ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಮಿಂಚುವ ಭರವಸೆಯಲ್ಲಿ ಭಾರತೀಯ ಮೂಲದ ವಿದೇಶಿ ಕ್ರೀಡಾಪಟುಗಳು
PC : Olympics.com
ಪ್ಯಾರಿಸ್: ಪ್ಯಾರಿಸ್ ನಲ್ಲಿ ನಡೆಯಲಿರುವ ಒಲಿಂಪಿಕ್ಸ್ ನಲ್ಲಿ ಭಾರತವನ್ನು ಒಂದಕ್ಕಿಂತ ಹೆಚ್ಚು ರೀತಿಯಲ್ಲಿ ಪ್ರತಿನಿಧಿಸಲಾಗುತ್ತದೆ. ಪ್ಯಾರಿಸ್ ಗೇಮ್ಸ್ ನಲ್ಲಿ ತಮ್ಮನ್ನು ದತ್ತುಪಡೆದ ದೇಶಗಳನ್ನು ಕೆಲವು ಭಾರತೀಯ ಮೂಲದ ಕ್ರೀಡಾಪಟುಗಳು ಪ್ರತಿನಿಧಿಸಲು ಸಜ್ಜಾಗಿದ್ದಾರೆ ಎಂದು ಪಿಟಿಐ ಸುದ್ದಿಸಂಸ್ಥೆ ವರದಿ ಮಾಡಿದೆ. ಅಂತಹ ಕ್ರೀಡಾಪಟುಗಳತ್ತ ಒಂದು ನೋಟ ಇಲ್ಲಿದೆ.
► ರಾಜೀವ್ ರಾಮ್(ಟೆನಿಸ್, ಅಮೆರಿಕ)
ರಾಜೀವ್ ರಾಮ್ ಪಟ್ಟಿಯಲ್ಲಿರುವ ಹೆಚ್ಚು ಪ್ರಸಿದ್ಧ ಕ್ರೀಡಾಪಟುವಾಗಿದ್ದಾರೆ. 40ರ ಹರೆಯದ ರಾಜೀವ್ ಅವರ ಹೆತ್ತವರು ಬೆಂಗಳೂರಿನಿಂದ ಅಮೆರಿಕಕ್ಕೆ ತೆರಳಿದ್ದು, ರಾಜೀವ್ ಅಮೆರಿಕದ ಡೆನ್ವರ್ನ್ನಲ್ಲಿ ಜನಿಸಿದ್ದರು. ರಾಮ್ ಅವರ ತಾಯಿ ಸುಷ್ಮಾ ಅವರು ವೈಜ್ಞಾನಿಕ ತಂತ್ರಜ್ಞರಾಗಿ ಉದ್ಯೋಗದಲ್ಲಿದ್ದರು. ಅವರ ತಂದೆ ಸಸ್ಯ ಶಾಸ್ತ್ರಜ್ಞ ರಾಘವ ಅವರು ಕ್ಯಾನ್ಸರ್ನಿಂದಾಗಿ 2019ರ ಎಪ್ರಿಲ್ನಲ್ಲಿ ನಿಧನರಾದರು. ರಾಮ್ ಅವರು ಟೆನಿಸ್ ಆಡುವ ನಿರ್ಧಾರ ತೆಗೆದುಕೊಂಡರು.
ನಾನು ಭಾರತೀಯ ಪರಂಪರೆಯನ್ನು ಹೊಂದಿದ್ದು, ಸಮುದಾಯವನ್ನು ಪ್ರತಿನಿಧಿಸಲು ಹೆಮ್ಮೆಪಡುತ್ತೇನೆ. ಟೆನಿಸ್ನಲ್ಲಿ ನಮ್ಮ ಸಮುದಾಯದವರು ಹೆಚ್ಚಿಲ್ಲ. ನಾವು ಸಾಧಿಸುವ ಯಾವುದೇ ಯಶಸ್ಸು ಮುಂದಿನ ಪೀಳಿಗೆಯನ್ನು ಪ್ರೇರೇಪಿಸುತ್ತದೆ ಎಂದು ರಾಜೀವ್ ಹೇಳಿದ್ದಾರೆ.
ರಾಜೀವ್ ಅಮೆರಿಕದ ಕ್ರೀಡಾಪಟುವಾಗಿ ಭಾರೀ ಯಶಸ್ಸು ಸಾಧಿಸಿದ್ದು ಟೆನಿಸ್ ಡಬಲ್ಸ್ನಲ್ಲಿ ಪರಿಣಿತರಾಗಿದ್ದಾರೆ. ನಾಲ್ಕು ಪುರುಷರ ಡಬಲ್ಸ್ ಹಾಗೂ ಒಂದು ಮಿಶ್ರ ಡಬಲ್ಸ್ ಗ್ರ್ಯಾನ್ಸ್ಲಾಮ್ ಅನ್ನು ಗೆದ್ದುಕೊಂಡಿದ್ದಾರೆ. ವೀನಸ್ ವಿಲಿಯಮ್ಸ್ ಜೊತೆಗೆ 2016ರ ರಿಯೋ ಒಲಿಂಪಿಕ್ಸ್ನಲ್ಲಿ ಮಿಶ್ರ ಡಬಲ್ಸ್ ಪ್ರಶಸ್ತಿ ಜಯಿಸಿದ್ದರು. ಈ ಬಾರಿ ಅವರು ಪುರುಷರ ಡಬಲ್ಸ್ ವಿಭಾಗದಲ್ಲಿ ಆಡಲಿದ್ದಾರೆ.
► ಪ್ರೀತಿಕಾ ಪವಾಡೆ(ಟೇಬಲ್ ಟೆನಿಸ್, ಫ್ರಾನ್ಸ್)
ಪ್ರೀತಿಕಾ ಅವರ ತಂದೆ ಪುದುಚೇರಿಯಲ್ಲಿ ಹುಟ್ಟಿ ಬೆಳೆದರು. 2003ರಲ್ಲಿ ವಿವಾಹವಾದ ನಂತರ ಪ್ಯಾರಿಸ್ಗೆ ತೆರಳಿದರು. 2004ರಲ್ಲಿ ಫ್ರೆಂಚ್ ರಾಜಧಾನಿ ಪ್ಯಾರಿಸ್ನಲ್ಲಿ ಪ್ರೀತಿಕಾ ಜನಿಸಿದರು. ಪ್ರೀತಿಕಾರ ತಂದೆ ಟೇಬಲ್ ಟೆನಿಸ್ ಆಟಗಾರನಾಗಿದ್ದರು. ಪ್ರೀತಿಕಾಳ ತಂದೆ ಆಕೆ ಆರು ವರ್ಷದವಳಿದ್ದಾಗ ಟೇಬಲ್ ಟೆನಿಸ್ಗೆ ಪರಿಚಯಿಸಿದರು.
ಪ್ರೀತಿಕಾ ಕೇವಲ 16ರ ವಯಸ್ಸಿನಲ್ಲಿ ಟೋಕಿಯೊದಲ್ಲಿ ತನ್ನ ಚೊಚ್ಚಲ ಒಲಿಂಪಿಕ್ ಗೇಮ್ಸ್ನಲ್ಲಿ ಆಡಿದ್ದರು. ಪರಿಸರ ವಿಜ್ಞಾನ ಹಾಗೂ ರಸಾಯನಶಾಸ್ತ್ರದಲ್ಲಿ ಅಧ್ಯಯನ ನಿರತರಾಗಿರುವ 19 ವರ್ಷ ವಯಸ್ಸಿನ ಪ್ರೀತಿಕಾ ಅವರು ಮಹಿಳೆಯರ ಸಿಂಗಲ್ಸ್, ಮಹಿಳೆಯರ ಡಬಲ್ಸ್ ಹಾಗೂ ಮಿಶ್ರ ಡಬಲ್ಸ್ ಪಂದ್ಯಾವಳಿಗಳಲ್ಲಿ 12ನೇ ಶ್ರೇಯಾಂಕವನ್ನು ಪಡೆದಿದ್ದಾರೆ.
► ಕನಕ್ ಝಾ (ಟೇಬಲ್ ಟೆನಿಸ್, ಅಮೆರಿಕ)
ಅಮೆರಿಕದ ಟೇಬಲ್ ಟೆನಿಸ್ ಆಟಗಾರ ಕನಕ್ ಝಾ ಅವರಯ ಪ್ಯಾರಿಸ್ ಗೇಮ್ಸ್ನಲ್ಲಿ ಸ್ಪರ್ಧಿಸುತ್ತಿರುವ ಭಾರತ ಮೂಲದ ಇನ್ನೋರ್ವ ಅತ್ಲೀಟ್ ಆಗಿದ್ದಾರೆ.
ಕನಕ್ ಅವರ ತಂದೆ ಕೋಲ್ಕತಾ ಹಾಗೂ ಪ್ರಯಾಗ್ರಾಜ್ನಲ್ಲಿ ಹುಟ್ಟಿಬೆಳೆದಿದ್ದು, ತಾಯಿ ಕರುಣಾ ಅವರು ಮುಂಬೈ ಮೂಲದವರು. ಈ ಇಬ್ಬರು ಐಟಿ ಉದ್ಯೋಗಿಗಳಾಗಿದ್ದಾರೆ.
ಕ್ಯಾಲಿಫೋರ್ನಿಯಾದ ಇಂಡಿಯಾ ಕಮ್ಯುನಿಟಿ ಸೆಂಟರ್ನಲ್ಲಿ ಟೇಬಲ್ ಟೆನಿಸ್ಗೆ ಆಕರ್ಷಿತರಾದ ಕನಕ್ ಅವರು ಟಿಟಿ ಆಟಗಾರ್ತಿಯಾಗಿರುವ ತನ್ನ ಸಹೋದರಿ ಪ್ರಾಚಿಯಂತೆ ಚಿಕ್ಕಂದಿನಿಂದಲೇ ಕ್ರೀಡೆ ಆಡಲು ಆರಂಭಿಸಿದರು.
24ರ ಹರೆಯದ ಕನಕ್ ಅವರು ಎರಡು ಒಲಿಂಪಿಕ್ಸ್(2020 ಹಾಗೂ 2016)ಗೇಮ್ಸ್ಗಳಲ್ಲಿ ಸ್ಪರ್ಧಿಸಿದ್ದು, ನಾಲ್ಕು ಬಾರಿ(2016, 2017, 2018, 2019)ಯು.ಎಸ್. ನ್ಯಾಶನಲ್ ಚಾಂಪಿಯನ್ಶಿಪ್ ಜಯಿಸಿದ್ದರು.
2016ರ ರಿಯೋ ಒಲಿಂಪಿಕ್ಸ್ನಲ್ಲಿ ಸ್ಪರ್ಧಿಸಿದ ಅಮೆರಿಕದ ಕಿರಿಯ ವಯಸ್ಸಿನ ಕ್ರೀಡಾಪಟುವಾಗಿದ್ದರು. 2018ರಲ್ಲಿ ಅರ್ಜೆಂಟೀನದಲ್ಲಿ ನಡೆದಿದ್ದ ಯೂತ್ ಒಲಿಂಪಿಕ್ಸ್ನಲ್ಲಿ ಮೊದಲ ಪದಕ ಜಯಿಸಿದ್ದರು. ಪ್ಯಾರಿಸ್ನಲ್ಲಿ ಪುರುಷರ ಸಿಂಗಲ್ಸ್ ಸ್ಪರ್ಧಾವಳಿಯಲ್ಲಿ ಆಡಲಿದ್ದಾರೆ.
► ಶಾಂತಿ ಪೆರೇರ(ಸಿಂಗಾಪುರ, ಅತ್ಲೆಟಿಕ್ಸ್)
ಸಿಂಗಾಪುರದ ಓಟದ ರಾಣಿ ಎಂದು ಕರೆಯಲ್ಪಡುವ ವೆರೋನಿಕಾ ಶಾಂತಿ ಪಿರೇರಾ ಮೂಲತಃ ಕೇರಳದವರು. ಆಕೆಯ ಅಜ್ಜ-ಅಜ್ಜಿಯಂದಿರು ತಿರುವನಂತಪುರ ಹತ್ತಿರದ ವೆಟ್ಟುಕಾಡ್ ಪಟ್ಟಣದವರು. ಶಾಂತಿಯ ಅಜ್ಜ ಸಿಂಗಾಪುರದಲ್ಲಿ ಉದ್ಯೋಗ ಗಿಟ್ಟಿಸಿಕೊಂಡ ನಂತರ ಭಾರತವನ್ನು ತೊರೆದಿದ್ದರು.
ಕಳೆದ ವರ್ಷ ಮಹಿಳೆಯರ 100 ಮೀ.ಟ್ರ್ಯಾಕ್ ಹಾಗೂ ಫೀಲ್ಡ್ನಲ್ಲಿ ಬೆಳ್ಳಿ ಪದಕವನ್ನು ಜಯಿಸಿದ್ದ ಪಿರೇರಾ ಸಿಂಗಾಪುರಕ್ಕೆ 49 ವರ್ಷಗಳ ನಂತರ ಕ್ರೀಡೆಯಲ್ಲಿ ಪದಕ ಗೆದ್ದುಕೊಟ್ಟಿದ್ದರು.
ಸಿಂಗಾಪುರದ ಕ್ರೀಡಾ ಪ್ರಶಸ್ತಿ ಸಮಾರಂಭದಲ್ಲಿ ವರ್ಷದ ಕ್ರೀಡಾಪಟು ಪ್ರಶಸ್ತಿಯನ್ನು ಗೆದ್ದಿರುವ ಶಾಂತಿ ಅವರ ಜೀವನಕಥೆಯನ್ನು ಆಧರಿಸಿ ಆಕೆಯ ಇಬ್ಬರು ಸಹೋದರಿಯರು ಗೋ ಶಾಂತಿ ಗೋ ಎಂಬ ಮಕ್ಕಳ ಪುಸ್ತಕವನ್ನು ಬರೆದಿದ್ದಾರೆ. ಪ್ಯಾರಿಸ್ನಲ್ಲಿ 100 ಮೀ. ಓಟದ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ.
► ಅಮರ್ವೀರ್ ಧೇಸಿ(ಕುಸ್ತಿ, ಕೆನಡಾ)
ಕೆನಡಾದ ಪಶ್ಚಿಮ ಕರಾವಳಿಯಲ್ಲಿರುವ ಒಂದು ಸಣ್ಣ ಪ್ರಾಂತ್ಯವಾದ ಬ್ರಿಟಿಷ್ ಕೊಲಂಬಿಯಾದ ಸರ್ರೆಯಲ್ಲಿ ಜನಿಸಿರುವ ಅಮರ್ವೀರ್ ಅವರ ತಂದೆ ಬಲ್ಬೀರ್ ಧೇಸಿ ಮಾಜಿ ಗ್ರೀಕೊ-ರೋಮ್ ನ್ಯಾಶನಲ್ ಚಾಂಪಿಯನ್ ಆಗಿದ್ದು, ಜಲಂದರ್ ಜಿಲ್ಲೆಯ ಸಂಘವಾಲ್ ಗ್ರಾಮದಲ್ಲಿ ಜನಿಸಿದ್ದರು. ಎನ್ಐಎಸ್ ಪಟಿಯಾಲದಲ್ಲಿ ತನ್ನ ತರಬೇತಿಯನ್ನು ಪೂರ್ಣಗೊಳಿಸಿದ ನಂತರ ಬಲ್ಬೀರ್ ಅವರು ಉತ್ತಮ ಅವಕಾಶ ಅರಸಿ 1979ರಲ್ಲಿ ಕೆನಡಾಕ್ಕೆ ತೆರಳಿದ್ದರು.
ಕೆನಡಾಕ್ಕೆ ತೆರಳಿದ ನಂತರ ಗರಗಸದ ಕಾರ್ಖಾನೆಯಲ್ಲಿ ಕೆಲಸ ಮಾಡಲು ಆರಂಭಿಸಿದರು. 1985ರಲ್ಲಿ ಯುವಕರಿಗಾಗಿ ಸರ್ರೆಯಲ್ಲಿ ಖಾಲ್ಸಾ ವ್ರೆಸ್ಲಿಂಗ್ ಕ್ಲಬ್ ಅನ್ನು ಸ್ಥಾಪಿಸಿದರು. ಐದು ವರ್ಷದವನಾಗಿದ್ದಾಗಲೇ ತನ್ನ ತಂದೆ ಹಾಗೂ ಅಣ್ಣ ಪರಮವೀರ್ ಜೊತೆಗೆ ಅಭ್ಯಾಸಕ್ಕೆ ಹೋಗಿದ್ದ ಅಮರ್ ತನ್ನ 8ನೇ ವಯಸ್ಸಿನಲ್ಲಿ ಮೊದಲ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.
ಲಂಡನ್ ಒಲಿಂಪಿಕ್ಸ್ನಲ್ಲಿ ಕಂಚಿನ ಪದಕ ವಿಜೇತ ಯೋಗೇಶ್ವರ ದತ್ತ ಅವರ ಕುಸ್ತಿ ಆಟವನ್ನು ನೋಡಿ ಆನಂದಿಸಿದ್ದ ಅಮರ್ 2020ರ ಟೋಕಿಯೊ ಗೇಮ್ಸ್ನಲ್ಲಿ ಒಲಿಂಪಿಕ್ಸ್ಗೆ ಕಾಲಿಟ್ಟಿದ್ದರು. ಪುರುಷರ 125 ಕೆಜಿ ಫ್ರೀಸ್ಟೈಲ್ ಸ್ಪರ್ಧಾವಳಿಯಲ್ಲಿ 13ನೇ ಸ್ಥಾನ ಪಡೆದಿದ್ದರು.
ಒಂದು ವರ್ಷದ ನಂತರ ಪಾನ್ ಅಮೆರಿಕನ್ ಚಾಂಪಿಯನ್ಶಿಪ್ನಲ್ಲಿ ತನ್ನ ಮೊದಲ ಸೀನಿಯರ್ ಮಟ್ಟದ ಚಿನ್ನದ ಪದಕ ಜಯಿಸಿದ್ದರು. 2022ರಲ್ಲಿ ಬರ್ಮಿಂಗ್ಹ್ಯಾಮ್ನಲ್ಲಿ ನಡೆದಿದ್ದ ಕಾಮನ್ವೆಲ್ತ್ ಗೇಮ್ಸ್ನಲ್ಲಿ 125 ಕೆಜಿ ವಿಭಾಗದಲ್ಲಿ ಚಿನ್ನದ ಪದಕ ಗೆದ್ದುಕೊಂಡಿದ್ದರು. 28ರ ಹರೆಯದ ಅಮರ್ ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಪುರುಷರ ಫ್ರೀಸ್ಟೈಲ್ 125 ಕೆಜಿ ಸ್ಪರ್ಧಾವಳಿಯಲ್ಲಿ ಭಾಗವಹಿಸಲು ಸಜ್ಜಾಗಿದ್ದಾರೆ.