ಮೊದಲ ಏಕದಿನ: ಆಸ್ಟ್ರೇಲಿಯ ವಿರುದ್ಧ ಭಾರತಕ್ಕೆ 5 ವಿಕೆಟ್ ಜಯ
ಶಮಿ ಅಮೋಘ ಬೌಲಿಂಗ್ ; ಶುಭಮನ್ ಗಿಲ್, ಋತುರಾಜ್ ಗಾಯಕ್ವಾಡ್, ರಾಹುಲ್, ಸೂರ್ಯಕುಮಾರ್ ಅರ್ಧಶತಕ
Photo; X\ @BCCI
ಮೊಹಾಲಿ : ಶುಭಮನ್ ಗಿಲ್(74 ರನ್), ಋತುರಾಜ್ ಗಾಯಕ್ವಾಡ್(71 ರನ್), ಕೆ.ಎಲ್.ರಾಹುಲ್(ಔಟಾಗದೆ 58) ಹಾಗೂ ಸೂರ್ಯಕುಮಾರ್ ಯಾದವ್(50 ರನ್)ಅರ್ಧಶತಕಗಳ ಕೊಡುಗೆಯ ನೆರವಿನಿಂದ ಭಾರತ ಕ್ರಿಕೆಟ್ ತಂಡ ಆಸ್ಟ್ರೇಲಿಯ ವಿರುದ್ಧ ಶುಕ್ರವಾರ ನಡೆದ ಮೊದಲ ಏಕದಿನ ಅಂತರ್ರಾಷ್ಟ್ರೀಯ ಪಂದ್ಯದಲ್ಲಿ 5 ವಿಕೆಟ್ಗಳ ಗೆಲುವು ದಾಖಲಿಸಿದೆ. ಈ ಮೂಲಕ 3 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.
ಗೆಲ್ಲಲು 277 ರನ್ ಗುರಿ ಪಡೆದಿದ್ದ ಆತಿಥೇಯರು 48.4 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 281 ರನ್ ಗಳಿಸಿದರು. ಇನಿಂಗ್ಸ್ ಆರಂಭಿಸಿದ ಗಾಯಕ್ವಾಡ್ ಹಾಗೂ ಗಿಲ್ ಮೊದಲ ವಿಕೆಟ್ಗೆ 142 ರನ್ ಗಳಿಸಿ ಭದ್ರ ಬುನಾದಿ ಹಾಕಿಕೊಟ್ಟರು. 185 ರನ್ಗೆ 4 ವಿಕೆಟ್ ಕಳೆದುಕೊಂಡಿದ್ದಾಗ ಜೊತೆಯಾದ ನಾಯಕ ರಾಹುಲ್ ಹಾಗೂ ಸೂರ್ಯಕುಮಾರ್ 5ನೇ ವಿಕೆಟ್ಗೆ 80 ರನ್ ಜೊತೆಯಾಟ ನಡೆಸಿ ಇನ್ನೂ 8 ಎಸೆತಗಳು ಬಾಕಿ ಇರುವಾಗಲೇ ತಂಡಕ್ಕೆ ಗೆಲುವು ತಂದುಕೊಟ್ಟರು. ಆಸ್ಟ್ರೇಲಿಯದ ಪರ ಸ್ಪಿನ್ನರ್ ಝಾಂಪ(2-57) ಎರಡು ವಿಕೆಟ್ ಪಡೆದರು.
ಇದಕ್ಕೂ ಮೊದಲು ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ್ದ ಆಸ್ಟ್ರೇಲಿಯ ಕ್ರಿಕೆಟ್ ತಂಡ ಆರಂಭಿಕ ಬ್ಯಾಟರ್ ಡೇವಿಡ್ ವಾರ್ನರ್(52 ರನ್, 53 ಎಸೆತ), ಜೋಶ್ ಇಂಗ್ಲಿಸ್(45 ರನ್, 45 ಎಸೆತ)ಹೋರಾಟಕಾರಿ ಇನಿಂಗ್ಸ್ ಹೊರತಾಗಿಯೂ ವೇಗದ ಬೌಲರ್ ಮುಹಮ್ಮದ್ ಶಮಿ(5-51) ಅಮೋಘ ಬೌಲಿಂಗ್ಗೆ ತತ್ತರಿಸಿ ನಿಗದಿತ 50 ಓವರ್ಗಳಲ್ಲಿ 276 ರನ್ ಗಳಿಸಿ ಆಲೌಟಾಗಿತ್ತು.