ಮೊದಲ ಟೆಸ್ಟ್: ನ್ಯೂಝಿಲ್ಯಾಂಡ್ 255/4
ಟಾಮ್ ಲ್ಯಾಥಮ್, ವಿಲಿಯಮ್ಸನ್ ಅರ್ಧಶತಕ
PC : PTI
ಗಾಲೆ, ಸೆ.19: ಆರಂಭಿಕ ಬ್ಯಾಟರ್ ಟಾಮ್ ಲ್ಯಾಥಮ್(70 ರನ್, 111 ಎಸೆತ)ಹಾಗೂ ಕೇನ್ ವಿಲಿಯಮ್ಸನ್(55 ರನ್, 104 ಎಸೆತ)ಅರ್ಧಶತಕದ ಕೊಡುಗೆಯ ನೆರವಿನಿಂದ ಮೊದಲ ಟೆಸ್ಟ್ ಪಂದ್ಯದಲ್ಲಿ ನ್ಯೂಝಿಲ್ಯಾಂಡ್ ಕ್ರಿಕೆಟ್ ತಂಡ ಶ್ರೀಲಂಕಾದ ವಿರುದ್ಧ 4 ವಿಕೆಟ್ಗಳ ನಷ್ಟಕ್ಕೆ 255 ರನ್ ಗಳಿಸಿದೆ.
2ನೇ ದಿನದಾಟವಾದ ಗುರುವಾರ 7 ವಿಕೆಟ್ ನಷ್ಟಕ್ಕೆ 302 ರನ್ನಿಂದ ಮೊದಲ ಇನಿಂಗ್ಸ್ ಮುಂದುವರಿಸಿದ ಶ್ರೀಲಂಕಾ ತಂಡವನ್ನು ನ್ಯೂಝಿಲ್ಯಾಂಡ್ 305 ರನ್ಗೆ ನಿಯಂತ್ರಿಸಿತು. ವೇಗದ ಬೌಲರ್ ವಿಲಿಯಮ್ ಒರೂರ್ಕಿ(5-55)ಯಶಸ್ವಿ ಬೌಲರ್ ಎನಿಸಿಕೊಂಡರು. ಅಜಾಝ್ ಪಟೇಲ್(2-60) ಹಾಗೂ ಗ್ಲೆನ್ ಫಿಲಿಪ್ಸ್(2-52) ತಲಾ ಎರಡು ವಿಕೆಟ್ ಪಡೆದರು.
ಬ್ಯಾಟಿಂಗ್ ಆರಂಭಿಸಿದ ಕಿವೀಸ್ ಪರ ಕಾನ್ವೆ(17 ರನ್)ಹಾಗೂ ಲ್ಯಾಥಮ್ ಮೊದಲನೇ ವಿಕೆಟ್ಗೆ 63 ರನ್ ಸೇರಿಸಿದರು. ಕಾನ್ವೆ ಔಟಾದ ನಂತರ ವಿಲಿಯಮ್ಸನ್ ಹಾಗೂ ಲ್ಯಾಥಮ್ 2ನೇ ವಿಕೆಟ್ಗೆ ಇನ್ನೂ 73 ರನ್ ಸೇರಿಸಿದರು.
ವಿಲಿಯಮ್ಸನ್ ಹಾಗೂ ರಚಿನ್ ರವೀಂದ್ರ(39 ರನ್) 3ನೇ ವಿಕೆಟ್ಗೆ 51 ರನ್ ಜೊತೆಯಾಟ ನಡೆಸಿದರು.
ದಿನದಾಟದಂತ್ಯಕ್ಕೆ ಮಿಚೆಲ್(ಔಟಾಗದೆ 41) ಹಾಗೂ ಬ್ಲಂಡೆಲ್ (18 ರನ್) 5ನೇ ವಿಕೆಟ್ಗೆ ಮುರಿಯದ ಜೊತೆಯಾಟದಲ್ಲಿ 59 ರನ್ ಸೇರಿಸಿ ತಂಡದ ಮೊತ್ತವನ್ನು 250ರ ಗಡಿ ದಾಟಿಸಿದ್ದಾರೆ. ಕಿವೀಸ್ ಸದ್ಯ ಲಂಕಾ ಇನಿಂಗ್ಸ್ಗಿಂತ 50 ರನ್ ಹಿನ್ನಡೆಯಲ್ಲಿದೆ.
ಶ್ರೀಲಂಕಾದ ಪರ ಧನಂಜಯ ಡಿಸಿಲ್ವ (2-31)ಯಶಸ್ವಿ ಬೌಲರ್ ಎನಿಸಿಕೊಂಡರು.