ನಾಳೆ ಯುರೋಪಿಯನ್ ಚಾಂಪಿಯನ್ ಶಿಪ್ ಫೈನಲ್ | ಪ್ರಶಸ್ತಿಗಾಗಿ ಸ್ಪೇನ್-ಇಂಗ್ಲೆಂಡ್ ಹೋರಾಟ

Photo : PTI
ಬರ್ಲಿನ್ : ಯುರೋ 2024 ಎಂದೇ ಕರೆಯಲ್ಪಡುವ 2024ರ ಯುಇಎಫ್ಎ ಯುರೋಪಿಯನ್ ಚಾಂಪಿಯನ್ ಶಿಪ್ ರೋಚಕ ಘಟ್ಟಕ್ಕೆ ತಲುಪಿದೆ. ಜರ್ಮನಿಯಲ್ಲಿ ತಿಂಗಳ ಕಾಲ ನಡೆದ ಟೂರ್ನಮೆಂಟ್ ನ ಫೈನಲ್ ಪಂದ್ಯವು ರವಿವಾರ ಸ್ಪೇನ್ ಹಾಗೂ ಇಂಗ್ಲೆಂಡ್ ನಡುವೆ ಬರ್ಲಿನ್ ನಲ್ಲಿ ನಡೆಯಲಿದೆ.
ಸ್ಪೇನ್ ಹಾಗೂ ಇಂಗ್ಲೆಂಡ್ ವಿಭಿನ್ನ ಹಾದಿಗಳಲ್ಲಿ ಫೈನಲ್ ಗೆ ತಲುಪಿವೆ. ಸ್ಪೇನ್ ತಂಡವು ಪಂದ್ಯಾವಳಿಯಲ್ಲಿ ಸ್ಥಿರ ಪ್ರದರ್ಶನ ನೀಡಿ ಅಜೇಯ ಗೆಲುವಿನ ದಾಖಲೆಯಿಂದ ಗಮನ ಸೆಳೆದಿದೆ. ಇದಕ್ಕೆ ತದ್ವಿರುದ್ಧವಾಗಿ ಇಂಗ್ಲೆಂಡ್ ತಂಡವು ತನ್ನ ಕೆಲವು ಸ್ಟಾರ್ ಆಟಗಾರರ ಪ್ರದರ್ಶನದ ಬಲದಿಂದ ಸತತ ಎರಡನೇ ಬಾರಿ ಯುರೋಪಿಯನ್ ಚಾಂಪಿಯಯನ್ಶಿಪ್ ನಲ್ಲಿ ಫೈನಲ್ ಗೆ ತಲುಪಿದೆ. ಇಂಗ್ಲೆಂಡ್ ತಂಡ ಗ್ರೂಪ್ ಹಂತದಲ್ಲಿ ಡೆನ್ಮಾರ್ಕ್ ಹಾಗೂ ಸ್ಲೊವೇನಿಯಾ ವಿರುದ್ದ ಡ್ರಾ ಸಾಧಿಸಿತ್ತು. ಸ್ವಿಟ್ಝರ್ಲ್ಯಾಂಡ್ ತಂಡವನ್ನು ಸೋಲಿಸಲು ಪೆನಾಲ್ಟಿ ಶೂಟೌಟ್ ಮೊರೆ ಹೋಗಿತ್ತು.
ಇಂಗ್ಲೆಂಡ್ ತಂಡ ನೆದರ್ಲ್ಯಾಂಡ್ಸ್ ವಿರುದ್ಧ ಸೆಮಿ ಫೈನಲ್ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿತ್ತು. ಸ್ಲೋವಾಕಿಯ ವಿರುದ್ಧ ಪ್ರಿ-ಕ್ವಾರ್ಟರ್ ಫೈನಲ್ನಲ್ಲಿ ಜೂಡ್ ಬೆಲ್ಲಿಂಗ್ಹ್ಯಾಮ್ 95ನೇ ನಿಮಿಷದಲ್ಲಿ ಗೋಲು ಗಳಿಸಿ ಸ್ಕೋರನ್ನು ಸಮಬಲಗೊಳಿಸಲು ನೆರವಾಗಿದ್ದರು. ಆಂಗ್ಲರು ಹೆಚ್ಚುವರಿ ಸಮಯದಲ್ಲಿ 2-1ರಿಂದ ಜಯ ಸಾಧಿಸಿದ್ದರು. ಸ್ವಿಟ್ಝರ್ಲ್ಯಾಂಡ್ ವಿರುದ್ಧ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಪೆನಾಲ್ಟಿ ಶೂಟೌಟ್ ಗೆಲುವಿನಲ್ಲೂ ತಂಡಕ್ಕೆ ಆಸರೆಯಾಗಿದ್ದರು. ನೆದರ್ಲ್ಯಾಂಡ್ಸ್ ವಿರುದ್ಧ ಸೆಮಿ ಫೈನಲ್ನಲ್ಲಿ ಒಲಿ ವಾಟ್ಕಿನ್ಸನ್ ಅವರು 90ನೇ ನಿಮಿಷದಲ್ಲಿ ಗೆಲುವಿನ ಗೋಲು ಗಳಿಸಿದ್ದರು. ಸ್ಟಾರ್ ಆಟಗಾರರ ಈ ಪ್ರದರ್ಶನವು ಇಂಗ್ಲೆಂಡ್ಗೆ 58 ವರ್ಷಗಳ ನಂತರ ಪ್ರಮುಖ ಟ್ರೋಫಿ ಗೆಲ್ಲುವ ವಿಶ್ವಾಸ ಮೂಡಿಸಿದೆ.
ಗೋಲ್ಕೀಪರ್ ಜೋರ್ಡನ್ ಪಿಕ್ಫೋರ್ಡ್ ಪಂದ್ಯಾವಳಿಯಲ್ಲಿ ಉತ್ತಮ ಪ್ರದರ್ಶನ ಮುಂದುವರಿಸಿದ್ದಾರೆ. ಬುಕಾಯೊ ಸಾಕಾ ಸ್ಥಿರ ಪ್ರದರ್ಶನ ನೀಡುತ್ತಿದ್ದು, ನೆದರ್ಲ್ಯಾಂಡ್ಸ್ ವಿರುದ್ಧ ಮೊದಲಾರ್ಧದಲ್ಲಿ ಗಮನಾರ್ಹ ನಿರ್ವಹಣೆ ತೋರಿದ್ದರು.
ಸ್ಪೇನ್ ತಂಡ ಪ್ರಸಕ್ತ ಯುರೋ ಕಪ್ನ ನಾಕೌಟ್ ಹಂತದಲ್ಲಿ ಆತಿಥೇಯ ಜರ್ಮನಿ ಹಾಗೂ ಪ್ರಶಸ್ತಿ ಫೇವರಿಟ್ ಫ್ರಾನ್ಸ್ ವಿರುದ್ಧ ಪಂದ್ಯ ಸಹಿತ ಎಲ್ಲ ಆರು ಪಂದ್ಯಗಳನ್ನು ಗೆದ್ದುಕೊಂಡು ಭರ್ಜರಿ ಫಾರ್ಮ್ನಲ್ಲಿದೆ. ಅತ್ಯಂತ ಹೆಚ್ಚು ಗೋಲುಗಳನ್ನು(13)ಗಳಿಸಿರುವ ಸ್ಪೇನ್ ಹೆಚ್ಚು ಅವಕಾಶಗಳನ್ನು(96)ಸೃಷ್ಟಿಸಿದೆ. ಆಕ್ರಮಣಕಾರಿ ಫುಟ್ಬಾಲ್ ಆಡುತ್ತಿದೆ.
ರೊಡ್ರಿ, ನಿಕೊ ವಿಲಿಯಮ್ಸ್ ಹಾಗೂ ಕಿರಿಯ ಆಟಗಾರ ಲಮಿನ್ ಯಮಲ್ ಸ್ಪೇನ್ನ ಪ್ರಮುಖ ಆಟಗಾರರಾಗಿದ್ದಾರೆ. ಇಂಗ್ಲೆಂಡ್ ತಂಡವು ಡ್ಯಾನಿ ಒಲ್ಮೊ ಅವರತ್ತ ಗಮನ ಹರಿಸಬೇಕಾಗಿದೆ. ಪೆಡ್ರೊ ಗಾಯಗೊಂಡಾಗ ಜರ್ಮನಿ ವಿರುದ್ಧ ಆಡುವ ಅವಕಾಶ ಪಡೆದಿದ್ದ ಒಲ್ಮೊ ಒಂದು ಗೋಲು ಗಳಿಸಿದ್ದಲ್ಲದೆ, ಮತ್ತೊಂದು ಗೋಲು ಗಳಿಸಲು ಸಹಕರಿಸಿದ್ದರು. ಆ ನಂತರ ಫ್ರಾನ್ಸ್ ವಿರುದ್ದ ಗೆಲುವಿನ ಗೋಲು ದಾಖಲಿಸಿದ್ದರು. ಬದಲಿ ಆಟಗಾರನಾಗಿದ್ದರೂ ಅಪೂರ್ವ ಪ್ರದರ್ಶನ ನೀಡಿದ್ದರು. ಒಲ್ಮೊ ಟೂರ್ನಮೆಂಟ್ನಲ್ಲಿ ಐದು ಗೋಲುಗಳ ಕಾಣಿಕೆ(ಮೂರು ಗೋಲು, ಎರಡು ಅಸಿಸ್ಟ್)ನೀಡಿದ್ದಾರೆ. ಸ್ಪೇನ್ ತಂಡದ ಯಶಸ್ಸಿನಲ್ಲಿ ನಿರ್ಣಾಯಕ ಪಾತ್ರವಹಿಸಿರುವ ರೊಡ್ರಿ ಸರಣಿಶ್ರೇಷ್ಠ ಪ್ರಶಸ್ತಿಯ ರೇಸ್ನಲ್ಲಿದ್ದಾರೆ. ಮ್ಯಾಂಚೆಸ್ಟರ್ ಸಿಟಿಯ ಮಿಡ್ಫೀಲ್ಡರ್ ರೊಡ್ರಿ ಉತ್ತಮ ಪ್ರದರ್ಶನ ನೀಡಿದರೆ ಸ್ಪೇನ್ ಗೆಲ್ಲುವ ಸಾಧ್ಯತೆಯಿದೆ.
ಕ್ರೊಯೇಶಿಯ ವಿರುದ್ಧ 3-0 ಅಂತರದ ಗೆಲುವಿನೊಂದಿಗೆ ಶುಭಾರಂಭ ಮಾಡಿರುವ ಸ್ಪೇನ್ ತಂಡ ಫೈನಲ್ನಲ್ಲಿ ಪ್ರಶಸ್ತಿ ಗೆಲ್ಲುವ ಫೇವರಿಟ್ ತಂಡವಾಗಿ ಹೊರಹೊಮ್ಮಿದೆ.
ತನ್ನ ಎದುರಾಳಿಗೆ ಹೋಲಿಸಿದರೆ ಸ್ಪೇನ್ ತಂಡವು ಪಂದ್ಯಾವಳಿಯುದ್ದಕ್ಕೂ ಉತ್ತಮ ಪ್ರದರ್ಶನ ನೀಡಿದೆ. ಐದನೇ ಬಾರಿ ಯುರೋ ಕಪ್ನಲ್ಲಿ ಫೈನಲ್ಗೆ ತಲುಪಿದೆ. ಸ್ಪೇನ್ ತಂಡ ಸ್ಥಿರ ಪ್ರದರ್ಶನದ ಮೂಲಕ ಇಂಗ್ಲೆಂಡ್ನ ಪ್ರಶಸ್ತಿ ಆಕಾಂಕ್ಷೆಗೆ ಪ್ರಮುಖ ಸವಾಲಾಗಿ ಪರಿಣಮಿಸಿದೆ.
ವಿಶ್ವಕಪ್ ಇಲ್ಲವೇ ಯುರೋಸ್ನಲ್ಲಿ ಹಿಂದಿನ 6 ಫೈನಲ್ ಪಂದ್ಯಗಳಲ್ಲಿ ಮೊದಲ ಸೆಮಿ ಫೈನಲ್ನಲ್ಲಿ ಜಯಶಾಲಿಯಾಗಿದ್ದ ತಂಡವೇ ಫೈನಲ್ನಲ್ಲಿ ಗೆದ್ದಿದೆ.
ಪ್ರತಿಷ್ಟಿತ ಗೋಲ್ಡನ್ ಬೂಟ್ ಪ್ರಶಸ್ತಿಯನ್ನು ಪಂದ್ಯಾವಳಿಯಲ್ಲಿ ಗರಿಷ್ಠ ಗೋಲ್ಸ್ಕೋರರ್ಗೆ ನೀಡಲಾಗುತ್ತದೆ. ಫೈನಲ್ಗಿಂತ ಮೊದಲು ತಲಾ 3 ಗೋಲುಗಳನ್ನು ಗಳಿಸಿರುವ ಇಂಗ್ಲೆಂಡ್ ನಾಯಕ ಹ್ಯಾರಿ ಕೇನ್ ಹಾಗೂ ಸ್ಪೇನ್ನ ಡ್ಯಾನಿ ಒಲ್ಮೊ ಅವರು ಗೋಲ್ಡನ್ ಬೂಟ್ ಸ್ಪರ್ಧೆಯಲ್ಲಿದ್ದಾರೆ.
ಪಂದ್ಯದ ಸಮಯ: ಜುಲೈ 15, ರಾತ್ರಿ 12:30(ಭಾರತದ ಕಾಲಮಾನ)