ವಿಶ್ವಕಪ್ ನ ಮೊದಲ ವಾರದಲ್ಲೇ ರನ್ ಪ್ರವಾಹ, 11 ಆಟಗಾರರಿಂದ ಶತಕ
Photo : cricketworldcup
ಹೊಸದಿಲ್ಲಿ: ಭಾರತದಲ್ಲಿ ಈಗ ನಡೆಯುತ್ತಿರುವ ವಿಶ್ವಕಪ್ ಟೂರ್ನಿಯಲ್ಲಿ ಬುಧವಾರದ ತನಕ 9 ಪಂದ್ಯಗಳು ನಡೆದಿದ್ದು, ಬ್ಯಾಟರ್ಗಳು ಮೇಲುಗೈ ಸಾಧಿಸಿದ್ದಾರೆ. ಟೂರ್ನಿಯ ಮೊದಲ ವಾರದಲ್ಲಿ ನಡೆದಿರುವ ಕೇವಲ 9 ಲೀಗ್ ಹಂತದ ಪಂದ್ಯಗಳಲ್ಲಿ 7 ತಂಡಗಳ ಸುಮಾರು 11 ಆಟಗಾರರು ಶತಕ ಸಿಡಿಸಿದ್ದು ರನ್ ಪ್ರವಾಹ ಹರಿದಿದೆ. ಟೂರ್ನಿಯಲ್ಲಿ ಈಗಾಗಲೇ ಹಲವು ದಾಖಲೆಗಳು ಮೂಡಿಬಂದಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಮೈಲಿಗಲ್ಲು ದಾಖಲಾಗಬಹುದು.
ಈ ತನಕ 11 ಶತಕಗಳು ದಾಖಲಾಗಿದ್ದು, 1975(6), 1979(2), 1983(8) ಹಾಗೂ 1992(6)ಆವೃತ್ತಿಗಳ ವಿಶ್ವಕಪ್ ನಲ್ಲಿ ದಾಖಲಾಗಿದ್ದ ಗರಿಷ್ಠ ಶತಕ ದಾಖಲೆಯನ್ನು ಈಗಾಗಲೇ ಹಿಂದಿಕ್ಕಲಾಗಿದೆ. 1987 ಹಾಗೂ 1992ರ ಆವೃತ್ತಿಯ ವಿಶ್ವಕಪ್ ಗಳಲ್ಲಿ ತಲಾ 11 ಶತಕಗಳು ದಾಖಲಾಗಿದ್ದವು.
ವಿಶ್ವಕಪ್ ನ ಮೊದಲ 9 ಪಂದ್ಯಗಳನ್ನು ಲೆಕ್ಕಕ್ಕೆ ತೆಗೆದುಕೊಂಡರೆ 2023ರ ವಿಶ್ವಕಪ್ ನಲ್ಲಿ ದಾಖಲಾಗಿರುವ 11 ಶತಕಗಳು 13 ಆವೃತ್ತಿಗಳಲ್ಲೇ ಅಧಿಕವಾಗಿದೆ. 2003ರಲ್ಲಿ ಮೊದಲ 9 ಪಂದ್ಯಗಳಲ್ಲಿ 7 ಶತಕ ದಾಖಲಾಗಿದ್ದರೆ, 2011 ಹಾಗೂ 2015ರಲ್ಲಿ ತಲಾ 5 ಶತಕ ದಾಖಲಾಗಿತ್ತು.
* ದಿಲ್ಲಿ ಹಾಗೂ ಹೈದರಾಬಾದ್ ಬ್ಯಾಟರ್ಗಳ ಸ್ವರ್ಗ: ದಕ್ಷಿಣ ಆಫ್ರಿಕಾದ ಬ್ಯಾಟರ್ಗಳು ಶನಿವಾರ ನಡೆದ ವಿಶ್ವಕಪ್ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಮೂರು ಶತಕಗಳನ್ನು ಸಿಡಿಸಿದ್ದರು. ವಿಶ್ವಕಪ್ ನಲ್ಲಿ ಇದೇ ಮೊದಲ ಬಾರಿ ಇನಿಂಗ್ಸ್ ಒಂದರಲ್ಲಿ ಮೂವರು ಆಟಗಾರರು ಶತಕ ಸಿಡಿಸಿದ್ದರು. ಏಕದಿನ ಕ್ರಿಕೆಟ್ ನಲ್ಲಿ ಕೇವಲ 3 ಬಾರಿ ಈ ಸಾಧನೆ ಮಾಡಲಾಗಿದೆ. ಶ್ರೀಲಂಕಾ ಹಾಗೂ ಪಾಕಿಸ್ತಾನದ ಬ್ಯಾಟರ್ ಗಳು ಹೈದರಾಬಾದ್ ನಲ್ಲಿ ಮಂಗಳವಾರ ಒಂದು ಹೆಜ್ಜೆ ಮುಂದೆ ಹೋಗಿ ತಲಾ 2 ಶತಕಗಳನ್ನು ಸಿಡಿಸಿದರು. ವಿಶ್ವಕಪ್ ನಲ್ಲಿ ನಾಲ್ವರು ಆಟಗಾರರು ಶತಕ ಸಿಡಿಸಿದ್ದು ಇದೇ ಮೊದಲು. ಏಕದಿನ ಪಂದ್ಯದಲ್ಲಿ ನಾಲ್ವರು ಆಟಗಾರರು ಮೂರಂಕೆಯನ್ನು ದಾಟಿದ್ದು ಇದು ಮೂರನೇ ಸಲ.
ಅಬ್ದುಲ್ಲಾ ಶಫೀಕ್ ಹಾಗೂ ಮುಹಮ್ಮದ್ ರಿಝ್ವಾನ್ ಪಾಕಿಸ್ತಾನದ ದಾಖಲೆಯ ರನ್ ಚೇಸ್ನ ರೂವಾರಿಯಾಗಿದ್ದರು. ಡೆವೊನ್ ಕಾನ್ವೇ ಹಾಗೂ ರಚಿನ್ ರವೀಂದ್ರ ಇಂಗ್ಲೆಂಡ್ ವಿರುದ್ಧ ವಿಶ್ವಕಪ್ ನ ಆರಂಭಿಕ ಪಂದ್ಯದಲ್ಲಿ ಶತಕ ಸಿಡಿಸಿ ಸಂಭ್ರಮಿಸಿದ್ದರು. ಈ ಇಬ್ಬರು ತಮ್ಮ ಚೊಚ್ಚಲ ವಿಶ್ವಕಪ್ ಪಂದ್ಯದಲ್ಲಿ ಶತಕ ಸಿಡಿಸಿದ ಮೊದಲ ಜೋಡಿಯಾಗಿದ್ದಾರೆ.
* ವೇಗದ ಶತಕ: ಈ ತನಕ ಗಳಿಸಿರುವ 11 ಶತಕಗಳ ಪೈಕಿ 10 ಶತಕಗಳು 100 ಎಸೆತಗಳೊಳಗೆ ಬಂದಿವೆ. ಪುರುಷರ ಏಕದಿನ ವಿಶ್ವಕಪ್ ನ ಅಗ್ರ-7 ವೇಗದ ಶತಕಗಳಲ್ಲಿ ಮೂರನ್ನು ಈ ಬಾರಿ ಗಳಿಸಲಾಗಿದೆ. ಇದರಲ್ಲಿ ಐಡೆನ್ ಮಾರ್ಕ್ರಮ್ ಶತಕವೂ(ಶ್ರೀಲಂಕಾ ವಿರುದ್ಧ 49 ಎಸೆತ) ಸೇರಿದೆ. ರೋಹಿತ್ ಶರ್ಮಾ(63 ಎಸೆತ) ಹಾಗೂ ಕುಸಾಲ್ ಮೆಂಡಿಸ್(65 ಎಸೆತ)ಆರನೇ ಹಾಗೂ 7ನೇ ವೇಗದಲ್ಲಿ ಶತಕ ಗಳಿಸಿದ್ದಾರೆ. ಮಾರ್ಕ್ರಮ್, ರೋಹಿತ್ ಹಾಗೂ ಮೆಂಡಿಸ್ ತಮ್ಮ ದೇಶದ ಪರವಾಗಿ ವಿಶ್ವಕಪ್ ನಲ್ಲಿ ವೇಗದ ಶತಕ ದಾಖಲಿಸಿದ ಆಟಗಾರರಾಗಿದ್ದಾರೆ.
* ಆರು 300 ಪ್ಲಸ್ ಸ್ಕೋರ್: ಪ್ರಸಕ್ತ ವಿಶ್ವಕಪ್ ನಲ್ಲಿ ಈಗಾಗಲೇ ಆರು ಬಾರಿ 300ಕ್ಕೂ ಅಧಿಕ ರನ್ ಗಳಿಸಲಾಗಿದೆ. ದಕ್ಷಿಣ ಆಫ್ರಿಕಾವು ದಿಲ್ಲಿಯಲ್ಲಿ ಲಂಕಾದ ವಿರುದ್ಧ ಗರಿಷ್ಠ ರನ್(428/5)ಗಳಿಸಿದೆ.
ಇಂಗ್ಲೆಂಡ್ ನಲ್ಲಿ 2019ರ ವಿಶ್ವಕಪ್ ನಲ್ಲಿ 48 ಪಂದ್ಯಗಳಲ್ಲಿ 27 ಬಾರಿ 300ಕ್ಕೂ ಅಧಿಕ ರನ್ ದಾಖಲಾಗಿತ್ತು. ಅಫ್ಘಾನ್ ವಿರುದ್ಧ ಇಂಗ್ಲೆಂಡ್ ಗಳಿಸಿರುವ 6ಕ್ಕೆ 397 ರನ್ ಗರಿಷ್ಠ ಮೊತ್ತವಾಗಿತ್ತು.