ಎಫ್ಐಎಚ್ ಹಾಕಿ ಸ್ಟಾರ್ ಪ್ರಶಸ್ತಿಗಳಿಗೆ ಹರ್ಮನ್ಪ್ರೀತ್, ಶ್ರೀಜೇಶ್ ನಾಮನಿರ್ದೇಶನ
ಹರ್ಮನ್ಪ್ರೀತ್ ಸಿಂಗ್ , ಶ್ರೀಜೇಶ್ | PC: PTI
ಚೆನ್ನೈ: ಭಾರತೀಯ ಹಾಕಿ ತಂಡದ ನಾಯಕ ಹರ್ಮನ್ಪ್ರೀತ್ ಸಿಂಗ್ ಅಂತರರಾಷ್ಟ್ರೀಯ ಹಾಕಿ ಫೆಡರೇಶನ್ನಿಂದ ಪುರುಷರ ವರ್ಷದ ಆಟಗಾರ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದಾರೆ. ಭಾರತದ ಮಾಜಿ ಗೋಲ್ಕೀಪರ್ ಪಿ.ಆರ್.ಶ್ರೀಜೇಶ್ ವರ್ಷದ ಗೋಲ್ ಕೀಪರ್ ಪ್ರಶಸ್ತಿಯ ಸ್ಪರ್ಧೆಯಲ್ಲಿದ್ದಾರೆ.
ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಭಾರತದ ಪ್ರದರ್ಶನದಲ್ಲಿ ಹರ್ಮನ್ಪ್ರೀತ್ ಹಾಗೂ ಶ್ರೀಜೇಶ್ ಇಬ್ಬರೂ ಪ್ರಮುಖ ಪಾತ್ರಗಳನ್ನು ವಹಿಸಿದ್ದರು. ಭಾರತವು ಒಲಿಂಪಿಕ್ಸ್ನಲ್ಲಿ ಸ್ಪೇನ್ ತಂಡವನ್ನು 2-1 ಅಂತರದಿಂದ ಮಣಿಸಿ ಕಂಚಿನ ಪದಕ ಜಯಿಸಿತ್ತು.
ಭಾರತದ ನಾಯಕ ಹರ್ಮನ್ ಪ್ರೀತ್ ಒಟ್ಟು 10 ಗೋಲುಗಳನ್ನು ಗಳಿಸಿ ಒಲಿಂಪಿಕ್ಸ್ನಲ್ಲಿ ಗರಿಷ್ಠ ಗೋಲ್ ಸ್ಕೋರರ್ ಎನಿಸಿಕೊಂಡಿದ್ದರು. ಈ ಪ್ರಶಸ್ತಿಗಾಗಿ ಥಿಯೆರಿ ಬ್ರಿಂಕ್ಮನ್(ನೆದರ್ಲ್ಯಾಂಡ್ಸ್), ಜೋಪ್ ಡಿ ಮೋಲ್(ನೆದರ್ಲ್ಯಾಂಡ್ಸ್), ಹ್ಯಾನ್ಸ್ ಮುಲ್ಲರ್(ಜರ್ಮನಿ)ಹಾಗೂ ಝಾಕ್ ವ್ಯಾಲೇಸ್(ಇಂಗ್ಲೆಂಡ್)ಅವರೊಂದಿಗೆ ಸ್ಪರ್ಧಿಸಲಿದ್ದಾರೆ.
ಶ್ರೀಜೇಶ್ ಒಲಿಂಪಿಕ್ಸ್ ನಲ್ಲಿ ಭಾರತದ ಪರ ಕೊನೆಯ ಪಂದ್ಯ ಆಡಿದ್ದರು. ಗ್ರೇಟ್ ಬ್ರಿಟನ್ ವಿರುದ್ಧ ಅಮಿತ್ ರೋಹಿದಾಸ್ ಕೆಂಪು ಕಾರ್ಡ್ ಪಡೆದು ಅಮಾನತುಗೊಂಡಾಗ ಭಾರತ 10 ಆಟಗಾರರೊಂದಿಗೆ ಆಡಿತ್ತು. ಆಗ ಶ್ರೀಜೇಶ್ ಗೋಲ್ ಪೋಸ್ಟ್ನಲ್ಲಿ ಬಂಡೆಯಂತೆ ನಿಂತಿದ್ದರು.
ಭಾರತವು ಪೆನಾಲ್ಟಿ ಶೂಟೌಟ್ನಲ್ಲಿ ಭಾರತವನ್ನು 4-2 ಅಂತರದಿಂದ ಮಣಿಸಿ ಸೆಮಿ ಫೈನಲ್ಗೆ ತಲುಪಿತ್ತು.
ಶ್ರೀಜೇಶ್ ಅವರು ಪಿರ್ಮಿನ್ ಬ್ಲಾಕ್(ನೆದರ್ಲ್ಯಾಂಡ್ಸ್), ಲೂಯಿಸ್ ಕಾಲ್ಚಾಡೊ(ಸ್ಪೇನ್), ಜೀನ್ ಪೌಲ್ ಡ್ಯಾನೆಬರ್ಗ್(ಜರ್ಮನಿ)ಹಾಗೂ ಥಾಮಸ್ ಸ್ಯಾಂಟಿಯಾಗೊ(ಅರ್ಜೆಂಟೀನ)ಅವರಿಂದ ಸ್ಪರ್ಧೆ ಎದುರಿಸುತ್ತಿದ್ದಾರೆ.