ಆರ್ ಸಿ ಬಿ ಪ್ಲೇ-ಆಫ್ ಗೆ ಹೋಗಲು ಕೊಹ್ಲಿಯ ಫಾರ್ಮ್ ಮುಖ್ಯ: ಕೈಫ್
ಹೊಸದಿಲ್ಲಿ : ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಋತುವಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಪ್ಲೇ-ಆಫ್ ಹಂತಕ್ಕೆ ತಲುಪುವುದೇ ಎನ್ನುವುದು ವಿರಾಟ್ ಕೊಹ್ಲಿಯ ಫಾರ್ಮನ್ನು ಅವಲಂಬಿಸಿದೆ ಎಂದು ಮಾಜಿ ಕ್ರಿಕೆಟಿಗ ಮುಹಮ್ಮದ್ ಕೈಫ್ ಅಭಿಪ್ರಾಯಪಟ್ಟಿದ್ದಾರೆ.
ಇತ್ತೀಚೆಗೆ ಅಂತರ್ರಾಷ್ಟ್ರೀಯ ಕ್ರಿಕೆಟ್ ನಿಂದ ಹೊರಗಿದ್ದ ಬಳಿಕ, ಕೊಹ್ಲಿ ಐಪಿಎಲ್ ಗೆ ಮರಳುತ್ತಿರುವ ಹಿನ್ನೆಲೆಯಲ್ಲಿ ಕೈಫ್ ಈ ಹೇಳಿಕೆ ನೀಡಿದ್ದಾರೆ. ಭಾರತೀಯ ಕ್ರಿಕೆಟ್ ತಂಡದಲ್ಲಿ ಕೊಹ್ಲಿ ಕೊನೆಯ ಬಾರಿ ಆಡಿದ್ದು ಜನವರಿಯಲ್ಲಿ. ಅವರು ವೈಯಕ್ತಿಕ ಕಾರಣಗಳಿಗಾಗಿ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಿಂದ ಹೊರಗಿದ್ದರು. ಮಾರ್ಚ್ 22ರಂದು ಐಪಿಎಲ್ ಆರಂಭವಾಗಲಿದ್ದು, ಅದಕ್ಕೂ ಮುನ್ನ ಅವರು ಆರ್ ಸಿ ಬಿ ಯನ್ನು ಸೇರಲಿದ್ದಾರೆ ಎಂದು ನಿರೀಕ್ಷಿಸಲಾಗಿದೆ. ಈ ಬಾರಿಯ ಐಪಿಎಲ್ ಋತುವಿನ ಮೊದಲ ಪಂದ್ಯವು ಆರ್ ಸಿ ಬಿ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳ ನಡುವೆ ನಡೆಯಲಿದೆ.
ಕಳೆದ ಎರಡು ವರ್ಷಗಳಲ್ಲಿ ಕೊಹ್ಲಿ ಹೊಂದಿದ್ದ ಅತ್ಯುತ್ತಮ ಫಾರ್ಮ್ ಬಗ್ಗೆ ಸ್ಟಾರ್ ಸ್ಪೋರ್ಟ್ಸ್ ನ ‘ಗೇಮ್ ಪ್ಲ್ಯಾನ್’ ಕಾರ್ಯಕ್ರಮದಲ್ಲಿ ಕೈಫ್ ಮಾತನಾಡುತ್ತಿದ್ದರು. ಬ್ಯಾಟಿಂಗ್ ನಲ್ಲಿ ತಂಡಕ್ಕೆ ಮಹತ್ವದ ದೇಣಿಗೆಯನ್ನು ನೀಡುವ ಸಾಮರ್ಥ್ಯ ಕೊಹ್ಲಿಗಿದೆ ಎಂದು ಅವರು ಅಭಿಪ್ರಾಯಪಟ್ಟರು.
‘‘ವಿರಾಟ್ ಕೊಹ್ಲಿ ಒಂದೆರಡು ವರ್ಷಗಳಿಂದ ಅಮೋಘ ಕ್ರಿಕೆಟ್ ಆಡುತ್ತಿದ್ದಾರೆ. ಅವರು ಉತ್ತಮ ಫಾರ್ಮ್ನಲ್ಲಿ ಇದ್ದಾರೆ. ಕೊಹ್ಲಿಯಂಥ ಆಟಗಾರ ಫಾರ್ಮ್ನಲ್ಲಿರುವಾಗ, ಪ್ರತಿಯೊಂದು ಪಂದ್ಯದಲ್ಲಿ ರನ್ಗಳನ್ನು ಹೇಗೆ ಮಾಡಬೇಕು ಎನ್ನುವುದು ಅವರಿಗೆ ಗೊತ್ತು’’ ಎಂದು ಕೈಫ್ ನುಡಿದರು.
ಕೊಹ್ಲಿಯ ಅಮೋಘ ಐಪಿಎಲ್ ದಾಖಲೆಯನ್ನು ಉಲ್ಲೇಖಿಸಿದ ಅವರು, ಪಂದ್ಯಾವಳಿಯಲ್ಲಿ ಅವರ ಸ್ಥಿರ ನಿರ್ವಹಣೆಯತ್ತ ಗಮನ ಸೆಳೆದರು. 2023ರ ಋತುವಿನಲ್ಲಿ, ಅವರು 53.25ರ ಸರಾಸರಿಯಲ್ಲಿ 639 ರನ್ ಗಳನ್ನು ಕಲೆಹಾಕಿದ್ದಾರೆ.