ನಾಲ್ಕನೇ ಟಿ20 | ಬಟ್ಲರ್, ಸಾಲ್ಟ್ ಸಾಹಸ ; ಪಾಕ್ ವಿರುದ್ಧ ಇಂಗ್ಲೆಂಡ್ ಗೆ ಜಯ
PC : NDTV
ಲಂಡನ್ : ಪಾಕಿಸ್ತಾನ ವಿರುದ್ಧ ನಾಲ್ಕನೇ ಟಿ20 ಅಂತರ್ರಾಷ್ಟ್ರೀಯ ಪಂದ್ಯವನ್ನು 7 ವಿಕೆಟ್ ಗಳ ಅಂತರದಿಂದ ಗೆದ್ದುಕೊಂಡಿರುವ ಇಂಗ್ಲೆಂಡ್ ಕ್ರಿಕೆಟ್ ತಂಡ ಮುಂದಿನ ವಾರ ಆರಂಭವಾಗಲಿರುವ ಟಿ20 ವಿಶ್ವಕಪ್ ಗಿಂತ ಮುಂಚಿತವಾಗಿ ಮಳೆ ಬಾಧಿತ 4 ಪಂದ್ಯಗಳ ಸರಣಿಯನ್ನು 2-0 ಅಂತರದಿಂದ ವಶಪಡಿಸಿಕೊಂಡಿದೆ.
ಗುರುವಾರ ಟಾಸ್ ಜಯಿಸಿದ ಜೋಸ್ ಬಟ್ಲರ್ ಮೋಡ ಕವಿದ ವಾತಾವರಣದಲ್ಲಿ ಮೊದಲು ಬೌಲಿಂಗ್ ಆಯ್ದುಕೊಂಡರು. ಪಾಕಿಸ್ತಾನ 19.5 ಓವರ್ ಗಳಲ್ಲಿ 157 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ಇಂಗ್ಲೆಂಡ್ ತಂಡ 15.3 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 158 ರನ್ ಗಳಿಸಿ ಗೆಲುವಿನ ನಗೆ ಬೀರಿತು.
ಮುಹಮ್ಮದ್ ರಿಝ್ವಾನ್ ಹಾಗೂ ಬಾಬರ್ ಆಝಮ್ ವಿಕೆಟ್ ನಷ್ಟವಿಲ್ಲದೆ 59 ರನ್ ಗಳಿಸಿದರು. ಆದರೆ ಬಾಬರ್(36 ರನ್)ಪವರ್ ಪ್ಲೇನ ಕೊನೆಯ ಎಸೆತದಲ್ಲಿ ವಿಕೆಟ್ ಕೈಚೆಲ್ಲಿದರು. ರಿಝ್ವಾನ್(23 ರನ್)ಮುಂದಿನ ಓವರ್ಗೆ ಔಟಾದರು. ಸ್ಪಿನ್ನರ್ ಆದಿಲ್ ರಶೀದ್(2-27) ಪಂದ್ಯದ ಮೇಲೆ ಹಿಡಿತ ಸಾಧಿಸಿದಾಗ ಪಾಕಿಸ್ತಾನ 86 ರನ್ಗೆ 5 ವಿಕೆಟ್ಗಳನ್ನು ಕಳೆದುಕೊಂಡಿತು.
ಉಸ್ಮಾನ್ ಖಾನ್(38 ರನ್) ಹಾಗೂ ಇಫ್ತಿಕರ್ ಅಹ್ಮದ್(21 ರನ್) ಒಂದಷ್ಟು ಹೋರಾಟ ನೀಡಿ ಪಾಕಿಸ್ತಾನ ತಂಡ 157 ರನ್ ಗಳಿಸಲು ನೆರವಾದರು.
ಮೊದಲ ಆರು ಓವರ್ಗಳಲ್ಲಿ 78 ರನ್ ಗಳಿಸಿದ ಫಿಲ್ ಸಾಲ್ಟ್(45 ರನ್)ಹಾಗೂ ಬಟ್ಲರ್(39 ರನ್)ರನ್ ಚೇಸಿಂಗ್ಗೆ ಬಲ ನೀಡಿದರು. ಈ ಇಬ್ಬರು ಹಾರಿಸ್ ರವೂಫ್(3-38) ಬೌಲಿಂಗ್ನಲ್ಲಿ ವಿಕೆಟ್ ಒಪ್ಪಿಸಿದರು. ವಿಲ್ ಜಾಕ್ಸ್(20 ರನ್)ರವೂಫ್ಗೆ ಮೂರನೇ ಬಲಿಯಾದರು. ಆಗ ಜಾನಿ ಬೈರ್ಸ್ಟೋವ್(ಔಟಾಗದೆ 28) ಹಾಗೂ ಹ್ಯಾರಿ ಬ್ರೂಕ್(ಔಟಾಗದೆ 17)ಇಂಗ್ಲೆಂಡ್ ತಂಡ 16ನೇ ಓವರ್ನಲ್ಲಿ ಗುರಿ ತಲುಪುವಲ್ಲಿ ನೆರವಾದರು.
ಅಮೆರಿಕ ಹಾಗೂ ವೆಸ್ಟ್ಇಂಡೀಸ್ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್ಗಿಂತ ಮೊದಲು ಉಭಯ ತಂಡಗಳು ಆಡಿರುವ ಕೊನೆಯ ಪಂದ್ಯ ಇದಾಗಿದೆ. ಇಂಗ್ಲೆಂಡ್ ತಂಡ ಮಂಗಳವಾರ ಬ್ರಿಡ್ಜ್ಟೌನ್ನಲ್ಲಿ ಸ್ಕಾಟ್ಲ್ಯಾಂಡ್ ತಂಡವನ್ನು ಎದುರಿಸುವ ಮೂಲಕ ಪ್ರಶಸ್ತಿ ಉಳಿಸಿಕೊಳ್ಳಲು ತನ್ನ ಹೋರಾಟ ಆರಂಭಿಸಲಿದೆ. ಪಾಕಿಸ್ತಾನ ತಂಡ ಡಲ್ಲಾಸ್ನಲ್ಲಿ ಜೂನ್ 6ರಂದು ಅಮೆರಿಕ ತಂಡವನ್ನು ಎದುರಿಸಲಿದೆ.