ಯುರೋ ಚಾಂಪಿಯನ್ ಶಿಪ್ | ಫ್ರಾನ್ಸ್ ಗೆ ಸೋಲುಣಿಸಿ ಫೈನಲ್ ತಲುಪಿದ ಸ್ಪೇನ್
PC : PTI
ಮ್ಯೂನಿಚ್ : 2022ರ ವಿಶ್ವಕಪ್ ಫೈನಲಿಸ್ಟ್ ಫ್ರಾನ್ಸ್ ತಂಡವನ್ನು 2-1 ಅಂತರದಿಂದ ಸೋಲಿಸಿದ ಸ್ಪೇನ್ ತಂಡ ಯುರೋ ಚಾಂಪಿಯನ್ಶಿಪ್ ನಲ್ಲಿ ಫೈನಲ್ ಗೆ ಲಗ್ಗೆ ಇಟ್ಟಿದೆ.
ಬುಧವಾರ ಮ್ಯೂನಿಚ್ ಫುಟ್ಬಾಲ್ ಅರೆನಾದಲ್ಲಿ ನಡೆದ ಸೆಮಿ ಫೈನಲ್ ಪಂದ್ಯದಲ್ಲಿ ಆರಂಭಿಕ ಹಿನ್ನಡೆಯಿಂದ ಚೇತರಿಸಿಕೊಂಡ ಸ್ಪೇನ್ ತಂಡ 12 ವರ್ಷಗಳ ನಂತರ ಮೊದಲ ಬಾರಿ ಪ್ರಮುಖ ಪಂದ್ಯಾವಳಿಯಲ್ಲಿ ಪ್ರಶಸ್ತಿ ಸುತ್ತಿಗೇರಿದೆ.
ಭಾರತದ ಕಾಲಮಾನ ಸೋಮವಾರ ರಾತ್ರಿ 12:30ಕ್ಕೆ ನಡೆಯಲಿರುವ ಯುರೋ ಫೈನಲ್ ನಲ್ಲಿ ಸ್ಪೇನ್ ತಂಡವು ಮತ್ತೊಂದು ಸೆಮಿ ಫೈನಲ್ ನಲ್ಲಿ ಜಯಶಾಲಿಯಾಗುವ ನೆದರ್ಲ್ಯಾಂಡ್ಸ್ ಅಥವಾ ಇಂಗ್ಲೆಂಡ್ ತಂಡವನ್ನು ಎದುರಿಸಲಿದೆ.
ರ್ಯಾಂಡಲ್ ಕೊಲೊ 9ನೇ ನಿಮಿಷದಲ್ಲಿ ಗೋಲು ಗಳಿಸಿ ಫ್ರಾನ್ಸ್ ತಂಡಕ್ಕೆ 1-0 ಮುನ್ನಡೆ ಒದಗಿಸಿಕೊಟ್ಟರು. ಆದರೆ 21ನೇ ನಿಮಿಷದಲ್ಲಿ ಗೋಲು ದಾಖಲಿಸಿದ 16ರ ವಯಸ್ಸಿನ ಶಾಲಾ ಬಾಲಕ ಲ್ಯಾಮಿನ್ ಯಮಲ್ ಸ್ಕೋರನ್ನು ಸರಿಗಟ್ಟಲು ನೆರವಾದರು. ಮಾತ್ರವಲ್ಲ ಯುರೋ ಸ್ಪರ್ಧಾವಳಿಯ ಇತಿಹಾಸದಲ್ಲಿ ಗೋಲು ಗಳಿಸಿದ ಕಿರಿಯ ವಯಸ್ಸಿನ ಆಟಗಾರ ಎನಿಸಿಕೊಂಡು ಚಾರಿತ್ರಿಕ ಸಾಧನೆ ಮಾಡಿದರು.
ಸ್ಪೇನ್ನ ಡ್ಯಾನಿ ಒಲ್ಮೊ 25ನೇ ನಿಮಿಷದಲ್ಲಿ ಗೋಲು ಗಳಿಸಿ ಸ್ಪೇನ್ ತಂಡದ ಮುನ್ನಡೆಯನ್ನು 2-1ಗೆ ವಿಸ್ತರಿಸಿದರು. ಸ್ಪೇನ್ ಕೊನೆಯ ತನಕವೂ ಈ ಮುನ್ನಡೆಯನ್ನು ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಯಿತು.
ಸ್ಪೇನ್ ತಂಡವು ಒಂದೇ ಆವೃತ್ತಿಯ ಯುರೋಪಿಯನ್ ಚಾಂಪಿಯನ್ಶಿಪ್ ನಲ್ಲಿ ಆರು ಪಂದ್ಯಗಳನ್ನು ಜಯಿಸಿದ ಮೊದಲ ತಂಡ ಎನಿಸಿಕೊಂಡಿದೆ.