ಫ್ರೆಂಚ್ ಓಪನ್ ಬ್ಯಾಡ್ಮಿಂಟನ್: ಭಾರತದ ಸವಾಲು ಮುಕ್ತಾಯ
ಪಿ.ವಿ. ಸಿಂಧೂ Photo- PTI
ರೆನ್ಸ್ (ಫ್ರಾನ್ಸ್): ಫ್ರಾನ್ಸ್ ನ ರೆನ್ಸ್ ನಗರದಲ್ಲಿ ನಡೆಯುತ್ತಿರುವ ಫ್ರೆಂಚ್ ಓಪನ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಗುರುವಾರ ಭಾರತದ ಸವಾಲು ಕೊನೆಗೊಂಡಿದೆ. ಮಹಿಳೆಯರ ಸಿಂಗಲ್ಸ್ ನಲ್ಲಿ ಪಿ.ವಿ. ಸಿಂಧೂ ಹಾಗೂ ಪುರುಷರ ಡಬಲ್ಸ್ ನಲ್ಲಿ ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಎರಡನೇ ಸುತ್ತಿನಲ್ಲಿ ಪರಾಭವಗೊಂಡು ಪಂದ್ಯಾವಳಿಯಿಂದ ಹೊರಬಿದ್ದಿದ್ದಾರೆ.
ಮಹಿಳೆಯರ ಸಿಂಗಲ್ಸ್ ನ ಎರಡನೇ ಸುತ್ತಿನಲ್ಲಿ, ಎರಡು ಬಾರಿಯ ಒಲಿಂಪಿಕ್ ಪದಕ ವಿಜೇತೆ ಪಿ.ವಿ. ಸಿಂಧೂ ಮಂಡಿನೋವಿನಿಂದಾಗಿ ಅರ್ಧದಲ್ಲೇ ಪಂದ್ಯದಿಂದ ಹಿಂದೆ ಸರಿದರು. ಥಾಯ್ಲೆಂಡ್ ನ ಸುಪನಿಡ ಕಾಟೆತೊಂಗ್ ವಿರುದ್ಧದ ಪಂದ್ಯದಲ್ಲಿ ಮೊದಲ ಗೇಮನ್ನು 21-18ರಿಂದ ಗೆದ್ದರು. ಆದರೆ, ಎರಡನೇ ಗೇಮ್ ನಲ್ಲಿ ಅಂಕಗಳು 1-1ರ ಸಮಬಲದಲ್ಲಿದ್ದಾಗ ಅವರು ಮಂಡಿನೋವಿನ ಗಾಯಕ್ಕೆ ಒಳಗಾದರು.
ಎದುರಾಳಿಯ ಹೊಡೆತವೊಂದನ್ನು ಹಿಂದಿರುಗಿಸುತ್ತಿದ್ದಾಗ, ಸಿಂಧೂ ತನ್ನ ಕಾಲುಗಳನ್ನು ಪರಸ್ಪರ ತುಂಬಾ ದೂರಕ್ಕೆ ಚಾಚಿದರು. ಅದು ಮಂಡಿನೋವಿಗೆ ಕಾರಣವಾಯಿತು. ಅವರು ಮಂಡಿಗೆ ಮ್ಯಾಜಿಕ್ ಸ್ಪ್ರೇ ಹಚ್ಚಿದರು ಮತ್ತು ಪಂದ್ಯಾವಳಿಯ ವೈದ್ಯರ ನೆರವು ಕೋರಿದರು.
ಅವರು ತನ್ನ ಕೋಚ್ ಹಫೀಝ್ ಹಾಶಿಮ್ ಜೊತೆ ಎರಡು ಬಾರಿ ಸಮಾಲೋಚನೆ ನಡೆಸಿದರು. ಈ ನಡುವೆ ಅವರಿಗೆ ಹಳದಿ ಕಾರ್ಡ್ ತೋರಿಸಲಾಯಿತು. ಅಂತಿಮವಾಗಿ ಪಂದ್ಯವನ್ನು ತನ್ನ ಎದುರಾಳಿಗೆ ಬಿಟ್ಟುಕೊಡಲು ಅವರು ನಿರ್ಧರಿಸಿದರು. ಇದರೊಂದಿಗೆ, ಕಾಟೆತೊಂಗ್ ಕ್ವಾರ್ಟರ್ಫೈನಲ್ ತಲುಪಿದರು.
ಮೊದಲ ಸುತ್ತಿನ ಪಂದ್ಯದಲ್ಲಿ ಸಿಂಧೂ ಇಂಡೋನೇಶ್ಯದ ಏಳನೇ ಶ್ರೇಯಾಂಕದ ಗ್ರೆಗೊರಿಯ ಮರಿಸ್ಕ ಟುಂಜುಂಗ್ರನ್ನು 12-21, 21-18, 21-15 ಗೇಮ್ಗಳಿಂದ ಸೋಲಿಸಿದ್ದರು.
ಈ ವಾರದ ಆರಂಭದಲ್ಲಿ, ಸಿಂಧೂ ಸುಮಾರು ಆರು ತಿಂಗಳ ಬಳಿಕ ಬಿಡಬ್ಲ್ಯೂಎಫ್ ವಿಶ್ವ ರ್ಯಾಂಕಿಂಗ್ಸ್ನಲ್ಲಿ ಅಗ್ರ 10ಕ್ಕೆ ಮರಳಿದ್ದರು. ನಾಲ್ಕು ಪಂದ್ಯಾವಳಿಗಳಲ್ಲಿ ಸೆಮಿಫೈನಲ್ ತಲುಪಿದ ಬಳಿಕ ಅವರ ರ್ಯಾಂಕಿಂಗ್ನಲ್ಲಿ ಸುಧಾರಣೆಯಾಗಿದೆ.
ಬಳಿಕ ನಡೆದ ಪುರುಷರ ಡಬಲ್ಸ್ ಎರಡನೇ ಸುತ್ತಿನ ಪಂದ್ಯದಲ್ಲಿ, ಮೂರನೇ ಶ್ರೇಯಾಂಕದ ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿಯನ್ನು ಇಂಡೋನೇಶ್ಯದ ಮುಹಮ್ಮದ್ ಅಹ್ಸಾನ್ ಮತ್ತು ಹೇಂಡ್ರ ಸೆಟಿಯವನ್ 25-23, 19-21, 21-19 ಗೇಮ್ಗಳಿಂದ ಹಿಮ್ಮೆಟ್ಟಿಸಿದರು.