ಮೊದಲ ಟೆಸ್ಟ್: ವಿಲಿಯಮ್ಸನ್ ಸತತ ಎರಡನೇ ಶತಕ, 500ರ ಗಡಿ ದಾಟಿದ ಕಿವೀಸ್ ಮುನ್ನಡೆ
ವಿಲಿಯಮ್ಸನ್ | Photo: NDTV
ಮೌಂಟ್ ಮೌಂಗ್ನುಯ್: ಮೊದಲ ಟೆಸ್ಟ್ ನ ಮೂರನೇ ದಿನವಾದ ಮಂಗಳವಾರ ಕೇನ್ ವಿಲಿಯಮ್ಸನ್ ಸತತ ಎರಡನೇ ಶತಕ ದಾಖಿಸಿದರು. ಈ ಮೂಲಕ ದಕ್ಷಿಣ ಆಫ್ರಿಕಾ ವಿರುದ್ಧ ನ್ಯೂಝಿಲ್ಯಾಂಡ್ ಗೆ 500ಕ್ಕೂ ಅಧಿಕ ರನ್ ಮುನ್ನಡೆ ಒದಗಿಸಿಕೊಟ್ಟರು.
ವಿಲಿಯಮ್ಸನ್ 109 ರನ್ ಹಾಗೂ ಇತರ ಬ್ಯಾಟರ್ಗಳ ಅಮೂಲ್ಯ ಕೊಡುಗೆಗಳ ನೆರವಿನಿಂದ ನ್ಯೂಝಿಲ್ಯಾಂಡ್ ತನ್ನ 2ನೇ ಇನಿಂಗ್ಸ್ನಲ್ಲಿ 4 ವಿಕೆಟ್ ನಷ್ಟಕ್ಕೆ 179 ರನ್ ಗಳಿಸಿದೆ. ತನ್ನ ಒಟ್ಟಾರೆ ಮುನ್ನಡೆಯನ್ನು 528ಕ್ಕೆ ವಿಸ್ತರಿಸಿದೆ.
ಡ್ಯಾರಿಲ್ ಮಿಚೆಲ್(11 ರನ್) ಹಾಗೂ ಟಾಮ್ ಬ್ಲಂಡೆಲ್(5 ರನ್)ಕ್ರೀಸ್ ಕಾಯ್ದುಕೊಂಡಿದ್ದಾರೆ. ಕಿವೀಸ್ ಬುಧವಾರ ಬೆಳಗ್ಗೆಯೇ ಇನಿಂಗ್ಸ್ ಡಿಕ್ಲೇರ್ ಮಾಡುವ ಸಾಧ್ಯತೆಯಿದೆ.
ಸೀನಿಯರ್ ಆಟಗಾರರ ಅನುಪಸ್ಥಿತಿಯಲ್ಲಿ ಅನನುಭವಿ ತಂಡವನ್ನು ಕಣಕ್ಕಿಳಿಸಿರುವ ದಕ್ಷಿಣ ಆಫ್ರಿಕಾವು ನ್ಯೂಝಿಲ್ಯಾಂಡ್ನ ಮೊದಲ ಇನಿಂಗ್ಸ್ ಮೊತ್ತ 511ಕ್ಕೆ ಉತ್ತರವಾಗಿ ತನ್ನ ಮೊದಲ ಇನಿಂಗ್ಸ್ ನಲ್ಲಿ ಕೇವಲ 162 ರನ್ ಗಳಿಸಿದೆ. 82 ರನ್ ಗೆ ಕೊನೆಯ ಆರು ವಿಕೆಟ್ ಗಳನ್ನು ಕಳೆದುಕೊಂಡಿತು. ಕೀಗನ್ ಪೀಟರ್ಸನ್ 45 ರನ್ ಗಳಿಸಿದರು. ನ್ಯೂಝಿಲ್ಯಾಂಡ್ ಪರ ಮ್ಯಾಟ್ ಹೆನ್ರಿ(3-31) ಹಾಗೂ ಮಿಚೆಲ್ ಸ್ಯಾಂಟ್ನರ್(3-34) ತಲಾ 3 ವಿಕೆಟ್ ಗಳನ್ನು ಪಡೆದರು.
ಕಿವೀಸ್ಗೆ ಫಾಲೋ-ಆನ್ ಹೇರುವ ಅವಕಾಶವಿದ್ದರೂ ಮತ್ತೊಮ್ಮೆ ಬ್ಯಾಟಿಂಗ್ ಮಾಡಿತು. ಹೀಗಾಗಿ ವಿಲಿಯಮ್ಸನ್ 31ನೇ ಟೆಸ್ಟ್ ಶತಕವನ್ನು ಪೂರೈಸಿದರು. ಒಂದೇ ಪಂದ್ಯದ ಎರಡೂ ಇನಿಂಗ್ಸ್ ಗಳಲ್ಲಿ ಮೊದಲ ಬಾರಿ ಶತಕ ಸಿಡಿಸಿದ ಸಾಧನೆ ಮಾಡಿದರು.
ವಿಲಿಯಮ್ಸನ್ ಅವರ ಆಕ್ರಮಣಕಾರಿ ಇನ್ನಿಂಗ್ಸ್ ನಲ್ಲಿ 12 ಬೌಂಡರಿ ಹಾಗೂ 1 ಸಿಕ್ಸರ್ ಇತ್ತು. ಕಿವೀಸ್ ನ ಮಾಜಿ ನಾಯಕ ವಿಲಿಯಮ್ಸನ್ 61 ರನ್ ಗಳಿಸಿದ್ದಾಗ ಎಡ್ವರ್ಡ್ ಮೂರ್ರಿಂದ ಜೀವದಾನ ಪಡೆದಿದ್ದರು.
ಓಪನರ್ ಲಥಾಮ್ ಬೇಗನೆ ಔಟಾದರು. ಆಗ ವಿಲಿಯಮ್ಸನ್ ಹಾಗೂ ಡೆವೊನ್ ಕಾನ್ವೇ(29ರನ್)2ನೇ ವಿಕೆಟ್ಗೆ 92 ರನ್ ಜೊತೆಯಾಟ ನಡೆಸಿದರು. ರಚಿನ್ ರವೀಂದ್ರ 12 ರನ್ ಗಳಿಸಿ ಬ್ರ್ಯಾಂಡ್ ಬೌಲಿಂಗ್ ಗೆ ವಿಕೆಟ್ ಒಪ್ಪಿಸಿದರು