ಕುತೂಹಲಕಾರಿ ಘಟ್ಟದಲ್ಲಿ ನಾಲ್ಕನೇ ಟೆಸ್ಟ್
ಬುಮ್ರಾ ಸ್ಮರಣೀಯ ಬೌಲಿಂಗ್, ಅಂತ್ಯದಲ್ಲಿ ಆಸ್ಟ್ರೇಲಿಯ ಪ್ರತಿರೋಧ
ಜಸ್ಪ್ರಿತ್ ಬುಮ್ರಾ | PC : PTI
ಮೆಲ್ಬರ್ನ್ : ಜಸ್ಪ್ರಿತ್ ಬುಮ್ರಾ ಮಿಂಚಿನ ಸ್ಪೆಲ್ ಹಾಗೂ ಸ್ಮರಣೀಯ ಸಾಧನೆಯಿಂದ ಬಾಕ್ಸಿಂಗ್ ಡೇ ಟೆಸ್ಟ್ನ 4ನೇ ದಿನವಾದ ರವಿವಾರ ಭಾರತ ತಂಡ ಮೇಲುಗೈ ಸಾಧಿಸಿತ್ತು. ಆದರೆ, ಆಸ್ಟ್ರೇಲಿಯದ ಕೆಳ ಸರದಿ ಆಟಗಾರರ ಪ್ರತಿರೋಧದ ಫಲವಾಗಿ ಆಸ್ಟ್ರೇಲಿಯ ತಂಡ ಪಂದ್ಯದ ಮೇಲೆ ಹಿಡಿತ ಸಾಧಿಸಿದೆ. ಭಾರತದ ಗೆಲುವಿಗೆ ಕಠಿಣ ಸವಾಲು ನೀಡಲು ಮುಂದಾಗಿದೆ.
ಬುಮ್ರಾ(4-56)ಹಾಗೂ ಮುಹಮ್ಮದ್ ಸಿರಾಜ್(3-66)ಉತ್ತಮ ಬೌಲಿಂಗ್ ದಾಳಿಯ ಹೊರತಾಗಿಯೂ ಆಸ್ಟ್ರೇಲಿಯ ತಂಡ ದಿನದಾಟದಂತ್ಯಕ್ಕೆ 2ನೇ ಇನಿಂಗ್ಸ್ನಲ್ಲಿ 9 ವಿಕೆಟ್ಗಳ ನಷ್ಟಕ್ಕೆ 228 ರನ್ ಗಳಿಸಿದ್ದು, ಒಟ್ಟು 333 ರನ್ ಮುನ್ನಡೆಯಲ್ಲಿದೆ. ಹೀಗಾಗಿ ಐದನೇ ಹಾಗೂ ಕೊನೆಯ ದಿನದಾಟ ಕುತೂಹಲಕಾರಿ ಘಟ್ಟ ತಲುಪಿದೆ.
ಇದಕ್ಕೂ ಮೊದಲು 9 ವಿಕೆಟ್ಗಳ ನಷ್ಟಕ್ಕೆ 358 ರನ್ನಿಂದ ಇನಿಂಗ್ಸ್ ಆರಂಭಿಸಿದ ಭಾರತ ತಂಡವು 369 ರನ್ ಗಳಿಸುವಷ್ಟರಲ್ಲಿ ಆಲೌಟಾಯಿತು. ಶತಕವೀರ ನಿತೀಶ್ ಕುಮಾರ್ ರೆಡ್ಡಿ ನಿನ್ನೆಯ ಸ್ಕೋರ್ಗೆ 9 ರನ್ ಸೇರಿಸಿ ಔಟಾದರು.
ಆಸ್ಟ್ರೇಲಿಯದ ಬೌಲಿಂಗ್ ವಿಭಾಗದಲ್ಲಿ ಸ್ಕಾಟ್ ಬೋಲ್ಯಾಂಡ್(3-57), ಕಮಿನ್ಸ್(3-89) ಹಾಗೂ ನಾಥನ್ ಲಿಯೊನ್(3-96)ತಲಾ 3 ವಿಕೆಟ್ಗಳನ್ನು ಪಡೆದರು.
ಆಸ್ಟ್ರೇಲಿಯದ ಮಧ್ಯಮ ಸರದಿಯನ್ನು ಬೇಧಿಸಿರುವ ಬುಮ್ರಾ ಅವರು ತನ್ನ 200ನೇ ಟೆಸ್ಟ್ ವಿಕೆಟ್ ಪಡೆದರು. ಟೆಸ್ಟ್ ಇತಿಹಾಸದಲ್ಲಿ ಶ್ರೇಷ್ಠ ಸರಾಸರಿಯೊಂದಿಗೆ 200 ಹಾಗೂ ಅದಕ್ಕಿಂತ ಹೆಚ್ಚು ವಿಕೆಟ್ ಪಡೆದ ಸಾಧನೆ ಮಾಡಿದರು. ಆದರೆ, ಲ್ಯಾಬುಶೇನ್(70 ರನ್)ಹಾಗೂ ಪ್ಯಾಟ್ ಕಮಿನ್ಸ್(41 ರನ್) ಬುಮ್ರಾರ ಪ್ರಯತ್ನಕ್ಕೆ ಪ್ರತಿರೋಧ ಒಡ್ಡಿದರು. ನಾಥನ್ ಲಿಯೊನ್(ಔಟಾಗದೆ 41)ಹಾಗೂ ಸ್ಕಾಟ್ ಬೋಲ್ಯಾಂಡ್(ಔಟಾಗದೆ 10)ಕೊನೆಯ ವಿಕೆಟ್ಗೆ 55 ರನ್ ಜೊತೆಯಾಟ ನಡೆಸಿ ಭಾರತ ತಂಡಕ್ಕೆ ನಿರಾಶೆವುಂಟು ಮಾಡಿದರು.
ಯಶಸ್ವಿ ಜೈಸ್ವಾಲ್ ಇಂದು ಮೂರು ನಿರ್ಣಾಯಕ ಕ್ಯಾಚ್ ಕೈಚೆಲ್ಲಿದರು. ಲ್ಯಾಬುಶೇನ್ 46 ರನ್ ಗಳಿಸಿದ್ದಾಗ ಜೀವದಾನ ನೀಡಿದ್ದ ಜೈಸ್ವಾಲ್, ಕಮಿನ್ಸ್ ನೀಡಿದ ಕ್ಯಾಚನ್ನು ಕೈಬಿಟ್ಟಿದ್ದರು. ಈ ಫೀಲ್ಡಿಂಗ್ ಪ್ರಮಾದವು ಭಾರತದ ಪಾಲಿಗೆ ದುಬಾರಿಯಾಗಿದ್ದು, ಅಸ್ಥಿರ ಬೌನ್ಸ್ ಇದ್ದ ಪಿಚ್ನಲ್ಲಿ ಆಸ್ಟ್ರೇಲಿಯ ತಂಡ ತನ್ನ ಮುನ್ನಡೆಯನ್ನು ವಿಸ್ತರಿಸಿಕೊಂಡಿದೆ.
ಬುಮ್ರಾ ಅವರು ಮತ್ತೊಮ್ಮೆ ಭಾರತದ ಪರ ಶ್ರೇಷ್ಠ ಬೌಲಿಂಗ್ ಮಾಡಿದರು. ತನ್ನ 200ನೇ ಟೆಸ್ಟ್ ವಿಕೆಟ್ ಪಡೆದು ಐತಿಹಾಸಿಕ ಮೈಲಿಗಲ್ಲು ತಲುಪಿದರು. ಟ್ರಾವಿಸ್ ಹೆಡ್ ವಿಕೆಟನ್ನು ಪಡೆದು ತನ್ನ 44ನೇ ಟೆಸ್ಟ್ ಪಂದ್ಯದಲ್ಲಿ ಮಹತ್ವದ ಮೈಲಿಗಲ್ಲು ತಲುಪಿದರು. ದಿನದಾಟದಂತ್ಯಕ್ಕೆ 56 ರನ್ಗೆ 4 ವಿಕೆಟ್ಗಳನ್ನು ಪಡೆದಿರುವ ಬುಮ್ರಾ ಅವರು ಸರಣಿಯಲ್ಲಿ ಒಟ್ಟು 29 ವಿಕೆಟ್ಗಳನ್ನು ಪಡೆದರು. ಆಸ್ಟ್ರೇಲಿಯದ ಮಣ್ಣಿನಲ್ಲಿ ನಡೆದ ಟೆಸ್ಟ್ ಸರಣಿಯಲ್ಲಿ ಭಾರತದ ಅತ್ಯಂತ ಯಶಸ್ವಿ ಬೌಲರ್ ಎನಿಸಿಕೊಂಡರು.
*ಸಿರಾಜ್ಗೆ 3 ವಿಕೆಟ್, ಭಾರತ ಪ್ರತಿ ಹೋರಾಟ:
ಮೊದಲ ಇನಿಂಗ್ಸ್ನಲ್ಲಿ ವಿಕೆಟ್ ಪಡೆಯುವಲ್ಲಿ ವಿಫಲರಾಗಿದ್ದ ಮುಹಮ್ಮದ್ ಸಿರಾಜ್ ಆಸ್ಟ್ರೇಲಿಯದ 2ನೇ ಇನಿಂಗ್ಸ್ನಲ್ಲಿ 66 ರನ್ ನೀಡಿ ಪ್ರಮುಖ 3 ವಿಕೆಟ್ಗಳನ್ನು ಪಡೆದು ಫಾರ್ಮ್ಗೆ ಮರಳಿದರು. ಆಕಾಶ್ ದೀಪ್ ಹಾಗೂ ಬುಮ್ರಾ ನಂತರ ಸಿರಾಜ್ ಬೌಲಿಂಗ್ ಮಾಡಿದರು. ಸಿರಾಜ್ ಬೌಲಿಂಗ್ ಆರಂಭಿಸಿದ ತಕ್ಷಣವೇ ಉಸ್ಮಾನ್ ಖ್ವಾಜಾ(21 ರನ್)ವಿಕೆಟನ್ನು ಪಡೆದರು. ಆ ನಂತರ ಸ್ಟೀವ್ ಸ್ಮಿತ್(13 ರನ್) ಅವರನ್ನು ಕ್ಲೀನ್ಬೌಲ್ಡ್ ಮಾಡಿದರು. ಸಿರಾಜ್ ಅವರು ಲ್ಯಾಬುಶೇನ್(70 ರನ್) ವಿಕೆಟ್ ಉರುಳಿಸಿದರು.
*ಕ್ಯಾಚ್ಗಳನ್ನು ಕೈಚೆಲ್ಲಿದ ಜೈಸ್ವಾಲ್, ಭಾರತದ ಅವಕಾಶಕ್ಕೆ ಹಿನ್ನಡೆ
ಯಶಸ್ವಿ ಜೈಸ್ವಾಲ್ ಅವರು ಇಂದು ಫೀಲ್ಡಿಂಗ್ನ ವೇಳೆ ಮೂರು ಪ್ರಮುಖ ಕ್ಯಾಚ್ ಕೈಚೆಲ್ಲಿದರು. ದಿನದಾರಂಭದಲ್ಲಿ ಉಸ್ಮಾನ್ ಖ್ವಾಜಾ ಕ್ಯಾಚ್ ಪಡೆಯುವಲ್ಲಿ ವಿಫಲರಾದ ಜೈಶ್ವಾಲ್ ಆನಂತರ 46 ರನ್ ಗಳಿಸಿದ್ದಾಗ ಲ್ಯಾಬುಶೇನ್ ನೀಡಿದ್ದ ಸುಲಭ ಕ್ಯಾಚ್ ಕೈಬಿಟ್ಟರು. ಟೀ ವಿರಾಮಕ್ಕೆ ಮೊದಲು ಕಮಿನ್ಸ್ಗೂ ಜೀವದಾನ ನೀಡಿದರು. ಜೈಸ್ವಾಲ್ ಕಳಪೆ ಫೀಲ್ಡಿಂಗ್ ಭಾರತೀಯ ಪಾಳಯದಲ್ಲಿ ಅಸಮಾಧಾನ ತಂದಿದ್ದು, ನಾಯಕ ರೋಹಿತ್ ಶರ್ಮಾ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದರು. ಅವಕಾಶಗಳನ್ನು ಕೈಚೆಲ್ಲಿದ ಪರಿಣಾಮ ಆಸ್ಟ್ರೇಲಿಯ ತಂಡ ತನ್ನ ಮುನ್ನಡೆಯನ್ನು ಹೆಚ್ಚಿಸಿಕೊಂಡಿದ್ದು, ಭಾರತಕ್ಕೆ ಕಠಿಣ ಸವಾಲು ಎದುರಾಗಿದೆ.
*ಆಸ್ಟ್ರೇಲಿಯ ಇನಿಂಗ್ಸ್ಗೆ ಜೀವ ತುಂಬಿದ ಲ್ಯಾಬುಶೇನ್ ಹಾಗೂ ಕಮಿನ್ಸ್
ಆರಂಭದಲ್ಲಿ ಭಾರತದ ಶಿಸ್ತುಬದ್ಧ ಬೌಲಿಂಗ್ಗೆ ತತ್ತರಿಸಿ ತನ್ನ 2ನೇ ಇನಿಂಗ್ಸ್ನಲ್ಲಿ 91 ರನ್ಗೆ 6 ವಿಕೆಟ್ಗಳನ್ನು ಕಳೆದುಕೊಂಡು ಸಂಕಷ್ಟದಲ್ಲಿದ್ದ ಆಸ್ಟ್ರೇಲಿಯ ತಂಡಕ್ಕೆ ಲ್ಯಾಬುಶೇನ್ ಹಾಗೂ ನಾಯಕ ಕಮಿನ್ಸ್ ಆಸರೆಯಾದರು. ಈ ಇಬ್ಬರು 7ನೇ ವಿಕೆಟ್ಗೆ 57 ರನ್ ಜೊತೆಯಾಟ ನಡೆಸಿದರು. ಆಸೀಸ್ ಪರ ಸರ್ವಾಧಿಕ ಸ್ಕೋರ್(70 ರನ್, 139 ಎಸೆತ, 3 ಬೌಂಡರಿ)ಗಳಿಸಿದ ಲ್ಯಾಬುಶೇನ್ ಅವರು ಕಮಿನ್ಸ್(41 ರನ್, 90 ಎಸೆತ, 4 ಬೌಂಡರಿ)ಜೊತೆಗೂಡಿ ಭಾರತದ ಬೌಲರ್ಗಳನ್ನು ಹತಾಶೆಗೊಳಿಸಿದರು. ಇದರೊಂದಿಗೆ ಆಸ್ಟ್ರೇಲಿಯದ ಮುನ್ನಡೆಯನ್ನು 250 ರನ್ ಗಡಿ ದಾಟಿಸಿದರು.
*ಭಾರತಕ್ಕೆ ಹತಾಶೆ ತಂದ ಕೊನೆಯ ವಿಕೆಟ್ ಜೊತೆಯಾಟ, ಆಸ್ಟ್ರೇಲಿಯದ ಮುನ್ನಡೆ ಹೆಚ್ಚಳ
ಆಸ್ಟ್ರೇಲಿಯದ ಇನಿಂಗ್ಸ್ ಅನ್ನು ಬೇಗನೆ ಮುಗಿಸಲು ಭಾರತ ತನ್ನ ಶ್ರೇಷ್ಠ ಪ್ರಯತ್ನ ನಡೆಸಿದರೂ ನಾಥನ್ ಲಿಯೊನ್ ಹಾಗೂ ಸ್ಕಾಟ್ ಬೋಲ್ಯಾಂಡ್ ಕೊನೆಯ ವಿಕೆಟ್ನಲ್ಲಿ ಮುರಿಯದ ಜೊತೆಯಾಟದಲ್ಲಿ 55 ರನ್ ಸೇರಿಸಿ ಭಾರತದ ಬೌಲರ್ಗಳಿಗೆ ಭಾರೀ ನಿರಾಶೆಗೊಳಿಸಿದರು. ಸ್ಪಿನ್ನರ್ ಲಿಯೊನ್ 54 ಎಸೆತಗಳಲ್ಲಿ 5 ಬೌಂಡರಿಗಳ ಸಹಿತ ಔಟಾಗದೆ 41 ರನ್ ಗಳಿಸಿದರು. ಬೋಲ್ಯಾಂಡ್ ಔಟಾಗದೆ 10(65 ಎಸೆತ, 1 ಬೌಂಡರಿ)ತಾಳ್ಮೆಯ ಇನಿಂಗ್ಸ್ ಮೂಲಕ ಲಿಯೊನ್ಗೆ ಉತ್ತಮ ಸಾಥ್ ನೀಡಿದರು. ಈ ಇಬ್ಬರ ಜೊತೆಯಾಟದಿಂದಾಗಿ ಆಸ್ಟ್ರೇಲಿಯದ ಮುನ್ನಡೆಯು 333 ರನ್ಗೆ ತಲುಪಿದ್ದು, 5ನೇ ದಿನದಾಟದಲ್ಲಿ ಭಾರತಕ್ಕೆ ದೊಡ್ಡ ಸವಾಲು ಎದುರಾಗಿದೆ.
ಲಿಯೊನ್ ಹಾಗೂ ಬೋಲ್ಯಾಂಡ್ ಕೊನೆಯ ವಿಕೆಟ್ನಲ್ಲಿ ಪ್ರತಿರೋಧ ಒಡ್ಡಿದ ಕಾರಣ ಆಸ್ಟ್ರೇಲಿಯದ ಇನಿಂಗ್ಸ್ಗೆ ಬೇಗನೆ ತೆರೆ ಎಳೆಯುವ ಭಾರತದ ಲೆಕ್ಕಾಚಾರ ತಲೆಕೆಳಗಾಗಿದೆ. ಕೊನೆಯ ದಿನದಾಟದಲ್ಲಿ ಆಸ್ಟ್ರೇಲಿಯ ಗೆಲುವು ಸಾಧಿಸುವುದೇ ಅಥವಾ ಭಾರತ ಡ್ರಾ ಗೊಳಿಸುವಲ್ಲಿ ಸಫಲವಾಗುವುದೇ ಎಂಬ ಕುತೂಹಲ ಎಲ್ಲರಲ್ಲಿದೆ.