ಸನ್ರೈಸರ್ಸ್ ಹೈದರಾಬಾದ್ ವೇಗದ ಬೌಲಿಂಗ್ ಕೋಚ್ ಆಗಿ ಫ್ರಾಂಕ್ಲಿನ್ ನೇಮಕ
ಜೇಮ್ಸ್ ಫ್ರಾಂಕ್ಲಿನ್ | Photo; X\ @SunRisers
ಹೊಸದಿಲ್ಲಿ : ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) ಋತುವಿನಲ್ಲಿ ತಂಡದ ವೇಗದ ಬೌಲಿಂಗ್ ಕೋಚ್ ಆಗಿ ನ್ಯೂಝಿಲ್ಯಾಂಡ್ ನ ಮಾಜಿ ವೇಗದ ಬೌಲರ್ ಜೇಮ್ಸ್ ಫ್ರಾಂಕ್ಲಿನ್ ರನ್ನು ನೇಮಿಸಲಾಗಿದೆ ಎಂದು ಸನ್ ರೈಸರ್ಸ್ ಹೈದರಾಬಾದ್ ಸೋಮವಾರ ಪ್ರಕಟಿಸಿದೆ.
ಫ್ರಾಂಕ್ಲಿನ್ ಅವರು ದಕ್ಷಿಣ ಆಫ್ರಿಕಾದ ಮಾಜಿ ವೇಗದ ಬೌಲರ್ ಡೇಲ್ ಸ್ಟೇಯ್ ನಿಂದ ವೇಗದ ಬೌಲಿಂಗ್ ಕೋಚ್ ಹುದ್ದೆಯನ್ನು ವಹಿಸಿಕೊಳ್ಳಲಿದ್ದಾರೆ. ಸ್ಟೇಯ್ ನ ವೈಯಕ್ತಿಕ ಕಾರಣಕ್ಕೆ ಈ ಋತುವಿನಲ್ಲಿ ವಿರಾಮ ಪಡೆದಿದ್ದಾರೆ.
ವೈಯಕ್ತಿಕ ಕಾರಣಕ್ಕೆ ಡೇಲ್ ಸ್ಟೇಯ್ ನ ಈ ಋತುವಿನಲ್ಲಿ ನಮ್ಮೊಂದಿಗೆ ಸೇರಿಕೊಳ್ಳುವುದಿಲ್ಲ. ಈ ಋತುವಿಗೆ ಜೇಮ್ಸ್ ಫ್ರಾಂಕ್ಲಿನ್ ವೇಗದ ಬೌಲಿಂಗ್ ಕೋಚ್ ಆಗಿರುತ್ತಾರೆ. ಜೇಮ್ಸ್ ಗೆ ಸ್ವಾಗತ ಎಂದು ಸನ್ ರೈಸರ್ಸ್ ಹೈದರಾಬಾದ್ ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ ಪ್ರಕಟಿಸಿದೆ.
ಫ್ರಾಂಕ್ಲಿನ್ 2001ರಿಂದ 2013ರ ತನಕ ತನ್ನ ವೃತ್ತಿ ಜೀವನದಲ್ಲಿ ನ್ಯೂಝಿಲ್ಯಾಂಡ್ ಪರವಾಗಿ 31 ಟೆಸ್ಟ್, 110 ಏಕದಿನ ಹಾಗೂ 38 ಟಿ-20 ಪಂದ್ಯಗಳನ್ನು ಆಡಿದ್ದಾರೆ. 2011 ಹಾಗೂ 2012ರ ಋತುವಿನಲ್ಲಿ ಮುಂಬೈ ಇಂಡಿಯನ್ಸ್ ನಲ್ಲಿ ತನ್ನ ಕೌಶಲ್ಯವನ್ನು ಪ್ರದರ್ಶಿಸಿದ್ದರು.
ಸನ್ ರೈಸರ್ಸ್ ವೇಗದ ಬೌಲಿಂಗ್ ಕೋಚ್ ಆಗುವ ಮೂಲಕ ಫ್ರಾಂಕ್ಲಿನ್ ಐಪಿಎಲ್ ನಲ್ಲಿ ಕೋಚಿಂಗ್ ವಿಭಾಗದಲ್ಲಿ ಪಾದಾರ್ಪಣೆಗೈಯಲಿದ್ದಾರೆ.
43ರ ಹರೆಯದ ಫ್ರಾಂಕ್ಲಿನ್ ಗೆ ಇಂಗ್ಲೆಂಡ್ ಕೌಂಟಿ ಕ್ರಿಕೆಟ್ ಡರ್ಹಾಮ್ ಹಾಗೂ ಪಾಕಿಸ್ತಾನ ಸೂಪರ್ ಲೀಗ್ ತಂಡ ಇಸ್ಲಾಮಾಬಾದ್ ಯುನೈಟೆಡ್ನೊಂದಿಗೆ ಸಹಾಯಕ ಕೋಚ್ ಆಗಿ ಕೆಲಸ ಮಾಡಿರುವ ಅನುಭವವಿದೆ.
ನ್ಯೂಝಿಲ್ಯಾಂಡ್ ನ ಮಾಜಿ ನಾಯಕ ಡೇನಿಯಲ್ ವೆಟೋರಿ ಐಪಿಎಲ್ 2023ರ ನಂತರ ತಂಡದ ಮುಖ್ಯ ಕೋಚ್ ಆಗಿ ನೇಮಕಗೊಂಡಿದ್ದರು.
ಹೈದರಾಬಾದ್ ತಂಡ ಮಾರ್ಚ್ 23ರಂದು ಕೋಲ್ಕತಾದ ಈಡನ್ ಗಾರ್ಡನ್ಸ್ ನಲ್ಲಿ ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ ಆಡುವ ಮೂಲಕ ಐಪಿಎಲ್-2024ರಲ್ಲಿ ತನ್ನ ಅಭಿಯಾನ ಆರಂಭಿಸಲಿದೆ.
Dale Steyn will not be joining us this season due to personal reasons and James Franklin will be the Pace Bowling Coach for this season.
— SunRisers Hyderabad (@SunRisers) March 4, 2024
Welcome on board, James! #IPL2024 pic.twitter.com/CefHEbVSLy