ವಿಶ್ವಕಪ್ ನಂತರ ಅಂತರ್ರಾಷ್ಟ್ರಿಯ ಕ್ರಿಕೆಟ್ನಿಂದ ಡೇವಿಡ್ ವಿಲ್ಲಿ ವಿದಾಯ
ಡೇವಿಡ್ ವಿಲ್ಲಿ (PTI)
ಹೊಸದಿಲ್ಲಿ: ಈಗ ನಡೆಯುತ್ತಿರುವ ವಿಶ್ವಕಪ್ ಟೂರ್ನಿ ಅಂತ್ಯಗೊಂಡ ನಂತರ ಅಂತರ್ರಾಷ್ಟ್ರೀಯ ಕ್ರಿಕೆಟಿಗೆ ವಿದಾಯ ಹೇಳುವುದಾಗಿ ಇಂಗ್ಲೆಂಡ್ನ ಆಲ್ರೌಂಡರ್ ಡೇವಿಡ್ ವಿಲ್ಲಿ ಬುಧವಾರ ಘೋಷಿಸಿದ್ದಾರೆ.
ನನ್ನ ಈ ನಿರ್ಧಾರ ಟೂರ್ನಮೆಂಟ್ನಲ್ಲಿ ತನ್ನ ತಂಡದ ನಿರಾಶಾದಾಯಕ ಪ್ರದರ್ಶನ ಕಾರಣವಲ್ಲ ಎಂದು ಒತ್ತಿ ಹೇಳಿದರು.
2023-24ರ ಸಾಲಿಗೆ ಕ್ರಿಕೆಟಿಗರ ಕೇಂದ್ರೀಯ ಒಪ್ಪಂದದ ಪಟ್ಟಿಯಿಂದ ವಿಲ್ಲಿ ಹೆಸರನ್ನು ಇಂಗ್ಲೆಂಡ್ ಹಾಗೂ ವೇಲ್ಸ್ ಕ್ರಿಕೆಟ್ ಮಂಡಳಿ(ಇಸಿಬಿ)ಹೊರಗಿಟ್ಟಿರುವ ಬೆನ್ನಲ್ಲೆ ಈ ನಿರ್ಧಾರ ಪ್ರಕಟಿಸಿದ್ದಾರೆ.
ಇಂತಹ ದಿನ ಬರುತ್ತದೆ ಎಂದು ಯೋಚಿಸಿಯೇ ಇರಲಿಲ್ಲ. ನಾನು ಚಿಕ್ಕವನಾಗಿದ್ದಾಗ ಇಂಗ್ಲೆಂಡ್ ಪರ ಕ್ರಿಕೆಟ್ ಆಡಬೇಕೆಂಬ ಕನಸು ಕಂಡಿದ್ದೆ. ಎಚ್ಚರಿಕೆಯಿಂದ ಯೋಚಿಸಿದ ನಂತರ ವಿಶ್ವಕಪ್ ಮುಕ್ತಾಯದ ವೇಳೆಗೆ ಎಲ್ಲ ಮಾದರಿಯ ಅಂತರ್ರಾಷ್ಟ್ರೀಯ ಕ್ರಿಕೆಟ್ನಿಂದ ನಿವೃತ್ತಿಯಾಗುವ ನಿರ್ಧಾರಕ್ಕೆ ಬಂದಿರುವೆ ಎಂದು ಇನ್ಸ್ಟಾಗ್ರಾಮ್ನಲ್ಲಿ ವಿಲ್ಲಿ ಬರೆದಿದ್ದಾರೆ.
ಹಾಲಿ ಚಾಂಪಿಯನ್ ಇಂಗ್ಲೆಂಡ್ ತಂಡ ಪ್ರಸಕ್ತ ವಿಶ್ವಕಪ್ ಟೂರ್ನಿಯಲ್ಲಿ ಆಡಿರುವ 6 ಪಂದ್ಯಗಳಲ್ಲಿ ಕೇವಲ ಒಂದರಲ್ಲಿ ಜಯ ಸಾಧಿಸಿ 10 ತಂಡಗಳಿರುವ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ.
ವಿಲ್ಲಿ 2015ರಲ್ಲಿ ಡಬ್ಲಿನ್ನಲ್ಲಿ ಅಂತರ್ರಾಷ್ಟ್ರೀಯ ಕ್ರಿಕೆಟಿಗೆ ಕಾಲಿಟ್ಟಿದ್ದರು.ಈ ತನಕ 70 ಏಕದಿನ(94 ವಿಕೆಟ್) ಹಾಗೂ 43 ಟಿ-20(51 ವಿಕೆಟ್)ಪಂದ್ಯಗಳನ್ನು ಆಡಿದ್ದರು. ಎಡಗೈ ಬ್ಯಾಟರ್ ಏಕದಿನ ಕ್ರಿಕೆಟ್ನಲ್ಲಿ ಎರಡು ಅರ್ಧಶತಕಗಳ ಸಹಿತ ಒಟ್ಟು 627 ರನ್ ಗಳಿಸಿದ್ದಾರೆ.
ಈಗ ನಡೆಯುತ್ತಿರುವ ವಿಶ್ವಕಪ್ನಲ್ಲಿ 3 ಪಂದ್ಯಗಳನ್ನು ಆಡಿದ್ದ ವಿಲ್ಲಿ ಐದು ವಿಕೆಟ್ಗಳನ್ನು ಪಡೆದಿದ್ದರು.