ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ವೇಗದ ಅರ್ಧಶತಕ ಪೂರೈಸಿದ ಇಂಗ್ಲೆಂಡ್ ತಂಡ

ಬೆನ್ ಡಕೆಟ್ | PC : PTI
ಲಂಡನ್: ವೆಸ್ಟ್ಇಂಡೀಸ್ ವಿರುದ್ಧ ಗುರುವಾರ ನಾಟಿಂಗ್ಹ್ಯಾಮ್ ನಲ್ಲಿ ನಡೆದ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಕೇವಲ 4.2 ಓವರ್ಗಳಲ್ಲಿ 50 ರನ್ ಗಳಿಸಿದ ಇಂಗ್ಲೆಂಡ್ ತಂಡ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ವೇಗದ ಅರ್ಧಶತಕವನ್ನು ಗಳಿಸಿದ ಸಾಧನೆ ಮಾಡಿದೆ.
ತನ್ನ ಆಕ್ರಮಣಕಾರಿ ಆಟ ಮುಂದುವರಿಸಿದ ಇಂಗ್ಲೆಂಡ್ ತಂಡವು 2ನೇ ಟೆಸ್ಟ್ ನ ಮೊದಲ ದಿನವಾದ ಗುರುವಾರ ಈ ಮೈಲಿಗಲ್ಲು ತಲುಪಿದೆ. ಓಪನರ್ ಬೆನ್ ಡಕೆಟ್(14 ಎಸೆತಗಳಲ್ಲಿ 33 ರನ್) ಹಾಗೂ ಒಲಿ ಪೋಪ್(16 ರನ್, 9 ಎಸೆತ) ಆರಂಭಿಕ ಜೊತೆಯಾಟದ ಮೂಲಕ ಈ ಸಾಧನೆಗೆ ಕಾರಣರಾದರು.
ಈ ಇಬ್ಬರು ಸೇರಿಕೊಂಡು ಒಟ್ಟು 10 ಬೌಂಡರಿಗಳನ್ನು ಗಳಿಸಿದ್ದು, ಇಂಗ್ಲೆಂಡ್ ತಂಡವು 4.3 ಓವರ್ಗಳಲ್ಲಿ ಈ ಹಿಂದೆ ಗಳಿಸಿದ್ದ ತನ್ನದೇ ವೇಗದ ಅರ್ಧಶತಕದ ದಾಖಲೆಯನ್ನು ಉತ್ತಮಪಡಿಸಿಕೊಂಡಿದೆ. 1994ರಲ್ಲಿ ದಿ ಓವಲ್ ನಲ್ಲಿ ದಕ್ಷಿಣ ಆಫ್ರಿಕಾದ ವಿರುದ್ಧ ಇಂಗ್ಲೆಂಡ್ ಈ ದಾಖಲೆ ನಿರ್ಮಿಸಿತ್ತು.
ಟೆಸ್ಟ್ ಕ್ರಿಕೆಟ್ ನಲ್ಲಿ ವೇಗವಾಗಿ 50 ರನ್ ಗಳಿಸಿದ ಪಟ್ಟಿಯಲ್ಲಿ ಟಾಪ್-3 ಸ್ಥಾನಗಳು ಇಂಗ್ಲೆಂಡ್ ಕ್ರಿಕೆಟ್ ತಂಡದ ಪಾಲಾಗಿದೆ. ಇಂಗ್ಲೆಂಡ್ ತಂಡವು ಶ್ರೀಲಂಕಾದ ವಿರುದ್ಧ 2002ರಲ್ಲಿ ಮ್ಯಾಂಚೆಸ್ಟರ್ ನಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ 5 ಓವರ್ ಗಳಲ್ಲಿ 50 ರನ್ ಗಳಿಸಿ ಮೂರನೇ ವೇಗದ ಫಿಫ್ಟಿ ಗಳಿಸಿತ್ತು.
ಶ್ರೀಲಂಕಾ ತಂಡ 2004ರಲ್ಲಿ ಕರಾಚಿಯಲ್ಲಿ ಪಾಕಿಸ್ತಾನದ ವಿರುದ್ಧ 5.2 ಓವರ್ ಗಳಲ್ಲಿ 50 ರನ್ ಗಳಿಸಿ ಟೆಸ್ಟ್ ಕ್ರಿಕೆಟ್ ನಲ್ಲಿ ವೇಗದ 50 ರನ್ ಗಳಿಸಿದ ತಂಡಗಳ ಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದೆ. ಕೇವಲ 5.3 ಓವರ್ಗಳಲ್ಲಿ ಮೊದಲ ವಿಕೆಟ್ನಲ್ಲಿ 50 ರನ್ ಗಳಿಸಿದ್ದ ಭಾರತವು ಐದನೇ ಸ್ಥಾನದಲ್ಲಿದೆ. ಭಾರತವು 2 ಬಾರಿ ಈ ಸಾಧನೆ ಮಾಡಿದೆ. 2008ರಲ್ಲಿ ಚೆನ್ನೈನಲ್ಲಿ ಇಂಗ್ಲೆಂಡ್ ವಿರುದ್ಧ ಮೊದಲ ಬಾರಿ ಹಾಗೂ 2023ರಲ್ಲಿ ಪೋರ್ಟ್ ಆಫ್ ಸ್ಪೇನ್ನಲ್ಲಿ ವೆಸ್ಟ್ಇಂಡೀಸ್ ವಿರುದ್ಧ 2ನೇ ಬಾರಿ ಈ ಸಾಧನೆ ಮಾಡಿತ್ತು.
ಟೆಸ್ಟ್ ಕ್ರಿಕೆಟ್ ನಲ್ಲಿ ತಂಡಗಳು ಗಳಿಸಿದ ವೇಗದ 50 ರನ್ ಗಳ ಪಟ್ಟಿ
4.2-ಇಂಗ್ಲೆಂಡ್-ವೆಸ್ಟ್ಇಂಡೀಸ್, ನಾಟಿಂಗ್ಹ್ಯಾಮ್, 2024
4.3-ಇಂಗ್ಲೆಂಡ್-ದಕ್ಷಿಣ ಆಫ್ರಿಕಾ, ದಿ ಓವಲ್, 1994
4.6-ಇಂಗ್ಲೆಂಡ್-ಶ್ರೀಲಂಕಾ, ಮ್ಯಾಂಚೆಸ್ಟರ್, 2002
5.2-ಶ್ರೀಲಂಕಾ-ಪಾಕಿಸ್ತಾನ, ಕರಾಚಿ, 2004
5.3-ಭಾರತ-ಇಂಗ್ಲೆಂಡ್, ಚೆನ್ನೈ, 2008
5.3-ಭಾರತ-ವೆಸ್ಟ್ಇಂಡೀಸ್, ಪೋರ್ಟ್ ಆಫ್ ಸ್ಪೇನ್, 2023