ಫಿಫಾ ವಿಶ್ವಕಪ್ ವಿಜೇತ ಆಟಗಾರ ಪೌಲ್ ಪೋಗ್ಬಾಗೆ 4 ವರ್ಷ ನಿಷೇಧ
ಡೋಪಿಂಗ್ ಪರೀಕ್ಷೆಯಲ್ಲಿ ಅನುತ್ತೀರ್ಣ

ಪೌಲ್ ಪೋಗ್ಬಾ | Photo: NDTV
ಪ್ಯಾರಿಸ್, ಫೆ.29: ಇತ್ತೀಚೆಗೆ ಡೋಪಿಂಗ್ ಪರೀಕ್ಷೆಯಲ್ಲಿ ನಿಷೇಧಿತ ಉದ್ದೀಪನ ಮದ್ದು ಸೇವಿಸಿರುವುದು ಪತ್ತೆಯಾದ ಹಿನ್ನೆಲೆಯಲ್ಲಿ ಫ್ರಾನ್ಸ್ ಫುಟ್ಬಾಲ್ ತಂಡ ಹಾಗೂ ಜುವೆಂಟಸ್ ಎಫ್ಸಿಯ ಮಿಡ್ ಫೀಲ್ಡರ್ ಪೌಲ್ ಪೋಗ್ಬಾ ಅವರು ನಾಲ್ಕು ವರ್ಷಗಳ ಕಾಲ ನಿಷೇಧಕ್ಕೆ ಒಳಗಾಗಿದ್ದಾರೆ.
ನಿಷೇಧಿತ ವಸ್ತು ಟೆಸ್ಟೊಸ್ಟೆರಾನ್ ಸೇವಿಸಿರುವುದು ಪತ್ತೆಯಾದ ನಂತರ ಸೆಪ್ಟಂಬರ್ನಲ್ಲಿ ಇಟಲಿಯ ರಾಷ್ಟ್ರೀಯ ಡೋಪಿಂಗ್ ವಿರೋಧಿ ನ್ಯಾಯ ಮಂಡಳಿಯು ಪೋಗ್ಬಾರನ್ನು ತಾತ್ಕಾಲಿಕವಾಗಿ ಅಮಾನತುಗೊಳಿಸಿತ್ತು.
ಆಗಸ್ಟ್ 20ರಂದು ಉಡಿನೆಸ್ನಲ್ಲಿ ಜುವೆಂಟಸ್ ಸಿರೀ ಎ ಸೀಸನ್ನ ಆರಂಭಿಕ ಪಂದ್ಯ ಗೆದ್ದ ನಂತರ ನಡೆಸಿದ ಡೋಪಿಂಗ್ ಪರೀಕ್ಷೆಯಲ್ಲಿ ಕ್ರೀಡಾಪಟುಗಳ ಸಾಮರ್ಥ್ಯವನ್ನು ಹೆಚ್ಚಿಸುವ ಟೆಸ್ಟೋಸ್ಟೆರಾನ್ ಎಂಬ ಹಾರ್ಮೋನ್ ಪತ್ತೆಯಾಗಿತ್ತು. 30ರ ಹರೆಯದ ಪೋಗ್ಬಾ ಆ ಪಂದ್ಯದಲ್ಲಿ ಬದಲಿ ಆಟಗಾರನಾಗಿದ್ದರು.
ಅಕ್ಟೋಬರ್ನಲ್ಲಿ ನಡೆಸಿದ ಎರಡನೇ ಮಾದರಿಯ ಪರೀಕ್ಷೆಯಲ್ಲೂ ಪೋಗ್ಬಾ ಪಾಸಿಟಿವ್ ವರದಿ ಪಡೆದಿದ್ದರು.
ಪೋಗ್ಬಾ ಇಟಲಿಯ ಡೋಪಿಂಗ್ ವಿರೋಧಿ ಏಜೆನ್ಸಿಗೆ ಮನವಿ ಮಾಡದಿರಲು ನಿರ್ಧರಿಸಿದರು. ಹೀಗಾಗಿ ದೇಶದ ಡೋಪಿಂಗ್ ವಿರೋಧಿ ನ್ಯಾಯಾಲಯದ ಮುಂದೆ ಪ್ರಕರಣವನ್ನು ವಿಚಾರಣೆ ನಡೆಸಲಾಯಿತು.
ಜುವೆಂಟಸ್ ಕ್ಲಬ್ ಈ ಕುರಿತು ಪ್ರತಿಕ್ರಿಯೆ ನೀಡಿಲ್ಲ. ಆದರೆ ನಾಲ್ಕು ವರ್ಷಗಳ ನಿಷೇಧದ ನಿರ್ಧಾರದ ಬಗ್ಗೆ ಕ್ಲಬ್ಗೆ ಸೂಚನೆ ನೀಡಲಾಗಿದೆ ಎಂದು ಮೂಲವೊಂದು ದೃಢಪಡಿಸಿದೆ.
ಪೋಗ್ಬಾ ಅವರು ಸ್ವಿಸ್ ಮೂಲದ ಕೋರ್ಟ್ ಆಫ್ ಆರ್ಬಿಟ್ರೇಶನ್ ಫಾರ್ ಸ್ಪೋರ್ಟ್ಗೆ ಈ ನಿರ್ಧಾರದ ಕುರಿತು ಮೇಲ್ಮನವಿ ಸಲ್ಲಿಸಬಹುದು.
ಫ್ರಾನ್ಸ್ ಆಟಗಾರ ಪೋಗ್ಬಾ ಮುಂದಿನ ತಿಂಗಳು 31ನೇ ವರ್ಷಕ್ಕೆ ಕಾಲಿಡಲಿದ್ದಾರೆ. ಈ ಶಿಕ್ಷೆಯು ಪೋಗ್ಬಾ ಅವರ ವೃತ್ತಿಜೀವನವನ್ನು ಕೊನೆಗಾಣಿಸಬಹುದು.
ವಿಶ್ವ ಡೋಪಿಂಗ್ ವಿರೋಧಿ ಸಂಹಿತೆಯ ಅಡಿಯಲ್ಲಿ ನಾಲ್ಕು ವರ್ಷಗಳ ನಿಷೇಧ ನಿಗದಿಪಡಿಸಲಾಗಿದೆ. ಆದರೆ ಕ್ರೀಡಾಪಟುಗಳು ಉದ್ದೀಪನ ಮದ್ದನ್ನು ಉದ್ದೇಶಪೂರ್ವಕವಾಗಿ ಸೇವಿಸಿಲ್ಲ ಎಂದು ಸಾಬೀತುಪಡಿಸಿದರೆ ಶಿಕ್ಷೆ ಪ್ರಮಾಣ ಕಡಿಮೆ ಮಾಡಬಹುದು.
2018ರ ವಿಶ್ವಕಪ್ ವಿಜೇತ ಆಟಗಾರನಾಗಿರುವ ಪೋಗ್ಬಾ ಮೊಣಕಾಲು ಹಾಗೂ ಮಂಡಿರಜ್ಜು ಗಾಯದಿಂದಾಗಿ ಕಳೆದ ಋತುವಿನಲ್ಲಿ ಆಡಿರಲಿಲ್ಲ. ಖತರ್ನಲ್ಲಿ ನಡೆದಿದ್ದ ವಿಶ್ವಕಪ್ನಲ್ಲಿ ಫ್ರಾನ್ಸ್ ತಂಡದಲ್ಲಿ ಅವರು ಸ್ಥಾನ ಪಡೆದಿರಲಿಲ್ಲ.