ಫಿಫಾ ವಿಶ್ವಕಪ್: ನಾಳೆ ಭಾರತ-ಕುವೈತ್ ಅರ್ಹತಾ ಸುತ್ತಿನ ಪಂದ್ಯ
ಸುನೀಲ್ ಚೆಟ್ರಿಯ ಅಂತರರಾಷ್ಟ್ರೀಯ ವಿದಾಯ ಪಂದ್ಯ

PC : PTI
ಹೊಸದಿಲ್ಲಿ : ಭಾರತೀಯ ಫುಟ್ಬಾಲ್ ತಂಡವು ಗುರುವಾರ ಕುವೈತ್ ವಿರುದ್ಧ ಮಹತ್ವದ ಫಿಫಾ ವಿಶ್ವಕಪ್ ಅರ್ಹತಾ ಪಂದ್ಯವನ್ನು ಆಡಲಿದೆ. ಅದೇ ವೇಳೆ, ಇದು ಭಾರತೀಯ ಫುಟ್ಬಾಲ್ನ ತಾರೆ ಸುನೀಲ್ ಚೆಟ್ರಿಯ ಕೊನೆಯ ಅಂತರರಾಷ್ಟ್ರೀಯ ಪಂದ್ಯವೂ ಆಗಲಿದೆ.
ಈ ಪಂದ್ಯದಲ್ಲಿ ಭಾರತವು ಜಯ ಗಳಿಸಿದರೆ, ಅದು 2026ರ ಫಿಫಾ ವಿಶ್ವಕಪ್ ಗೆ ಮುನ್ನ ನಡೆಯಲಿರುವ ಮೂರನೇ ಸುತ್ತಿನ ಅರ್ಹತಾ ಪಂದ್ಯಕ್ಕೆ ಭಾರತವನ್ನು ಒಯ್ಯಬಹುದಾಗಿದೆ.
ಕುವೈತ್ ವಿರುದ್ಧದ ಎರಡನೇ ಹಂತದ ಅರ್ಹತಾ ಪಂದ್ಯವನ್ನು ಆಡುವಾಗ ನನ್ನ 19 ವರ್ಷಗಳ ಅಂತರರಾಷ್ಟ್ರೀಯ ಕ್ರೀಡಾ ಬದುಕು ಪೂರ್ಣಗೊಳ್ಳುತ್ತದೆ ಎಂದು ಚೆಟ್ರಿ ಇತ್ತೀಚೆಗೆ ಹೇಳಿದ್ದರು. ‘‘ಇದು ನನ್ನ ಕೊನೆಯ ಪಂದ್ಯ ಎನ್ನುವ ಕಾರಣಕ್ಕೆ ಮಹತ್ವ ಇರುವುದಿಲ್ಲ. ಅದರ ಬಗ್ಗೆ ಪದೇ ಪದೇ ಮಾತನಾಡಲು ನಾನು ಇಚ್ಛಿಸುವುದಿಲ್ಲ. ನಮ್ಮ ಮೂಲಕ ಆದ್ಯತೆ ಪಂದ್ಯವನ್ನು ಗೆಲ್ಲುವುದು. ಅದು ಸಲಭವಿಲ್ಲ, ಆದರೆ, ನಾವು ಸಿದ್ಧರಾಗಿದ್ದೇವೆ. ನಮಗೆ ಅಗಾಧ ಬೆಂಬಲವೂ ಇದೆ’’ ಎಂದು ಮಹತ್ವದ ಪಂದ್ಯಕ್ಕೆ ಮುನ್ನ ಮಾತನಾಡಿದ 39 ವರ್ಷದ ಸ್ಟ್ರೈಕರ್ ಹೇಳಿದರು.
‘‘ನಾವು ನಾಳೆ ಗೆದ್ದರೆ ಬಹುತೇಕ ಮುಂದಿನ ಅರ್ಹತಾ ಪಂದ್ಯಕ್ಕೆ ಅರ್ಹತೆ ಪಡೆಯುತ್ತೇವೆ. ದೇಶದಲ್ಲಿ ಮತ್ತು ಹೊರಗೆ ಐದು ಉನ್ನತ ಮಟ್ಟದ ಪಂದ್ಯಗಳು ನಡೆಯುತ್ತವೆ. ಆಗ ನಾನು ಉತ್ತಮ ಬಟ್ಟೆಗಳನ್ನು ಧರಿಸುತ್ತೇನೆ ಮತ್ತು ತಂಡವು ಎಲ್ಲೆಲ್ಲ ಹೋಗುತ್ತದೋ ಅಲ್ಲಿಗೆ ಹೋಗಿ ಪಂದ್ಯಗಳನ್ನು ನೋಡುತ್ತೇನೆ. ಈ ಕನಸಿನ ಬಗ್ಗೆ ನಾನು ಪ್ರತಿದಿನವೂ ಹುಡುಗರೊಂದಿಗೆ ಮಾತನಾಡುತ್ತೇನೆ’’ ಎಂದು ಚೆಟ್ರಿ ಹೇಳಿದರು.