ಐಪಿಎಲ್ ಗೆ ಇಂಗ್ಲೆಂಡ್ ವೇಗಿ ಡೇವಿಡ್ ವಿಲ್ಲಿ ಅಲಭ್ಯ
ಡೇವಿಡ್ ವಿಲ್ಲಿ | Photo: ANI
ಹೊಸದಿಲ್ಲಿ : ಇಂಡಿಯನ್ ಪ್ರೀಮಿಯರ್ ಲೀಗ್ ನ 2024ರ ಆವೃತ್ತಿಯ ಆರಂಭಿಕ ಪಂದ್ಯಗಳಿಗೆ ಇಂಗ್ಲೆಂಡ್ ವೇಗಿ ಡೇವಿಡ್ ವಿಲ್ಲಿ ಲಭಿಸುವುದಿಲ್ಲ ಎಂದು ಲಕ್ನೋ ಸೂಪರ್ ಜಯಂಟ್ಸ್ (ಎಲ್ ಎಸ್ ಜಿ)ನ ಪ್ರಧಾನ ಕೋಚ್ ಜಸ್ಟಿನ್ ಲ್ಯಾಂಗರ್ ಬುಧವಾರ ಹೇಳಿದ್ದಾರೆ.
‘‘ಮಾರ್ಕ್ ವುಡ್ ಈ ಪಂದ್ಯಾವಳಿಯಿಂದ ಹಿಂದೆ ಸರಿದಿದ್ದಾರೆ ಮತ್ತು ಡೇವಿಡ್ ವಿಲ್ಲಿ ಕೂಡ ಈಗ ಬರುವುದಿಲ್ಲ. ಅಂದರೆ, ನಾವು ಅನುಭವದ ಕೊರತೆಯನ್ನು ಎದುರಿಸುತ್ತೇವೆ. ಆದರೆ, ನಮ್ಮಲ್ಲಿ ಅಗಾಧ ಪ್ರತಿಭೆಯಿದೆ ಎನ್ನುವುದನ್ನು ನಾನು ಕಳೆದ ಕೆಲವು ದಿನಗಳಲ್ಲಿ ಗಮನಿಸಿದ್ದೇನೆ’’ ಎಂದು ತಂಡ ಏರ್ಪಡಿಸಿದ ಆನ್ ಲೈನ್ ಮಾಧ್ಯಮ ಸಂವಹನದಲ್ಲಿ ಮಾತನಾಡಿದ ಲ್ಯಾಂಗರ್ ಹೇಳಿದರು.
ಆದರೆ, ವಿಲ್ಲಿಯ ಅನುಪಸ್ಥಿತಿಗೆ ಅವರು ಯಾವುದೇ ಕಾರಣವನ್ನು ನೀಡಿಲ್ಲ. ಆದರೂ, ವೃತ್ತಿಪರ ಲೀಗ್ ಗಳಲ್ಲಿ ನಿರಂತರವಾಗಿ ಆಡಿದ ಬಳಿಕ ಕುಟುಂಬದೊಂದಿಗೆ ಕಳೆಯುವುದಕ್ಕಾಗಿ ಅವರು ಸಮಯ ತೆಗೆದುಕೊಳ್ಳಲಿದ್ದಾರೆ ಎಂಬುದಾಗಿ ಭಾವಿಸಲಾಗಿದೆ. ಅವರು ಐಎಲ್ಟಿ20ಯಲ್ಲಿ ಅಬುಧಾಬಿ ನೈಟ್ ರೈಡರ್ಸ್ನಲ್ಲಿ ಮತ್ತು ಪಿಎಸ್ಎಲ್ ನಲ್ಲಿ ಮುಲ್ತಾನ್ ಸುಲ್ತಾನ್ಸ್ ನಲ್ಲಿ ಆಡುತ್ತಿದ್ದಾರೆ.
ಎಡಗೈ ವೇಗಿ ಡೇವಿಸ್ ವಿಲ್ಲಿ ಕಳೆದ ಎರಡು ಐಪಿಎಲ್ ಋತುಗಳಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರವಾಗಿ ಆಡಿದ್ದಾರೆ. ಈ ಬಾರಿ ಅವರು ಎಲ್ ಎಸ್ ಜಿ ಪರವಾಗಿ ಆಡಲಿದ್ದಾರೆ. ಡಿಸೆಂಬರ್ನಲ್ಲಿ ನಡೆದ ಹರಾಜಿನಲ್ಲಿ ಅವರನ್ನು ಮೂಲ ಬೆಲೆ 2 ಕೋಟಿ ರೂ.ಗೆ ಎಲ್ಎಸ್ಐ ಖರೀದಿಸಿತ್ತು.