ಇಂಗ್ಲೆಂಡ್ ವಿರುದ್ಧ ಮೊದಲ ಏಕದಿನ | ವಿಶಿಷ್ಟ ಮೈಲಿಗಲ್ಲು ತಲುಪಿ ಇತಿಹಾಸ ನಿರ್ಮಿಸಿದ ಲ್ಯಾಬುಶೇನ್

ಮಾರ್ನಸ್ ಲ್ಯಾಬುಶೇನ್ | PC : PTI
ನಾಟಿಂಗ್ಹ್ಯಾಮ್ : ಒಂದೇ ಏಕದಿನ ಪಂದ್ಯದಲ್ಲಿ 50 ಪ್ಲಸ್ ರನ್, ಮೂರು ವಿಕೆಟ್ ಹಾಗೂ 4 ಕ್ಯಾಚ್ಗಳನ್ನು ಪಡೆದ ಮೊದಲ ಆಟಗಾರ ಎನಿಸಿಕೊಂಡಿರುವ ಆಸ್ಟ್ರೇಲಿಯದ ಮಾರ್ನಸ್ ಲ್ಯಾಬುಶೇನ್ ಕ್ರಿಕೆಟ್ ಇತಿಹಾಸದಲ್ಲಿ ವಿಶಿಷ್ಟ ಮೈಲಿಗಲ್ಲು ತಲುಪಿದರು.
ಇಂಗ್ಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದ ವೇಳೆ ಲ್ಯಾಬುಶೇನ್ ಈ ಮಹತ್ವದ ಮೈಲಿಗಲ್ಲು ತಲುಪಿದರು.
ಇಂಗ್ಲೆಂಡ್ ಬ್ಯಾಟಿಂಗ್ ಮಾಡುವಾಗ 6 ಓವರ್ ಬೌಲಿಂಗ್ ಮಾಡಿದ್ದ ಲ್ಯಾಬುಶೇನ್ 39 ರನ್ಗೆ ಮೂರು ವಿಕೆಟ್ಗಳನ್ನು ಕಬಳಿಸಿದರು. ಬೆನ್ ಡಕೆಟ್, ಹ್ಯಾರಿ ಬ್ರೂಕ್ ಹಾಗೂ ಜೋಫ್ರಾ ಆರ್ಚರ್ ವಿಕೆಟ್ಗಳನ್ನು ಉರುಳಿಸಿದರು.
ಮೈದಾನದೊಳಗೆ ತನ್ನ ಫೀಲ್ಡಿಂಗ್ ಪರಾಕ್ರಮ ಪ್ರದರ್ಶಿಸಿದ ಲ್ಯಾಬುಶೇನ್ ಅವರು ಡಕೆಟ್, ಬ್ರೂಕ್, ಜೇಕಬ್ ಬೆಥೆಲ್ ಹಾಗೂ ಆದಿಲ್ ರಶೀದ್ ನೀಡಿದ ಕ್ಯಾಚ್ಗಳನ್ನು ಪಡೆದರು.
ಬ್ಯಾಟಿಂಗ್ ವೇಳೆ ಲ್ಯಾಬುಶೇನ್ 61 ಎಸೆತಗಳನ್ನು ಎದುರಿಸಿ 7 ಬೌಂಡರಿ ಹಾಗೂ 2 ಸಿಕ್ಸರ್ಗಳ ಸಹಿತ 77 ರನ್ ಗಳಿಸಿದರು.
ಟಾಸ್ ಜಯಿಸಿದ ಇಂಗ್ಲೆಂಡ್ ಮೊದಲು ಬ್ಯಾಟಿಂಗ್ ಆಯ್ದುಕೊಂಡಿತು. ಬೆನ್ ಡಕೆಟ್(95 ರನ್, 91 ಎಸೆತ)ಹಾಗೂ ವಿಲ್ ಜಾಕ್ಸ್(62 ರನ್, 56 ಎಸೆತ)ಅರ್ಧಶತಕ ಸಿಡಿಸಿದರು. ಇತರ ಬ್ಯಾಟರ್ಗಳು ಉತ್ತಮ ಆರಂಭವನ್ನು ಸದುಪಯೋಗಪಡಿಸಿಕೊಳ್ಳುವಲ್ಲಿ ವಿಫಲರಾದರೆ, ಡಕೆಟ್ ಹಾಗೂ ಜಾಕ್ಸ್ 2ನೇ ವಿಕೆಟ್ಗೆ 120 ರನ್ ಜೊತೆಯಾಟ ನಡೆಸಿದ್ದಾರೆ.
ಹ್ಯಾರಿ ಬ್ರೂಕ್(39 ರನ್)ಹಾಗೂ ಜಾಕಬ್ ಬೆಥೆಲ್(35 ರನ್)ಉತ್ತಮ ಆರಂಭವನ್ನು ದೊಡ್ಡ ಮೊತ್ತವನ್ನಾಗಿಸುವಲ್ಲಿ ಎಡವಿದರು. ಒಂದು ಹಂತದಲ್ಲಿ 2 ವಿಕೆಟ್ಗೆ 213 ರನ್ ಗಳಿಸಿದ್ದ ಇಂಗ್ಲೆಂಡ್ ಅಂತಿಮವಾಗಿ 315 ರನ್ ಗಳಿಸಿತು.
ಆಸ್ಟ್ರೇಲಿಯದ ಪರ ಆಡಮ್ ಝಂಪಾ ಹಾಗೂ ಮಾರ್ನಸ್ ಲ್ಯಾಬುಶೇನ್ ತಲಾ 3 ವಿಕೆಟ್ಗಳನ್ನು ಪಡೆದರು. ಟ್ರಾವಿಸ್ ಹೆಡ್ 2 ವಿಕೆಟ್ ಕಬಳಿಸಿದರು. ಸ್ಪಿನ್ನರ್ಗಳು ಮ್ಯಾಥ್ಯೂ ಶಾರ್ಟ್ ಸಹಿತ 9 ವಿಕೆಟ್ಗಳನ್ನು ಪಡೆದಿದ್ದಾರೆ.
ಆಸ್ಟ್ರೇಲಿಯದ ರನ್ ಚೇಸ್ ವೇಳೆ ನಾಯಕ ಮಿಚೆಲ್ ಮಾರ್ಷ್ 10 ರನ್ ಗಳಿಸಿದರೆ, ಸ್ಟೀವ್ ಸ್ಮಿತ್ ಹಾಗೂ ಕ್ಯಾಮರೂನ್ ಗ್ರೀನ್ ತಲಾ 32 ರನ್ ಗಳಿಸಿದರು. ಆ ನಂತರ ಇನಿಂಗ್ಸ್ ಆಧರಿಸಿದ ಟ್ರಾವಿಸ್ ಹೆಡ್ ಔಟಾಗದೆ 154 ರನ್(129 ಎಸೆತ, 20 ಬೌಂಡರಿ, 5 ಸಿಕ್ಸರ್)ಗಳಿಸಿದರು. ಹೆಡ್ ಅವರು ಲ್ಯಾಬುಶೇನ್ ಜೊತೆಗೆ 148 ರನ್ ಜೊತೆಯಾಟದಲ್ಲಿ ಭಾಗಿಯಾದರು. ಆಸ್ಟ್ರೇಲಿಯವು ಕೇವಲ 44 ಓವರ್ಗಳಲ್ಲಿ 3 ವಿಕೆಟ್ ನಷ್ಟಕ್ಕೆ ಗುರಿಯನ್ನು ಯಶಸ್ವಿಯಾಗಿ ಚೇಸ್ ಮಾಡಿತು.
ಆಲ್ರೌಂಡ್ ಪ್ರದರ್ಶನ ನೀಡಿದ ಹೆಡ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.
ಈ ಗೆಲುವಿನ ಮೂಲಕ ಆಸ್ಟ್ರೇಲಿಯವು ಸದ್ಯ 1-0 ಮುನ್ನಡೆ ಪಡೆದಿದೆ.