ಭಾರತದ ಮಾಜಿ ಕ್ರಿಕೆಟಿಗ ಸಯ್ಯದ್ ಅಬಿದ್ ಅಲಿ ನಿಧನ

ಸಯ್ಯದ್ ಅಬಿದ್ ಅಲಿ | PC : thehindu.com
ಮುಂಬೈ: ಭಾರತದ ಮಾಜಿ ಕ್ರಿಕೆಟಿಗ ಸಯ್ಯದ್ ಅಬಿದ್ ಅಲಿ ಬುಧವಾರ ನಿಧನರಾಗಿದ್ದಾರೆ. ಅವರಿಗೆ 83 ವರ್ಷ ವಯಸ್ಸಾಗಿತ್ತು.
ಭಾರತದ ಕ್ರಿಕೆಟ್ ತಂಡದ ಪರ 29 ಟೆಸ್ಟ್ ಪಂದ್ಯಗಳನ್ನು ಆಡಿದ್ದ ಅಬಿದ್ ತನ್ನ ಮಧ್ಯಮ ವೇಗದ ಬೌಲಿಂಗ್ ನ ಮೂಲಕ 47 ವಿಕೆಟ್ಗಳನ್ನು ಪಡೆದಿದ್ದರು. ಮಧ್ಯಮ ಸರದಿಯ ಬ್ಯಾಟರ್ ಆಗಿದ್ದ ಅಬಿದ್ ಅವರು ಭಾರತೀಯ ಕ್ರಿಕೆಟ್ನ ಓರ್ವ ಶ್ರೇಷ್ಠ ಫೀಲ್ಡರ್ ಕೂಡ ಆಗಿದ್ದರು.
1967-68ರಲ್ಲಿ ಬ್ರಿಸ್ಬೇನ್ನಲ್ಲಿ ಆಸ್ಟ್ರೇಲಿಯ ವಿರುದ್ಧ ತನ್ನ ಮೊದಲ ಟೆಸ್ಟ್ ಪಂದ್ಯವನ್ನು ಆಡಿದ್ದ ಅಬಿದ್ ಸರ್ವಶ್ರೇಷ್ಠ ಬೌಲಿಂಗ್(6-55) ಮಾಡಿದ್ದರು.
ಸಯ್ಯದ್ ಅಬಿದ್ ಅಲಿ ನಿಧನಕ್ಕೆ ಲೆಜೆಂಡರಿ ಬ್ಯಾಟರ್ ಸುನೀಲ್ ಗವಾಸ್ಕರ್ ಸಂತಾಪ ವ್ಯಕ್ತಪಡಿಸಿದ್ದಾರೆ.
‘‘ತುಂಬಾ ದುಃಖದ ವಿಷಯ, ಅವರು ತಂಡಕ್ಕೆ ಬೇಕಾದ ಎಲ್ಲವನ್ನೂ ಮಾಡಿದ ಧೈರ್ಯಶಾಲಿ ಕ್ರಿಕೆಟಿಗ. ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುತ್ತಿದ್ದ ಅಲ್ರೌಂಡರ್ ಅಬಿದ್ ಅಗತ್ಯವಿದ್ದಾಗ ಇನಿಂಗ್ಸ್ ಕೂಡ ಆರಂಭಿಸಿದ್ದ್ದರು. ಕೆಲವು ಅದ್ಭುತ ಕ್ಯಾಚ್ಗಳನ್ನು ಪಡೆದು ನಮ್ಮ ಸ್ಪಿನ್ ಬೌಲಿಂಗ್ಗೆ ಇನ್ನಷ್ಟು ಮೆರುಗು ನೀಡಿದ್ದರು. ನನಗಿರುವ ನೆನಪಿನ ಪ್ರಕಾರ ಅವರು ಹೊಸ ಚೆಂಡಿನಲ್ಲಿ ಟೆಸ್ಟ್ ಪಂದ್ಯದ ಮೊದಲ ಎಸೆತದಲ್ಲೇ ವಿಕೆಟ್ ಪಡೆದು ವಿಶಿಷ್ಟ ದಾಖಲೆ ನಿರ್ಮಿಸಿದ್ದರು. ದುಃಖವನ್ನು ಸಹಿಸುವ ಶಕ್ತಿ ಅವರ ಕುಟುಂಬಕ್ಕೆ ಸಿಗಲಿ’’ ಎಂದು ಭಾರತದ ಮಾಜಿ ನಾಯಕ ಸುನೀಲ್ ಗವಾಸ್ಕರ್ ಹೇಳಿದ್ದಾರೆ.