ಪ್ರಥಮ ಟೆಸ್ಟ್ ಕ್ರಿಕೆಟ್: ವೆಸ್ಟ್ ಇಂಡೀಸ್ ಗೆ ಹೀನಾಯ ಸೋಲು
Photo: Twitter (ANI)
ಹೊಸದಿಲ್ಲಿ: ವಿಶ್ವದ ಅಗ್ರ ಕ್ರಮಾಂಕದ ಬೌಲರ್ ರವಿಚಂದ್ರನ್ ಅಶ್ವಿನ್ ಮತ್ತೊಮ್ಮೆ ವೆಸ್ಟ್ ಇಂಡೀಸ್ ತಂಡದ ಬ್ಯಾಟಿಂಗ್ ಬೆನ್ನೆಲುಬು ಮುರಿದಿದ್ದಾರೆ.
ಅತಿಥೇಯ ವೆಸ್ಟ್ ಇಂಡೀಸ್ ವಿರುದ್ಧದ ಪ್ರಥಮ ಟೆಸ್ಟ್ ಪಂದ್ಯದ ಎರಡನೇ ಇನಿಂಗ್ಸ್ ನಲ್ಲೂ ಐದು ವಿಕೆಟ್ ಗಿಟ್ಟಿಸಿಕೊಂಡ ಸ್ಪಿನ್ ಮೋಡಿಗಾರ, ಭಾರತ ಒಂದು ಇನಿಂಗ್ಸ್ ಹಾಗೂ 141 ರನ್ ಗಳ ಭರ್ಜರಿ ವಿಜಯಗಳಿಸುವಲ್ಲಿ ಪ್ರಧಾನ ಪಾತ್ರ ವಹಿಸಿದರು.
ಐದು ವಿಕೆಟ್ ನಷ್ಟಕ್ಕೆ 421 ರನ್ ಗಳಾಗಿದ್ದಾಗ ಇನಿಂಗ್ಸ್ ಡಿಕ್ಲೇರ್ ಮಾಡಿಕೊಂಡ ಭಾರತ, ಎರಡನೇ ಇನಿಂಗ್ಸ್ ನಲ್ಲಿ ಕೆರೀಬಿಯನ್ ಬ್ಯಾಟ್ಸ್ ಮನ್ಗಳಿಂದ ಉತ್ತಮ ಸಾಧನೆಯ ನಿರೀಕ್ಷೆ ಇಟ್ಟುಕೊಂಡಿತ್ತು. ಆದರೆ ಕೇವಲ 50.3 ಓವರ್ಗಳಲ್ಲಿ 130 ರನ್ ಗಳಿಗೆ ಆಲೌಟ್ ಆಗುವ ಮೂಲಕ ಅತಿಥೇಯ ತಂಡ ಮೂರನೇ ದಿನವೇ ಪಂದ್ಯ ಮುಗಿಸಿತು.
ಕೇವಲ 21.3 ಓವರ್ಗಳಲ್ಲಿ 71 ರನ್ ಗಳಿಗೆ ಏಳು ವಿಕೆಟ್ ಕಿತ್ತು ಅಶ್ವಿನ್, ಟೆಸ್ಟ್ ಕ್ರಿಕೆಟ್ ನಲ್ಲಿ 33ನೇ ಬಾರಿ ಐದು ವಿಕೆಟ್ ಗಳನ್ನು ಪಡೆದರು. ಇದು ಅವರ ವೃತ್ತಿಜೀವನದ ಅತ್ಯುತ್ತಮ ಸಾಧನೆಯಾಗಿ ದಾಖಲಾಗಿದೆ. ಇವರ ಪರಿಣಾಮಕಾರಿ ಬೌಲಿಂಗ್ ಎದುರು ಪರದಾಡಿದ ವೆಸ್ಟ್ ಇಂಡೀಸ್ ಬ್ಯಾಟ್ಸ್ ಮ ನ್ಗಳು ಸ್ವಲ್ಪವೂ ಪ್ರತಿರೋಧ ನೀಡದೇ ಪೆವಿಲಿಯನ್ ಪರೇಡ್ ನಡೆಸಿದರು.
ಇದಕ್ಕೂ ಮುನ್ನ ಬೌಲರ್ ಗಳಿಗೆ ನೆರವಾಗುತ್ತಿದ್ದ ಪಿಚ್ ನಲ್ಲಿ ಅದ್ಭುತ ಪ್ರದರ್ಶನ ನೀಡಿದ ಯಶಸ್ವಿ ಜೈಸ್ವಾಲ್ (171) ಭಾರತಕ್ಕೆ ಆಧಾರಸ್ತಂಭ ಎನಿಸಿದರು. ಇವರಿಗೆ ಸಾಥ್ ನೀಡಿದ ವಿರಾಟ್ ಕೊಹ್ಲಿ ಎರಡು ಜೀವದಾನದ ಪ್ರಯೋಜನ ಪಡೆದು 182 ಎಸೆತಗಳಲ್ಲಿ 76 ರನ್ ಗಳಿಸಿದರು.
ಜುಲೈ 20 ರಿಂದ ಟ್ರಿನಿಡಾಡ್ ಪೋರ್ಟ್ ಆಫ್ ಸ್ಪೇನ್ ನಲ್ಲಿ ಎರಡನೇ ಹಾಗೂ ಅಂತಿಮ ಟೆಸ್ಟ್ ನಡೆಯಲಿದೆ. 2002ರಿಂದ ವಿಂಡೀಸ್ ನೆಲದಲ್ಲಿ ಭಾರತ ಒಂದು ಟೆಸ್ಟ್ ಪಂದ್ಯವನ್ನೂ ಸೋತಿಲ್ಲ. ಈ ಪಂದ್ಯವನ್ನೂ ಗೆಲ್ಲುವ ಮೂಲಕ ಕ್ಲೀನ್ ಸ್ವೀಪ್ ಸಾಧಿಸಿ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಗೆ ಅಂಕ ಕಲೆ ಹಾಕಲು ಭಾರತ ಸಜ್ಜಾಗಿದೆ.