ಆಸ್ಟ್ರೇಲಿಯಾ ವಿರುದ್ಧ ಭರ್ಜರಿ ಜಯದ ಬಳಿಕವೂ ಅಗ್ರ-4ರಲ್ಲಿ ಸ್ಥಾನ ಪಡೆಯದ ಭಾರತ!
Photo: twitter.com/pankajbhatta
ಚೆನ್ನೈ: ವಿಶ್ವಕಪ್ ಅಭಿಯಾನದ ತನ್ನ ಮೊದಲ ಪಂದ್ಯದಲ್ಲಿ ಭಾರತ, ಹಲವು ಬಾರಿಯ ಚಾಂಪಿಯನ್ ಆಸ್ಟ್ರೇಲಿಯಾವನ್ನು 6 ವಿಕೆಟ್ ಅಂತರದಿಂದ ಸದೆಬಡಿದರೂ, ಅಂಕ ಪಟ್ಟಿಯಲ್ಲಿ ಅಗ್ರ 4 ಸ್ಥಾನ ಪಡೆಯಲು ವಿಫಲವಾಗಿದೆ. ಭಾರತದ ಸ್ಪಿನ್ ದಾಳಿಗೆ ತತ್ತರಿಸಿದ ಆಸ್ಟ್ರೇಲಿಯಾ 199 ರನ್ ಗಳಿಗೆ ಆಲೌಟ್ ಆಗಿತ್ತು. ರೋಹಿತ್ ಶರ್ಮಾ, ಇಶಾನ್ ಕಿಶನ್ ಮತ್ತು ಶ್ರೇಯಸ್ ಅಯ್ಯರ್ ಶೂನ್ಯಕ್ಕೆ ಔಟ್ ಆಗುವ ಮೂಲಕ ಭಾರತದ ಪಾಳಯದಲ್ಲೂ ಆತಂಕ ಮೂಡಿತ್ತು.
ವಿರಾಟ್ ಕೊಹ್ಲಿ (85) ಮತ್ತು ಕೆ.ಎಲ್.ರಾಹುಲ್ (ನಾಟೌಟ್ 97) ಅವರ 150 ರನ್ ಗಳ ಜತೆಯಾಟದ ಮೂಲಕ 41.2 ಓವರ್ ಗಳಲ್ಲಿ ವಿಜಯದ ಗುರಿ ತಲುಪಿತ್ತು. ಆದರೂ ಮೊದಲ ಸುತ್ತಿನ ಪಂದ್ಯಗಳು ಮುಗಿದ ಬಳಿಕ ರೋಹಿತ್ ಶರ್ಮಾ ನೇತೃತ್ವದ ಭಾರತೀಯ ದಂಡ ಐದನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ. ನ್ಯೂಜಿಲೆಂಡ್ ಅಗ್ರಸ್ಥಾನಿಯಾಗಿದ್ದು, ಪಾಕಿಸ್ತಾನ ಹಾಗೂ ಬಾಂಗ್ಲಾದೇಶ ಕ್ರಮವಾಗಿ ಮೂರು ಹಾಗೂ ನಾಲ್ಕನೇ ಸ್ಥಾನ ಅಲಂಕರಿಸಿದ್ದರೆ, ದಕ್ಷಿಣ ಆಫ್ರಿಕಾ ಎರಡನೇ ಸ್ಥಾನದಲ್ಲಿದೆ.
ಅಗ್ರ ಐದು ತಂಡಗಳು ತಲಾ ಎರಡು ಅಂಕಗಳನ್ನು ಪಡೆದಿದ್ದು, ರನ್ ರೇಟ್ ಆಧಾರದಲ್ಲಿ ಸ್ಥಾನ ಹಂಚಿಕೆಯಾಗಿದೆ. ನ್ಯೂಜಿಲೆಂಡ್ (+2.49), ದಕ್ಷಿಣ ಆಫ್ರಿಕಾ (+2.040), ಪಾಕಿಸ್ತಾನ (+1.62), ಬಾಂಗ್ಲಾದೇಶ (+1.438) ತಂಡಗಳು ಭಾರತ (0.883)ಕ್ಕಿಂತ ಉತ್ತಮ ರನ್ ರೇಟ್ ಹೊಂದಿವೆ. ಆಡಿದ ಪ್ರಥಮ ಪಂದ್ಯ ಸೋತಿರುವ ಆಸ್ಟ್ರೇಲಿಯಾ, ಅಫ್ಘಾನಿಸ್ತಾನ, ನೆದರ್ಲೆಂಡ್ಸ್, ಶ್ರೀಲಂಕಾ ಕ್ರಮವಾಗಿ ಆರು, ಏಳು, ಎಂಟು ಮತ್ತು ಒಂಬತ್ತನೇ ಸ್ಥಾನದಲ್ಲಿದ್ದರೆ, ಇಂಗ್ಲೆಂಡ್ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ.