ಮೊದಲ ಟೆಸ್ಟ್ | ಪಾಕಿಸ್ತಾನದ ವಿರುದ್ಧ ರೋಚಕ ಜಯ
ಡಬ್ಲ್ಯುಟಿಸಿ ಫೈನಲ್ಗೆ ದಕ್ಷಿಣ ಆಫ್ರಿಕಾ ಲಗ್ಗೆ, ಭಾರತದ ಅವಕಾಶ ಕ್ಷೀಣ
PC : NDTV
ಸೆಂಚೂರಿಯನ್: ಮೊದಲ ಟೆಸ್ಟ್ ಪಂದ್ಯದಲ್ಲಿ ಪಾಕಿಸ್ತಾನ ತಂಡದ ವಿರುದ್ಧ ರೋಚಕ ಜಯ ಸಾಧಿಸಿರುವ ದಕ್ಷಿಣ ಆಫ್ರಿಕಾ ತಂಡವು ವಿಶ್ವ ಟೆಸ್ಟ್ ಚಾಂಪಿಯನ್ಶಿಪ್(ಡಬ್ಲ್ಯುಟಿಸಿ)ಫೈನಲ್ನಲ್ಲಿ ಸ್ಥಾನ ಪಡೆದಿದೆ. ಈ ಹಿನ್ನೆಲೆಯಲ್ಲಿ ಫೈನಲ್ಗೆ ಪ್ರವೇಶಿಸುವ ಭಾರತದ ಅವಕಾಶ ಕ್ಷೀಣಿಸಿದೆ.
ಗೆಲ್ಲಲು 148 ರನ್ ಸುಲಭ ಗುರಿ ಪಡೆದಿದ್ದ ದಕ್ಷಿಣ ಆಫ್ರಿಕಾ ತಂಡವು ನಾಲ್ಕನೇ ದಿನವಾದ ರವಿವಾರ 8 ವಿಕೆಟ್ಗಳ ನಷ್ಟಕ್ಕೆ 150 ರನ್ ಗಳಿಸಿತು. ಇದರೊಂದಿಗೆ 2 ವಿಕೆಟ್ಗಳಿಂದ ರೋಚಕ ಗೆಲುವು ದಾಖಲಿಸಿ 2 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿತು.
ಈ ಗೆಲುವಿನೊಂದಿಗೆ ದಕ್ಷಿಣ ಆಫ್ರಿಕಾ ತಂಡವು 66.67 ಶೇ.ಅಂಕಗಳೊಂದಿಗೆ ಡಬ್ಲ್ಯುಟಿಸಿ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನ ಭದ್ರಪಡಿಸಿಕೊಂಡಿದೆ. ದಕ್ಷಿಣ ಆಫ್ರಿಕಾ ತಂಡವು 11 ಪಂದ್ಯಗಳಲ್ಲಿ 7ರಲ್ಲಿ ಜಯ ಸಾಧಿಸಿದೆ. ಮೂರನೇ ಆವೃತ್ತಿಯ ಡಬ್ಲ್ಯುಟಿಸಿ ಫೈನಲ್ನಲ್ಲಿ ಆಸ್ಟ್ರೇಲಿಯ ಅಥವಾ ಭಾರತ ತಂಡವನ್ನು ಎದುರಿಸಲಿದೆ.
ಭಾರತ ಮೊದಲೆರಡು ಆವೃತ್ತಿಯ ಫೈನಲ್ಸ್ಗಳಲ್ಲಿ ಆಡಿದೆ. ಸ್ವದೇಶದಲ್ಲಿ ನ್ಯೂಝಿಲ್ಯಾಂಡ್ ವಿರುದ್ಧ 0-3 ಅಂತರದಿಂದ ಹೀನಾಯ ಸೋಲು ಹಾಗೂ ಆಸ್ಟ್ರೇಲಿಯದ ವಿರುದ್ಧ ಅಡಿಲೇಡ್ ಓವಲ್ನಲ್ಲಿ ಡೇ-ನೈಟ್ ಟೆಸ್ಟ್ ಪಂದ್ಯ ಸೋತ ನಂತರ ಭಾರತ ತಂಡಕ್ಕೆ ಸತತ 3ನೇ ಬಾರಿ ಫೈನಲ್ಗೆ ತಲುಪುವ ಹಾದಿ ಕಠಿಣವಾಗಿತ್ತು.
3 ವಿಕೆಟ್ಗಳ ನಷ್ಟಕ್ಕೆ 27 ರನ್ನಿಂದ ಬ್ಯಾಟಿಂಗ್ ಮುಂದುವರಿಸಿದ ದಕ್ಷಿಣ ಆಫ್ರಿಕಾ ತಂಡವು ಆರಂಭಿಕ ಬ್ಯಾಟರ್ ಮರ್ಕ್ರಮ್(37 ರನ್) ವಿಕೆಟನ್ನು ಕಳೆದುಕೊಂಡಿತು. ಮರ್ಕ್ರಮ್ ನಿನ್ನೆಯ ಸ್ಕೋರ್ಗೆ 15 ರನ್ ಸೇರಿಸಿ ಔಟಾದರು. ನಾಯಕ ಟೆಂಬಾ ಬವುಮಾ 40 ರನ್ ಗಳಿಸಿ ಮುಹಮ್ಮದ್ ಅಬ್ಬಾಸ್ಗೆ ವಿಕೆಟ್ ಒಪ್ಪಿಸಿದಾಗ ಪಾಕಿಸ್ತಾನದ ಗೆಲುವಿನ ಆಸೆ ಚಿಗುರಿತು.
ಮಾರ್ಕೊ ಜಾನ್ಸನ್ ಹಾಗೂ ಕಾಗಿಸೊ ರಬಾಡ ಅವರು ಪಾಕಿಸ್ತಾನದ ಗೆಲುವಿನ ಆಸೆಗೆ ತಣ್ಣೀರೆರಚಿದರು. ಜಾನ್ಸನ್(ಔಟಾಗದೆ 16)ಗೆಲುವಿನ ರನ್ ದಾಖಲಿಸಿದರು. ರಬಾಡ ಔಟಾಗದೆ 31 ರನ್ ಗಳಿಸಿದರು.
ಶನಿವಾರ ಆರು ವಿಕೆಟ್ ಗೊಂಚಲು ಪಡೆದಿದ್ದ ಜಾನ್ಸನ್(6-52) ಅವರು ದಕ್ಷಿಣ ಆಫ್ರಿಕಾ ತಂಡ ಗೆಲ್ಲಲು 148 ರನ್ ಸುಲಭ ಸವಾಲು ಪಡೆಯುವಲ್ಲಿ ನೆರವಾಗಿದ್ದರು. 3ನೇ ದಿನದಾಟದಂತ್ಯಕ್ಕೆ ದಕ್ಷಿಣ ಆಫ್ರಿಕಾ ತಂಡ 27 ರನ್ಗೆ 3 ವಿಕೆಟ್ ಕಳೆದುಕೊಂಡಿದ್ದು, ಪಾಕಿಸ್ತಾನದ ವೇಗಿಗಳು ಗೆಲುವು ದಾಖಲಿಸುವ ವಿಶ್ವಾಸ ಮೂಡಿಸಿದ್ದರು.
3 ವರ್ಷಗಳ ನಂತರ ಟೆಸ್ಟ್ ಪಂದ್ಯ ಆಡಿರುವ ಅಬ್ಬಾಸ್ ಅವರು ಟೋನಿ ಡಿ ರೆರ್ಝಿ(2)ಹಾಗೂ ಟ್ರಿಸ್ಟನ್ ಸ್ಟಬ್ಸ್(1)ವಿಕೆಟ್ಗಳನ್ನು ಬೇಗನೆ ಉರುಳಿಸಿದರು. ಅಬ್ಬಾಸ್ 54 ರನ್ಗೆ 6 ವಿಕೆಟ್ಗಳನ್ನು ಪಡೆದರೂ ಇದು ಪಾಕ್ ತಂಡದ ಗೆಲುವಿಗೆ ಸಾಕಾಗಲಿಲ್ಲ.
ಪಾಕಿಸ್ತಾನದ 2ನೇ ಇನಿಂಗ್ಸ್ನಲ್ಲಿ ಸೌದ್ ಶಕೀಲ್(84 ರನ್)ಹಾಗೂ ಬಾಬರ್ ಆಝಮ್(50 ರನ್)ಅರ್ಧಶತಕ ಗಳಿಸಿದರು. ಆದರೆ ಪಾಕ್ ತಂಡವು 84 ರನ್ ಗಳಿಸುವಷ್ಟರಲ್ಲಿ 7 ವಿಕೆಟ್ಗಳನ್ನು ಕಳೆದುಕೊಂಡಿತು. ತನ್ನ 2ನೇ ಇನಿಂಗ್ಸ್ನಲ್ಲಿ 237 ರನ್ಗೆ ಆಲೌಟಾಯಿತು.
ಪಂದ್ಯದಲ್ಲಿ ಒಟ್ಟು 126 ರನ್ ಗಳಿಸಿದ ದಕ್ಷಿಣ ಆಫ್ರಿಕಾದ ಬ್ಯಾಟರ್ ಮರ್ಕ್ರಮ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.