ಮೊದಲ ಟೆಸ್ಟ್: ನ್ಯೂಝಿಲ್ಯಾಂಡ್ ವಿರುದ್ದ ಆಸ್ಟ್ರೇಲಿಯ 279/9
ಕ್ಯಾಮರೂನ್ ಗ್ರೀನ್ ಶತಕ
ಕ್ಯಾಮರೂನ್ ಗ್ರೀನ್ | Photo: PTI
ವೆಲ್ಲಿಂಗ್ಟನ್ : ಆಲ್ರೌಂಡರ್ ಕ್ಯಾಮರೂನ್ ಗ್ರೀನ್ ತನ್ನ ವೃತ್ತಿಜೀವನದಲ್ಲಿ ಗಳಿಸಿದ ಎರಡನೇ ಶತಕದ ಸಹಾಯದಿಂದ ಆಸ್ಟ್ರೇಲಿಯ ಕ್ರಿಕೆಟ್ ತಂಡ ಗುರುವಾರ ಆರಂಭವಾದ ಆತಿಥೇಯ ನ್ಯೂಝಿಲ್ಯಾಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಮೊದಲ ದಿನದಾಟದಲ್ಲಿ 9 ವಿಕೆಟ್ ಗಳ ನಷ್ಟಕ್ಕೆ 279 ರನ್ ಗಳಿಸಿದೆ.
ಬಾಸಿನ್ ರಿಸರ್ವ್ ಕ್ರೀಡಾಂಗಣದಲ್ಲಿ ಬ್ಯಾಟಿಂಗ್ಗೆ ಇಳಿಸಲ್ಪಟ್ಟ ಆಸ್ಟ್ರೇಲಿಯವು 89 ರನ್ ಗೆ 4 ವಿಕೆಟ್ ಗಳನ್ನು ಕಳೆದುಕೊಂಡು ಕಳಪೆ ಆರಂಭ ಪಡೆದಿತ್ತು. ಮಿಚೆಲ್ ಮಾರ್ಷ್(40 ರನ್)ಅವರೊಂದಿಗೆ ಕೈಜೋಡಿಸಿದ ಗ್ರೀಸ್ ಆಸ್ಟ್ರೇಲಿಯ ಇನಿಂಗ್ಸ್ ಗೆ ಶಕ್ತಿ ತುಂಬಿದರು.
ದಿಟ್ಟ ಪ್ರತಿರೋಧ ಒಡ್ಡಿದ 24ರ ಹರೆಯದ ಗ್ರೀನ್ ತನ್ನ 16ನೇ ಬೌಂಡರಿ ಗಳಿಸುವ ಮೂಲಕ ದಿನದಾಟದ ಕೊನೆಯ ಓವರ್ನಲ್ಲಿ ಶತಕ ಪೂರೈಸಿದರು. ದಿನದಾಟದಂತ್ಯಕ್ಕೆ ಔಟಾಗದೆ 103 ರನ್(155 ಎಸೆತ, 16 ಬೌಂಡರಿ) ಗಳಿಸಿದರು. ಜೋಶ್ ಹೇಝಲ್ವುಡ್ ಇನ್ನಷ್ಟೇ ರನ್ ಖಾತೆ ತೆರೆಯಬೇಕಾಗಿದೆ.
ನ್ಯೂಝಿಲ್ಯಾಂಡ್ ವೇಗದ ಬೌಲರ್ ಮ್ಯಾಟ್ ಹೆನ್ರಿ (4-43) ಅವರು ಸ್ಟೀವನ್ ಸ್ಮಿತ್, ಉಸ್ಮಾನ್ ಖ್ವಾಜಾ ಹಾಗೂ ಮಾರ್ಷ್ ವಿಕೆಟ್ ಗಳನ್ನು ಉರುಳಿಸಿದರು. ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ ಗ್ರೀನ್ ಮರು ಹೋರಾಟ ನೀಡಿದರು.
ಭೋಜನ ವಿರಾಮಕ್ಕೆ ಮೊದಲು ಹೆನ್ರಿ ಅವರು 31 ರನ್ ಗಳಿಸಿದ್ದ ಸ್ಮಿತ್ ವಿಕೆಟನ್ನು ಉರುಳಿಸಿದರು. ಖ್ವಾಜಾ 33 ರನ್ ಗಳಿಸಿ ಹೆನ್ರಿ ಬೌಲಿಂಗ್ನಲ್ಲಿ ಕ್ಲೀನ್ಬೌಲ್ಡಾದರು. ಮಾರ್ಷ್(40 ರನ್) ಹಾಗೂ ನಥಾನ್ ಲಿಯೊನ್ (5 ರನ್) ಕೂಡ ಹೆನ್ರಿಗೆ ವಿಕೆಟ್ ಒಪ್ಪಿಸಿದರು.
ಸ್ಕಾಟ್ ಕುಗ್ಗೆಲಿನ್ ಫಾರ್ಮ್ನಲ್ಲಿಲ್ಲದ ಆಟಗಾರ ಮಾರ್ನಸ್ ಲಾಬುಶೇನ್(1 ರನ್ ) ಹಾಗೂ ಅಲೆಕ್ಸ್ ಕಾರೆ(10 ರನ್)ವಿಕೆಟ್ ಗಳನ್ನು ಉರುಳಿಸಿದರು.
ಕಿವೀಸ್ನ ಉದಯೋನ್ಮುಖ ಸ್ಟಾರ್ ಬೌಲರ್ ವಿಲ್ ಒ ರೋರ್ಕಿ ಅವರು ಟ್ರಾವಿಸ್ ಹೆಡ್(1 ರನ್) ಹಾಗೂ ಮಿಚೆಲ್ ಸ್ಟಾರ್ಕ್(9 ರನ್)ವಿಕೆಟ್ ಗಳನ್ನು ಪಡೆದರು.
5ನೇ ವಿಕೆಟ್ ನಲ್ಲಿ 77 ಎಸೆತಗಳಲ್ಲಿ 67 ರನ್ ಜೊತೆಯಾಟದಲ್ಲಿ ಭಾಗಿಯಾದ ಮಾರ್ಷ್ ಹಾಗೂ ಗ್ರೀನ್ ಆಸ್ಟ್ರೇಲಿಯ ತಂಡವನ್ನು ಆಧರಿಸಿದರು.
ಟಾಸ್ ಸೋತು ಮೊದಲು ಬ್ಯಾಟಿಂಗ್ ಗೆ ಇಳಿಸಲ್ಪಟ್ಟ ಆಸ್ಟ್ರೇಲಿಯ ಕ್ರಿಕೆಟ್ ತಂಡಕ್ಕೆ ಮೊದಲ ವಿಕೆಟಿಗೆ 61 ರನ್ ಸೇರಿಸಿದ ಸ್ಮಿತ್ ಹಾಗೂ ಖ್ವಾಜಾ ಉತ್ತಮ ಆರಂಭ ಒದಗಿಸಿದರು.
ಡೇವಿಡ್ ವಾರ್ನರ್ ನಿವೃತ್ತಿಯಾಗಿರುವ ಕಾರಣ ಸತತ ಎರಡನೇ ಬಾರಿ ಟೆಸ್ಟ್ ಪಂದ್ಯದಲ್ಲಿ ಇನಿಂಗ್ಸ್ ಆರಂಭಿಸಿದ ಸ್ಮಿತ್ 71 ಎಸೆತಗಳನ್ನು ಎದುರಿಸಿ 4 ಬೌಂಡರಿ ಸಹಿತ 31 ರನ್ ಗಳಿಸಿದರು.
ನ್ಯೂಝಿಲ್ಯಾಂಡ್ ತಂಡ 2011ರ ನಂತರ ಮೊದಲ ಬಾರಿ ಆಸ್ಟ್ರೇಲಿಯ ವಿರುದ್ಧ ಟೆಸ್ಟ್ ಪಂದ್ಯ ಗೆಲ್ಲಲು ಎದುರು ನೋಡುತ್ತಿದೆ. ಈ ತಿಂಗಳು ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್ ಸರಣಿಯನ್ನು 2-0 ಅಂತರದಿಂದ ಗೆದ್ದುಕೊಂಡು ಕ್ಲೀನ್ ಸ್ವೀಪ್ ಮಾಡಿತ್ತು.