಗಳ ತನಕ ಪಂದ್ಯಾವಳಿ ಹಾಗೂ ಆಟಗಾರರ ಹರಾಜಿನಲ್ಲಿ ಭಾಗವಹಿಸುವುದರಿಂದ ನಿಷೇಧಿಸಲಾಗುತ್ತದೆ’’
ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿ ಬಳಿ ಕ್ಷಮೆ ಕೋರಿರುವ ಬ್ರೂಕ್, ಇಂಗ್ಲೆಂಡ್ ತಂಡದ ಪರ ಆಡುವುದು ನನ್ನ ‘ಆದ್ಯತೆ’ ಹಾಗೂ ‘ಗಮನ’ವಾಗಿದೆ ಎಂದು ಹೇಳಿದ್ದಾರೆ.
ಇಂಗ್ಲೆಂಡ್ ತಂಡವು ಚಾಂಪಿಯನ್ಸ್ ಟ್ರೋಫಿಯಲ್ಲಿ ಗ್ರೂಪ್ ಹಂತದಿಂದಲೇ ನಿರ್ಗಮಿಸಿರುವ ಕಾರಣ ಜೋಸ್ ಬಟ್ಲರ್ ರಾಜೀನಾಮೆಯಿಂದ ತೆರವಾಗಿರುವ ಸೀಮಿತ ಓವರ್ ಕ್ರಿಕೆಟ್ ತಂಡದ ನಾಯಕತ್ವದ ಸ್ಥಾನಕ್ಕೆ ಇಂಗ್ಲೆಂಡ್ ಟೆಸ್ಟ್ ತಂಡದ ನಾಯಕ ಬೆನ್ ಸ್ಟೋಕ್ಸ್ ಜೊತೆಗೆ 26ರ ಹರೆಯದ ಬ್ರೂಕ್ ಕೂಡ ಓರ್ವ ಫೇವರಿಟ್ ಆಟಗಾರನಾಗಿದ್ದಾರೆ.
‘‘ಮುಂಬರುವ ಐಪಿಎಲ್ ಟೂರ್ನಿಯಿಂದ ಹಿಂದೆ ಸರಿಯುವ ಕಠಿಣ ನಿರ್ಧಾರ ತೆಗೆದುಕೊಂಡಿದ್ದೇನೆ. ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಆ ತಂಡದ ಬೆಂಬಲಿಗರಲ್ಲಿ ನಾನು ಕ್ಷಮೆಯಾಚಿಸುತ್ತೇನೆ. ಇದು ಇಂಗ್ಲೆಂಡ್ ಕ್ರಿಕೆಟ್ಗೆ ಮಹತ್ವದ ಸಮಯ. ಮುಂಬರುವ ಸರಣಿಗೆ ತಯಾರಿ ನಡೆಸಲು ನಾನು ಸಂಪೂರ್ಣವಾಗಿ ಬದ್ದನಾಗಲು ಬಯಸುತ್ತೇನೆ’’ಎಂದು ಬ್ರೂಕ್ ಸಾಮಾಜಿಕ ಮಾಧ್ಯಮದಲ್ಲಿ ಬರೆದಿದ್ದಾರೆ.
ಇಂಗ್ಲೆಂಡ್ ತಂಡವು ಜೂನ್ನಲ್ಲಿ ಸ್ವದೇಶದಲ್ಲಿ ಆರಂಭವಾಗಲಿರುವ ಟೆಸ್ಟ್ ಸರಣಿಯಲ್ಲಿ ಭಾರತ ತಂಡವನ್ನು ಎದುರಿಸಲಿದೆ. ಆ ನಂತರ ನವೆಂಬರ್ನಿಂದ ಜನವರಿ ತನಕ ಆಸ್ಟ್ರೇಲಿಯ ವಿರುದ್ದ ಬಹುನಿರೀಕ್ಷಿತ ಆ್ಯಶಸ್ ಸರಣಿಯನ್ನಾಡಲು ಕಾಂಗರೂ ನಾಡಿಗೆ ತೆರಳಲಿದೆ.
ಬ್ರೂಕ್ ಅವರು ತನ್ನ ಅಜ್ಜಿಯ ನಿಧನದ ಕಾರಣಕ್ಕೆ 2024ರ ಆವೃತ್ತಿಯ ಐಪಿಎಲ್ನಿಂದ ಕೊನೆಯ ಗಳಿಗೆಯಲ್ಲಿ ಹಿಂದೆ ಸರಿದಿದ್ದರು.
ಐಪಿಎಲ್ ಟೂರ್ನಿಯಿಂದ ಬ್ರೂಕ್ ಹೊರಗುಳಿಯುವ ನಿರ್ಧಾರವನ್ನು ಇಸಿಬಿ ಅಧಿಕಾರಿಗಳು ಬಿಸಿಸಿಐಗೆ ಕಳೆದ ವಾರ ತಿಳಿಸಿದ್ದರು. ಡೆಲ್ಲಿ ತಂಡವು ಕಳೆದ ವರ್ಷ ನವೆಂಬರ್ನಲ್ಲಿ ನಡೆದಿದ್ದ ಐಪಿಎಲ್ ಮೆಗಾ ಹರಾಜಿನ ವೇಳೆ ಬ್ರೂಕ್ ಅವರನ್ನು 6.25 ಕೋ.ರೂ. ನೀಡಿ ತನ್ನ ತೆಕ್ಕೆಗೆ ಸೇರಿಸಿಕೊಂಡಿತ್ತು.
ಬ್ರೂಕ್ 2023ರಲ್ಲಿ ಐಪಿಎಲ್ ಟೂರ್ನಿಯಲ್ಲಿ ಒಮ್ಮೆ ಮಾತ್ರ ಅಡಿದ್ದರು. ಆಗ ಹೈದರಾಬಾದ್ ತಂಡವನ್ನು ಪ್ರತಿನಿಧಿಸಿದ್ದ ಬ್ರೂಕ್ 11 ಪಂದ್ಯಗಳಲ್ಲಿ 190 ರನ್ ಗಳಿಸಿದ್ದರು. ಈಡನ್ಗಾರ್ಡನ್ಸ್ನಲ್ಲಿ ಕೆಕೆಆರ್ ವಿರುದ್ಧ 55 ಎಸೆತಗಳಲ್ಲಿ ಔಟಾಗದೆ 100 ರನ್ ಗಳಿಸಿದ್ದರು.