2031, 35ರ ಮಹಿಳಾ ಫಿಫಾ ವಿಶ್ವಕಪ್ ಗಳ ಆತಿಥ್ಯ ಅಮೆರಿಕ, ಇಂಗ್ಲೆಂಡ್ ಗೆ ?
ಬೆಲ್ಗ್ರೇಡ್: 2031 ಮತ್ತು 2035ರ ಆವೃತ್ತಿಯ ಫಿಫಾ ಮಹಿಳಾ ವಿಶ್ವಕಪ್ ಗಳ ಆತಿಥ್ಯವನ್ನು ಕ್ರಮವಾಗಿ ಅಮೆರಿಕ ಮತ್ತು ಬ್ರಿಟನ್ ದೇಶಗಳು ಪಡೆಯುವ ಸಾಧ್ಯತೆ ದಟ್ಟವಾಗಿದೆ.
2031ರ ಪಂದ್ಯಾವಳಿಯನ್ನು ಏರ್ಪಡಿಸುವ ಇಚ್ಛೆಯನ್ನು ವ್ಯಕ್ತಪಡಿಸಿ ಅಮೆರಿಕ ಸಲ್ಲಿಸಿರುವ ಪ್ರಸ್ತಾವವನ್ನು ಫಿಫಾ ಸ್ವೀಕರಿಸಿದೆ ಎಂದು ಯರೋಪಿಯನ್ ಫುಟ್ಬಾಲ್ ಅಧಿಕಾರಿಗಳಿಗೆ ಫಿಫಾ ಅಧ್ಯಕ್ಷ ಜಿಯಾನಿ ಇನ್ಫ್ಯಾಂಟಿನೊ ತಿಳಿಸಿದರು. ಈ ಪಂದ್ಯಾವಳಿಯ ಆಯೋಜನೆಯಲ್ಲಿ ಮೆಕ್ಸಿಕೊ ಸೇರಿದಂತೆ ಕೊಂಕಾಕಾಪ್ ವಲಯದ ದೇಶಗಳು ಕೈಜೋಡಿಸುವ ಸಾಧ್ಯತೆಗಳಿವೆ ಎಂದು ಅವರು ನುಡಿದರು.
2035ರ ಪಂದ್ಯಾವಳಿಯ ಆಯೋಜನೆಗೆ ಫಿಫಾ ಕೇವಲ ಒಂದು ‘‘ಸರಿಯಾದ’’ ಬಿಡ್ಡನ್ನು ಮಾತ್ರ ಸ್ವೀಕರಿಸಿದೆ. ಈ ಬಿಡ್ ಇಂಗ್ಲೆಂಡ್ನಿಂದ ಬಂದಿದೆ ಎಂದು ಇನ್ಫ್ಯಾಂಟಿನೊ ತಿಳಿಸಿದರು.
‘‘2031 ಮತ್ತು 2035ರಲ್ಲಿ ಕೆಲವು ಶ್ರೇಷ್ಠ ದೇಶಗಳಲ್ಲಿ ಮಹಿಳಾ ವಿಶ್ವಕಪ್ ನಡೆಯುವ ಸಾಧ್ಯತೆಗಳು ಉಜ್ವಲವಾಗಿವೆ. ಇದು ಮಹಿಳಾ ಫುಟ್ಬಾಲ್ ಚಳವಳಿಯನ್ನು ಮತ್ತಷ್ಟು ತೀವ್ರಗೊಳಿಸುತ್ತದೆ’’ ಎಂದು ಫಿಫಾ ಅಧ್ಯಕ್ಷರು ನುಡಿದರು.
2027ರ ಫಿಫಾ ಮಹಿಳಾ ವಿಶ್ವಕಪ್ ನ ಆತಿಥ್ಯವನ್ನು ಬ್ರೆಝಿಲ್ ವಹಿಸಲಿದೆ.