ಫಿಫಾ ರ್ಯಾಂಕಿಂಗ್: ನಾಲ್ಕು ಸ್ಥಾನ ಕಳೆದುಕೊಂಡ ಭಾರತ
Photo: PTI
ಚೆನ್ನೈ: ಕಳೆದ ತಿಂಗಳು ಗುವಾಹಟಿಯಲ್ಲಿ ನಡೆದಿದ್ದ ವಿಶ್ವಕಪ್-2026ರ ಕ್ವಾಲಿಫೈಯರ್ ನ ಎರಡನೇ ಸುತ್ತಿನ ಪಂದ್ಯದಲ್ಲಿ ಅಫ್ಘಾನಿಸ್ತಾನದ ವಿರುದ್ಧ 1-2 ಅಂತರದಿಂದ ಸೋತಿದ್ದ ಭಾರತೀಯ ಪುರುಷರ ಫುಟ್ಬಾಲ್ ತಂಡವು ಹೊಸ ಫಿಫಾ ರ್ಯಾಂಕಿಂಗ್ ನಲ್ಲಿ 4 ಸ್ಥಾನಗಳನ್ನು ಕಳೆದುಕೊಂಡು 121ನೇ ಸ್ಥಾನಕ್ಕೆ ಕುಸಿದಿದೆ.
ಕಳೆದ ವರ್ಷ ಅಗ್ರ-100ರಲ್ಲಿ ಸ್ಥಾನ ಪಡೆದಿದ್ದ ಇಗೊರ್ ಸ್ಟಿಮ್ಯಾಕ್ ಕೋಚಿಂಗ್ ನಲ್ಲಿ ಪಳಗಿರುವ ಭಾರತ ಫುಟ್ಬಾಲ್ ತಂಡವು ಇಂಟರ್ಕಾಂಟಿನೆಂಟಲ್ ಕಪ್, ತ್ರಿರಾಷ್ಟ್ರಗಳ ಟೂರ್ನಮೆಂಟ್ ಹಾಗೂ ಸ್ಯಾಫ್ ಚಾಂಪಿಯನ್ಶಿಪ್ ಗಳನ್ನು ಜಯಿಸಿತ್ತು. ಆದರೆ ಆ ನಂತರ ತಂಡದ ಪ್ರದರ್ಶನದ ಮಟ್ಟ ಕುಸಿಯಲಾರಂಭಿಸಿತು. ಎರಡು ದಶಕಗಳ ನಂತರ ವಿದೇಶಿ ನೆಲದಲ್ಲಿ ವಿಶ್ವಕಪ್ ಕ್ವಾಲಿಫೈಯರ್ನಲ್ಲಿ ಕುವೈತ್ ವಿರುದ್ಧ ಭಾರತ ಜಯ ದಾಖಲಿಸಿದ್ದರೂ, ಖತರ್ನಲ್ಲಿ ನಡೆದಿದ್ದ ಎಎಫ್ಸಿ ಏಶ್ಯನ್ ಕಪ್ 2023ರಲ್ಲಿ ಕಳಪೆ ನಿರ್ವಹಣೆ ತೋರಿತ್ತು. ಅಲ್ಲಿ ಅದು ಒಂದೂ ಗೋಲನ್ನು ಗಳಿಸದೆ ಎಲ್ಲ ಪಂದ್ಯಗಳನ್ನು ಸೋತಿತ್ತು. ಕಾಂಟಿನೆಂಟಲ್ ಟೂರ್ನಮೆಂಟ್ನ ನಂತರ ಭಾರತ 15 ಸ್ಥಾನ ಕುಸಿತ ಕಂಡು 117ನೇ ಸ್ಥಾನ ತಲುಪಿತ್ತು.
ಮಾರ್ಚ್ನಲ್ಲಿ ಸುನೀಲ್ ಚೆಟ್ರಿ ನೇತೃತ್ವದ ಭಾರತ ತಂಡ ತನಗಿಂತ ಕೆಳ ರ್ಯಾಂಕಿನಲ್ಲಿರುವ ಅಫ್ಘಾನಿಸ್ತಾನ ತಂಡವನ್ನು ಮಣಿಸುವಲ್ಲಿ ವಿಫಲವಾಗಿತ್ತು. ಈ ಫಲಿತಾಂಶದ ನಂತರ ಅಭಿಮಾನಿಗಳು ಹಾಗೂ ರಾಷ್ಟ್ರೀಯ ಫುಟ್ಬಾಲ್ ತಂಡದ ಮಾಜಿ ಆಟಗಾರರು ಮುಖ್ಯ ಕೋಚ್ ವಿರುದ್ಧ ಆಕ್ರೋಶ ಹೊರಹಾಕಿದ್ದರು.