ಮೊದಲ ಟಿ-20: ಇಂಗ್ಲೆಂಡ್ ವಿರುದ್ಧ ಭಾರತ ಜಯಭೇರಿ

PC : X \ @DDIndialive
ಕೋಲ್ಕತಾ : ಎಡಗೈ ಸ್ಪಿನ್ನರ್ ವರುಣ್ ಚಕ್ರವರ್ತಿ(3-23)ನೇತೃತ್ವದ ಬೌಲರ್ಗಳ ಶಿಸ್ತುಬದ್ಧ ಬೌಲಿಂಗ್ ದಾಳಿ ಹಾಗೂ ಆರಂಭಿಕ ಬ್ಯಾಟರ್ ಅಭಿಷೇಕ್ ಶರ್ಮಾ(79 ರನ್, 34 ಎಸೆತ, 5 ಬೌಂಡರಿ, 8 ಸಿಕ್ಸರ್ ) ಅರ್ಧಶತಕದ ಕೊಡುಗೆಯ ನೆರವಿನಿಂದ ಮೊದಲ ಟಿ-20 ಪಂದ್ಯದಲ್ಲಿ ಟೀಮ್ ಇಂಡಿಯಾವು ಇಂಗ್ಲೆಂಡ್ ಕ್ರಿಕೆಟ್ ತಂಡವನ್ನು 7 ವಿಕೆಟ್ಗಳ ಅಂತರದಿಂದ ಸುಲಭವಾಗಿ ಮಣಿಸಿತು.
ಈ ಗೆಲುವಿನ ಮೂಲಕ 5 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಪಡೆಯಿತು. ಚೆನ್ನೈನಲ್ಲಿ ಜ.25ರಂದು 2ನೇ ಟಿ-20 ಪಂದ್ಯವನ್ನು ಆಡಲಿದೆ.
ಗೆಲ್ಲಲು 133 ರನ್ ಗುರಿ ಪಡೆದ ಭಾರತ ತಂಡವು 12.5 ಓವರ್ಗಳಲ್ಲಿ 3 ವಿಕೆಟ್ಗಳನ್ನು ಕಳೆದುಕೊಂಡು ಗುರಿ ತಲುಪಿತು.
ಭಾರತದ ಪರ ಸಂಜು ಸ್ಯಾಮ್ಸನ್(26 ರನ್, 20 ಎಸೆತ)ಹಾಗೂ ತಿಲಕ್ ವರ್ಮಾ(19 ರನ್, 16 ಎಸೆತ)ಎರಡಂಕೆಯ ಸ್ಕೋರ್ ಗಳಿಸಿದರು.
ಇದಕ್ಕೂ ಮೊದಲು ಬ್ಯಾಟಿಂಗ್ಗೆ ಇಳಿಸಲ್ಪಟ್ಟ ಇಂಗ್ಲೆಂಡ್ ತಂಡ ನಿಗದಿತ 20 ಓವರ್ಗಳಲ್ಲಿ ಕೇವಲ 132 ರನ್ ಗಳಿಸಿ ಆಲೌಟಾಯಿತು. ನಾಯಕ ಜೋಸ್ ಬಟ್ಲರ್ (68 ರನ್,44 ಎಸೆತ, 8 ಬೌಂಡರಿ, 2 ಸಿಕ್ಸರ್ )ಏಕಾಂಗಿ ಹೋರಾಟ ನೀಡಿದರು.
ಇಂಗ್ಲೆಂಡ್ ಇನಿಂಗ್ಸ್ನ 3ನೇ ಎಸೆತದಲ್ಲಿ ಮೊದಲ ವಿಕೆಟ್ ಕಳೆದುಕೊಂಡಿತು. ಸಾಲ್ಟ್ ಹಾಗೂ ಲಿವಿಂಗ್ಸ್ಟೋನ್ ಶೂನ್ಯಕ್ಕೆ ಔಟಾದರು. ಹ್ಯಾರಿ ಬ್ರೂಕ್(17)ಹಾಗೂ ಆರ್ಚರ್(12) ಎರಡಂಕೆ ದಾಟಿದರು.
ಅರ್ಷದೀಪ್ ಸಿಂಗ್(2-17)ಹಾಗೂ ಅಕ್ಷರ್ ಪಟೇಲ್(2-22)ತಲಾ ಎರಡು ವಿಕೆಟ್ಗಳನ್ನು ಪಡೆದರು. ಹಾರ್ದಿಕ್ ಪಾಂಡ್ಯ(2-42) ಎರಡು ವಿಕೆಟ್ ಪಡೆದರೂ ದುಬಾರಿ ಬೌಲರ್ ಎನಿಸಿಕೊಂಡರು. ರವಿ ಬಿಷ್ಣೋಯ್(0/22)ವಿಕೆಟ್ ಪಡೆಯುವಲ್ಲಿ ವಿಫಲರಾದರು.