ಶ್ರೀಲಂಕಾ ವಿರುದ್ಧ ಮೊದಲ ಟೆಸ್ಟ್ ನಲ್ಲಿ ಕಪ್ಪುಪಟ್ಟಿ ಧರಿಸಿ ಆಡಿದ ಇಂಗ್ಲೆಂಡ್ ಆಟಗಾರರು
PC : X
ಲಂಡನ್: ಇತ್ತೀಚೆಗೆ ನಿಧನರಾಗಿರುವ ಮಾಜಿ ಕ್ರಿಕೆಟಿಗ ಗ್ರಹಾಂ ಥೋರ್ಪೆ ಗೌರವಾರ್ಥ ಮ್ಯಾಂಚೆಸ್ಟರ್ ಟೆಸ್ಟ್ ನಲ್ಲಿ ಇಂಗ್ಲೆಂಡ್ ಆಟಗಾರರು ಕಪ್ಪುಪಟ್ಟಿ ಧರಿಸಲಿದ್ದಾರೆ ಎಂದು ಇಂಗ್ಲೆಂಡ್-ಶ್ರೀಲಂಕಾ ನಡುವಿನ ಟೆಸ್ಟ್ ಸರಣಿಗಿಂತ ಮೊದಲು ಇಂಗ್ಲೆಂಡ್ ನ ಹಂಗಾಮಿ ನಾಯಕ ಒಲಿ ಪೋಪ್ ಬಹಿರಂಗಪಡಿಸಿದ್ದರು. ಇದೀಗ ಪೋಪ್ ಅವರ ಮಾತು ನಿಜವಾಗಿದ್ದು, ಆಟಗಾರರು ಕಪ್ಪುಪಟ್ಟಿ ಧರಿಸಿ ಮಾಜಿ ಕ್ರಿಕೆಟಿಗನಿಗೆ ಶ್ರದ್ದಾಂಜಲಿ ಸಲ್ಲಿಸಿದರು.
ಇಂಗ್ಲೆಂಡ್ ನ ಮಾಜಿ ಕ್ರಿಕೆಟಿಗ ಥೋರ್ಪೆ 100 ಟೆಸ್ಟ್ ಪಂದ್ಯಗಳನ್ನು ಆಡಿದ್ದು 6,700ಕ್ಕೂ ಅಧಿಕ ರನ್ ಗಳಿಸಿದ್ದರು. ಆಗಸ್ಟ್ 4ರಂದು ತನ್ನ 55ನೇ ವಯಸ್ಸಿನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದರು. ಖಿನ್ನತೆ ಹಾಗೂ ಆತಂಕದಿಂದ ಬಳಲುತ್ತಿದ್ದ ಥೋರ್ಪೆ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆಂಬ ವಿಚಾರವನ್ನು ಥೋರ್ಪೆ ಅವರ ಪತ್ನಿ ಅಮಂಡಾ ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದರು.
ಥೋರ್ಪೆ ಸ್ಮರಣಾರ್ಥ ಹಾಗೂ ಇಂಗ್ಲೆಂಡ್ ಕ್ರಿಕೆಟಿಗೆ ಅವರು ನೀಡಿರುವ ಮಹತ್ವದ ಕೊಡುಗೆಗಾಗಿ ಕಪ್ಪುಪಟ್ಟಿ ಧರಿಸಲು ನಿರ್ಧರಿಸಲಾಗಿದೆ.
ಥೋರ್ಪೆ ಅವರು ಇಂಗ್ಲೆಂಡ್ ಕ್ರಿಕೆಟ್ ತಂಡದ ಬ್ಯಾಟಿಂಗ್ ಕೋಚ್ ಆಗಿಯೂ ಕಾರ್ಯನಿರ್ವಹಿಸಿದ್ದರು. ಒಲಿ ಪೋಪ್ ಸಹಿತ ಹಲವು ಆಟಗಾರರ ಮೇಲೆ ಪ್ರಭಾವಬೀರಿದ್ದರು.
ಖಾಯಂ ನಾಯಕ ಬೆನ್ ಸ್ಟೋಕ್ಸ್ ಅನುಪಸ್ಥಿತಿಯಲ್ಲಿ ಪೋಪ್ ಅವರು ಇಂಗ್ಲೆಂಡ್ ತಂಡದ ನಾಯಕತ್ವವಹಿಸಿದ್ದಾರೆ.
ಬುಧವಾರ ಓಲ್ಡ್ ಟ್ರಾಫೋರ್ಡ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ಆರಂಭವಾಗಿರುವ ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯಕ್ಕಿಂತ ಮೊದಲೇ ಕಪ್ಪು ಪಟ್ಟಿ ಧರಿಸಲು ಯೋಜಿಸಲಾಗಿತ್ತು. ಥೋರ್ಪೆ ಸ್ಮರಣಾರ್ಥ ಆಟಗಾರರು ಸಂಘಟಿತವಾಗಿ ಗೌರವ ಸಲ್ಲಿಸಲು ಅವಕಾಶ ನೀಡಲಾಗಿತ್ತು.