ಬುಮ್ರಾರನ್ನು ‘ಪ್ರೈಮೇಟ್’ ಪ್ರಭೇದ ಎಂದ ಮಾಜಿ ಇಂಗ್ಲೆಂಡ್ ಆಟಗಾರ್ತಿ ಇಶಾ ಗುಹಾ
ವ್ಯಾಪಕ ಆಕ್ರೋಶದ ಬಳಿಕ ಕ್ಷಮೆಯಾಚಿಸಿದ ಇಶಾ
ಜಸ್ಪ್ರೀತ್ ಬುಮ್ರಾ (PTI) , ಇಸಾ ಗುಹಾ (X)
ಬ್ರಿಸ್ಬೇನ್: ಇಲ್ಲಿ ಭಾರತ ಮತ್ತು ಆಸ್ಟ್ರೇಲಿಯ ತಂಡದ ನಡುವೆ ನಡೆಯುತ್ತಿರುವ ಮೂರನೆಯ ಟೆಸ್ಟ್ ವೀಕ್ಷಕ ವಿವರಣೆಯ ಸಂದರ್ಭದಲ್ಲಿ ಭಾರತದ ವೇಗಿ ಜಸ್ಪ್ರೀತ್ ಬುಮ್ರಾರನ್ನು ‘ಪ್ರೈಮೇಟ್’ (ವಾನರ, ಸಸ್ತನಿ ಪ್ರಾಣಿ) ಎಂದು ಕರೆದು ವಿವಾದಕ್ಕೀಡಾದ ಬಳಿಕ ತನ್ನ ಹೇಳಿಕೆಗೆ ಮಾಜಿ ಇಂಗ್ಲೆಂಡ್ ಆಟಗಾರ್ತಿ ಇಸಾ ಗುಹಾ ಕ್ಷಮೆ ಯಾಚಿಸಿದ್ದಾರೆ.
ಚೆಂಡಿನೊಂದಿಗೆ ಅದ್ಭುತ ಪ್ರದರ್ಶನ ನೀಡುತ್ತಿರುವ ಭಾರತದ ವೇಗಿಯನ್ನು ಶ್ಲಾಘಿಸಲು ತಪ್ಪು ಪದ ಆಯ್ದುಕೊಂಡಿದ್ದಕ್ಕೆ ಕ್ಷಮೆ ಯಾಚಿಸುತ್ತೇನೆ ಎಂದು ಅವರು ಹೇಳಿದ್ದಾರೆ.
ರವಿವಾರ ನಡೆದ ಮೂರನೆ ಟೆಸ್ಟ್ ಪಂದ್ಯದ ಎರಡನೆ ದಿನದಾಟದಂದು ಆಸ್ಟ್ರೇಲಿಯಾದ ಇಬ್ಬರೂ ಆರಂಭಿಕ ಆಟಗಾರರನ್ನು ಔಟ್ ಮಾಡಿದ ಜಸ್ಪ್ರೀತ್ ಬುಮ್ರಾರನ್ನು ಆಸ್ಟ್ರೇಲಿಯಾದ ಮಾಜಿ ವೇಗಿ ಬ್ರೆಟ್ ಲೀ ಪ್ರಶಂಸಿಸಿದ ವೇಳೆ, ಇಶಾ ಗುಹಾ, ಬುಮ್ರಾರನ್ನು ಪ್ರೈಮೇಟ್ ಎಂದು ಸಂಬೋಧಿಸಿದ್ದರು.
ಫಾಕ್ಸ್ ಕ್ರಿಕೆಟ್ಗಾಗಿ ವೀಕ್ಷಕ ವಿವರಣೆ ನೀಡುತ್ತಿದ್ದ ಇಶಾಗುಹಾ, "ಆತ ತುಂಬಾ ಬೆಲೆ ಬಾಳುವ ಆಟಗಾರ, ಅಲ್ಲವೆ? ತುಂಬಾ ಬೆಲೆಬಾಳುವ ಪ್ರೈಮೇಟ್ ಜಸ್ಪ್ರೀತ್ ಬುಮ್ರಾ" ಎಂದು ಬಣ್ಣಿಸಿದ್ದರು.
ಇಶಾ ಗುಹಾ ಹೇಳಿಕೆ ವಿರುದ್ಧ ಸಾಮಾಜಿಕ ಮಾಧ್ಯಮಗಳಲ್ಲಿ ವಿವಾದ ಭುಗಿಲೆದ್ದ ಬೆನ್ನಿಗೇ, "ನಾನು ನಿನ್ನೆ ವೀಕ್ಷಕ ವಿವರಣೆ ಸಂದರ್ಭದಲ್ಲಿ ಬಳಸಿದ ಪದವನ್ನು ಹಲವಾರು ರೀತಿಯಲ್ಲಿ ವ್ಯಾಖ್ಯಾನಿಸಲಾಗುತ್ತಿದೆ. ನಾನೇನಾದರೂ ತಪ್ಪು ಮಾಡಿದ್ದರೆ ಕ್ಷಮೆ ಯಾಚಿಸುತ್ತೇನೆ" ಎಂದು ಅವರು ಮೂರನೆ ದಿನದಾಟದ ನೇರಪ್ರಸಾರದಲ್ಲಿ ಮನವಿ ಮಾಡಿದ್ದಾರೆ.