ವರ್ಷದ ಮಹಿಳಾ ಅಸೋಸಿಯೇಟ್ ಕ್ರಿಕೆಟರ್ ಪ್ರಶಸ್ತಿಗೆ ಆಯ್ಕೆಯಾದ ಇಶಾ ಓಝಾ
ಇಶಾ ಓಝಾ | PC : ICC
ದುಬೈ: ಯುನೈಟೆಡ್ ಅರಬ್ ಎಮಿರೇಟ್ಸ್(ಯುಎಇ)ನಾಯಕಿ ಇಶಾ ಓಝಾ 2024ರಲ್ಲಿ ನೀಡಿರುವ ಅತ್ಯುತ್ತಮ ಪ್ರದರ್ಶನದ ಹಿನ್ನೆಲೆಯಲ್ಲಿ ಐಸಿಸಿ ಮಹಿಳೆಯರ ಅಸೋಸಿಯೇಟ್ ಕ್ರಿಕೆಟರ್ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಓಝಾ ವರ್ಷದುದ್ದಕ್ಕೂ ಶ್ರೇಷ್ಠ ಪ್ರದರ್ಶನ ನೀಡಿದ್ದು, ಅಗ್ರ ಸರದಿಯಲ್ಲಿ ಪ್ರಾಬಲ್ಯ ಸಾಧಿಸಿದ್ದರು. ಸ್ಪಿನ್ ಬೌಲಿಂಗ್ನಲ್ಲೂ ಅಮೂಲ್ಯ ಕೊಡುಗೆ ನೀಡಿದ್ದರು. ಓಝಾ ಅವರ ಆಲ್ರೌಂಡ್ ಪ್ರದರ್ಶನದ ನೆರವಿನಿಂದ ಯುಎಇ ತಂಡವು ಏಶ್ಯನ್ ಕ್ರಿಕೆಟ್ ಕೌನ್ಸಿಲ್ ಮಹಿಳೆಯರ ಪ್ರೀಮಿಯರ್ ಕಪ್ ಜಯಿಸಿದ್ದಲ್ಲದೆ, 2024ರ ಮಹಿಳೆಯರ ಟಿ-20 ಅರ್ಹತಾ ಸುತ್ತಿನ ಅಭಿಯಾನದಲ್ಲಿ ಸ್ಫೂರ್ತಿಯುತ ಪ್ರದರ್ಶನ ನೀಡಿತ್ತು.
ಓಝಾ ಅವರು ಪ್ರೀಮಿಯರ್ ಕಪ್ನಲ್ಲಿ ಗರಿಷ್ಠ ಸ್ಕೋರರ್ ಎನಿಸಿಕೊಂಡು ‘ಸರಣಿಶ್ರೇಷ್ಠ’ ಪ್ರಶಸ್ತಿ ಪಡೆದಿದ್ದರು. ಮಲೇಶ್ಯ ವಿರುದ್ಧದ ಪಂದ್ಯದಲ್ಲಿ ಆಲ್ರೌಂಡ್ ಪ್ರದರ್ಶನ ನೀಡಿ ‘ಪಂದ್ಯಶ್ರೇಷ್ಠ’ ಪ್ರಶಸ್ತಿ ಪಡೆದಿದ್ದರು.
ಟಿ-20 ವಿಶ್ವಕಪ್ ಕ್ವಾಲಿಫೈಯರ್ ಪಂದ್ಯದಲ್ಲಿ ನೆದರ್ಲ್ಯಾಂಡ್ಸ್ ವಿರುದ್ಧ ಔಟಾಗದೆ 66 ರನ್ ಗಳಿಸಿದ್ದರು. ಯುಎಇ ತಂಡವು ನಾಕೌಟ್ ಹಂತದಲ್ಲಿ ಸ್ಥಾನ ಪಡೆಯಲು ನೆರವಾಗಿದ್ದರು. ಅಬುಧಾಬಿಯಲ್ಲಿ ನಡೆದಿದ್ದ ಸೆಮಿ ಫೈನಲ್ನಲ್ಲಿ ಓಝಾ ಅವರು ಶ್ರೀಲಂಕಾ ತಂಡದ ವಿರುದ್ಧ 44 ಎಸೆತಗಳಲ್ಲಿ 66 ರನ್ ಗಳಿಸಿದ್ದರು.ಆದರೆ ಯುಎಇ ಕಡಿಮೆ ಅಂತರದಿಂದ ಸೋಲುಂಡಿತ್ತು.
ಟಿ-20 ಕ್ರಿಕೆಟ್ನಲ್ಲಿ 41.82ರ ಸರಾಸರಿಯಲ್ಲಿ ಒಂದು ಶತಕ ಹಾಗೂ 4 ಅರ್ಧಶತಕಗಳ ಸಹಿತ ಒಟ್ಟು 711 ರನ್ ಗಳಿಸಿದ್ದು, ಬೌಲಿಂಗ್ನಲ್ಲಿ 19.68ರ ಸರಾಸರಿಯಲ್ಲಿ ಒಟ್ಟು 16 ವಿಕೆಟ್ಗಳನ್ನು ಪಡೆದಿದ್ದರು.