ಬಾಂಗ್ಲಾ ವಿರುದ್ಧ ಇಂಗ್ಲೆಂಡ್ ಗೆ 137 ರನ್ ಗಳ ಜಯ
ಧರ್ಮಶಾಲಾ ದಲ್ಲಿ ನಡೆದ ವಿಶ್ವಕಪ್ ಪಂದ್ಯ
PHOTO : cricketworldcup.com
ಧರ್ಮಶಾಲಾ : ಇಲ್ಲಿನ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಷಿಯೇಷನ್ ಸ್ಟೇಡಿಯಂ ನಲ್ಲಿ ನಡೆದ ಐಸಿಸಿ ಏಕದಿನ ವಿಶ್ವಕಪ್ ಕ್ರಿಕೆಟ್ 2023 ಟೂರ್ನಿಯ 7 ನೇ ಪಂದ್ಯದಲ್ಲಿ ಬಾಂಗ್ಲಾ ತಂಡ ವಿರುದ್ಧ ಇಂಗ್ಲೆಂಡ್ 137 ನಿಂದ ಗೆದ್ದುಕೊಂಡಿದೆ.
ವಿಶ್ವಕಪ್ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ 9 ಕ್ರಿಕೆಟ್ ಗಳ ಹೀನಾಯ ಸೋಲು ಅನುಭವಿಸಿದ್ದ ಇಂಗ್ಲೆಂಡ್ ತಂಡ ಬಾಂಗ್ಲಾದೇಶವನ್ನು ಸೋಲಿಸುವುದರೊಂದಿಗೆ ಗೆಲುವಿನ ಲಯಕ್ಕೆ ಮರಳಿದೆ. ಟಾಸ್ ಸೋತು ಬ್ಯಾಟಿಂಗ್ ಮಾಡಿದ್ದ ಇಂಗ್ಲೆಂಡ್ ತಂಡ ಟಾಪ್ ಆರ್ಡರ್ ಬ್ಯಾಟರ್ ಗಳ ಅದ್ಭುತ ಪ್ರದರ್ಶನ ದಿಂದ ನಿಗದಿತ 50 ಓವರ್ ಗಳಲ್ಲಿ 364 ರನ್ ಪೇರಿಸಿ ಬಾಂಗ್ಲಾ ದೇಶಕ್ಕೆ ಕಠಿಣ ಗುರಿ ನೀಡಿತು.
ಸವಾಲಿನ ಗುರಿ ಪಡೆದ ಬಾಂಗ್ಲಾ ತಂಡಕ್ಕೆ ಉತ್ತಮ ಆರಂಭ ದೊರೆಯಲಿಲ್ಲ.ಆರಂಭಿಕ ಬ್ಯಾಟರ್ ತಂಝಿದ್ ಹಸನ್ ಒಂದಂಕಿ ಗೆ ರೀಸ್ ಟೊಪ್ಲಿಗೆ ವಿಕೆಟ್ ನೀಡಿದರೆ, ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಗೆ ಬಂದಿದ್ದ ಹುಸೈನ್ ಶಾಂಟೋ ಶೂನ್ಯಕ್ಕೆ ರೀಸ್ ಟೊಪ್ಲಿ ಬೌಲಿಂಗ್ ನಲ್ಲಿ ಕ್ಯಾಚ್ ನೀಡಿ ನಿರ್ಗಮಿಸಿದರು. ಇದರಿಂದ ರೀಸ್ ಟೊಪ್ಲಿ ಹ್ಯಾಟ್ರಿಕ್ ವಿಕೆಟ್ ಅವಕಾಶ ಪಡೆದರು. ಆದರೆ ನಾಯಕ ಶಾಕಿಬ್ ಇದಕ್ಕೆ ಅವಕಾಶ ನೀಡಲಿಲ್ಲ. ಟಾಪ್ ಆರ್ಡರ್ ಬ್ಯಾಟರ್ ಗಳ ಪೆವಿಲಿಯನ್ ಪರೇಡ್ ನಡುವೆಯೂ ಏಕಾಂಗಿ ಹೋರಾಟ ನಡೆಸಿದ ಲಿಟನ್ ದಾಸ್ 4 ಬೌಂಡರಿ 2 ಸಿಕ್ಸರ್ ಸಹಿತ 76 ಬಾರಿಸಿ ಕ್ರಿಸ್ ವೊಕ್ಸ್ ಬೌಲಿಂಗ್ ನಲ್ಲಿ ವಿಕೆಟ್ ಕೀಪರ್ ಗೆ ಕ್ಯಾಚ್ ನೀಡಿ ಔಟ್ ಆದರು. ಮುಸ್ತಫಿ ಝುರ್ ರಹೀಮ್ ಅರ್ಧಶತಕ ಗಳಿಸಿದರೂ ತಂಡವನ್ನು ಗೆಲ್ಲಿಸಲು ಆಗಲಿಲ್ಲ . ತೌಹಿದ್ 39 ರನ್ ಗಳಿಸಿದರೆ ಮೆಹದಿ ಹಸನ್ 14 ಕ್ಕೆ ನಿರ್ಗಮಿಸಿದರು. ತಸ್ಕಿನ್ ಅಹ್ಮದ್, ಷರೀಫುಲ್ ಇಸ್ಲಾಂ ಕ್ರಮವಾಗಿ 15,12 ಗಳಿಸಿದರು. ಅಂತಿಮವಾಗಿ ಬಾಂಗ್ಲಾದೇಶ 48.2 ಓವರ್ ಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡು ಇಂಗ್ಲಂಡ್ ವಿರುದ್ಧ 137 ರನ್ ಗಳ ಸೋಲು ಅನುಭವಿಸಿತು.
ಇಂಗ್ಲೆಂಡ್ ಪರ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ನೀಡಿದ ರೀಸ್ ಟೊಪ್ಲಿ 4 ವಿಕೆಟ್ ಪಡೆದರೆ ಕ್ರಿಸ್ ವೋಕ್ಸ್ 2 ವಿಕೆಟ್ ಮಾರ್ಕ್ ವುಡ್, ಆದಿಲ್ ರಶೀದ್ , ಲಿವಿಂಗ್ ಸ್ಟೋನ್ ಕರನ್ ತಲಾ ಒಂದೊಂದು ವಿಕೆಟ್ ಪಡೆದರು.
ಮೊದಲು ಟಾಸ್ ಸೋತು ಬ್ಯಾಟಿಂಗ್ ಗೆ ಇಳಿದಿದ್ದ ಇಂಗ್ಲೆಂಡ್ 9 ವಿಕೆಟ್ ನಷ್ಟಕ್ಕೆ 364 ರನ್ ಬಾರಿಸಿತ್ತು. ಇಂಗ್ಲೆಂಡ್ ನ ಟಾಪ್ ಆರ್ಡರ್ ಬ್ಯಾಟರ್ ಗಳಾದ ಜಾನಿ ಬೈರ್ ಸ್ಟ್ರೋವ್ ಮತ್ತು ಡೇವಿಡ್ ಮಲನ್ ಭದ್ರ ಅಡಿಪಾಯ ಹಾಕಿ ಕೊಟ್ಟರು. ಬೈರ್ ಸ್ಟ್ರೋವ್( 52) ಗಳಿಸಿದರೆ ಡೇವಿಡ್ ಮಲನ್ 16 ಬೌಂಡರಿ 5 ಸಿಕ್ಸರ್ ಸಹಿತ 140 ರನ್ ಬಾರಿಸಿ ಸ್ಪೋಟಕ ಶತಕ ಸಿಡಿಸಿ ಬಾಂಗ್ಲಾ ಬೌಲರ್ ಗಳನ್ನು ಕಾಡಿದರು. ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿದ್ದ ಅನುಭವಿ ಬ್ಯಾಟರ್ ಜೋ ರೂಟ್ 82 ವಿಕೆಟ್ ಕಳೆದುಕೊಂಡು ಶತಕ ವಂಚಿತರಾದರು.ಬಾಂಗ್ಲಾದೇಶ ಪರ ಮೆಹದಿ ಹಸನ್ 71 ರನ್ ನೀಡಿ 4 ವಿಕೆಟ್ ಪಡೆದು ಸಂಭ್ರಮಿಸಿದರೆ, ಅವರಿಗೆ ಸಾಥ್ ನೀಡಿದ್ದ ಷರೀಫುಲ್ ಇಸ್ಲಾಂ 3 ವಿಕೆಟ್ ಪಡೆದರು. ನಾಯಕ ಶಾಕಿಬ್ ಮತ್ತು ತಸ್ಕಿನ್ ಅಹ್ಮದ್ ತಲಾ ಒಂದೊದು ವಿಕೆಟ್ ಹಂಚಿಕೊಂಡರು.