ಫ್ರೆಂಚ್ ಓಪನ್ | ಮಳೆಬಾಧಿತ ಪಂದ್ಯದಲ್ಲಿ ಜೊಕೊವಿಕ್ ಜಯಭೇರಿ
ನೊವಾಕ್ ಜೊಕೊವಿಕ್ | PC : PTI
ಪ್ಯಾರಿಸ್ : ವಿಶ್ವದ ನಂ.1 ಆಟಗಾರ ನೊವಾಕ್ ಜೊಕೊವಿಕ್ ಮಳೆ ಬಾಧಿತ ಫ್ರೆಂಚ್ ಓಪನ್ ಟೆನಿಸ್ ಟೂರ್ನಮೆಂಟ್ ನಲ್ಲಿ ಸ್ಪೇನ್ ನ ರೊಬರ್ಟೊ ಕಾಬಲ್ಲಾಸ್ ರನ್ನು 6-4, 6-1, 6-2 ನೇರ ಸೆಟ್ ಗಳ ಅಂತರದಿಂದ ಮಣಿಸಿ ಮೂರನೇ ಸುತ್ತಿಗೆ ತಲುಪಿದ್ದಾರೆ.
ನಾಲ್ಕನೇ ಬಾರಿ ಫ್ರೆಂಚ್ ಓಪನ್ ಪ್ರಶಸ್ತಿ ಗೆಲ್ಲುವತ್ತ ಚಿತ್ತ ಹರಿಸಿರುವ ಹಾಲಿ ಚಾಂಪಿಯನ್ ಜೊಕೊವಿಕ್ 53 ನಿಮಿಷಗಳಲ್ಲಿ ವಿಶ್ವದ ನಂ.63ನೇ ಆಟಗಾರ ರೊಬರ್ಟೊರನ್ನು ಸೋಲಿಸಿದರು. ಎರಡನೇ ಹಾಗೂ ಮೂರನೇ ಸೆಟ್ ಗೆಲ್ಲಲು ಇನ್ನೂ 71 ನಿಮಿಷ ತೆಗೆದುಕೊಂಡ 37ರ ಹರೆಯದ ಜೊಕೊವಿಕ್ ಸತತ 19ನೇ ವರ್ಷ ಫ್ರೆಂಚ್ ಓಪನ್ ನಲ್ಲಿ ಅಂತಿಮ-32ರ ಸುತ್ತಿಗೇರಿದರು.
ದಾಖಲೆಯ 25ನೇ ಗ್ರ್ಯಾನ್ಸ್ಲಾಮ್ ಪ್ರಶಸ್ತಿ ಗೆಲ್ಲುವ ಗುರಿ ಇಟ್ಟುಕೊಂಡಿರುವ ಜೊಕೊವಿಕ್ ಮುಂದಿನ ಸುತ್ತಿನಲ್ಲಿ ಫ್ರಾನ್ಸ್ ನ ಮೊನ್ಫಿಲ್ಸ್ ಅಥವಾ ಇಟಲಿಯ ಲೊರೆಂರೊ ಮುಸೆಟ್ಟಿ ಅವರನ್ನು ಎದುರಿಸಲಿದ್ದಾರೆ.
ಮೂರು ಬಾರಿಯ ಚಾಂಪಿಯನ್ ಜೊಕೊವಿಕ್ ಅವರು ಮೊನ್ಫಿಲ್ಸ್ ವಿರುದ್ಧ 19-0 ದಾಖಲೆ ಹೊಂದಿದ್ದಾರೆ. ಮುಸೆಟ್ಟಿ ವಿರುದ್ಧ 5 ಪಂದ್ಯಗಳಲ್ಲಿ 4ರಲ್ಲಿ ಜಯಶಾಲಿಯಾಗಿದ್ದಾರೆ.
ಮೂರನೇ ಸುತ್ತಿಗೆರಿದ ಝ್ವೆರೆವ್
ವಿಶ್ವದ 4ನೇ ರ್ಯಾಂಕಿನ ಆಟಗಾರ ಅಲೆಕ್ಸಾಂಡರ್ ಝ್ವೆರೆವ್ ಬೆಲ್ಜಿಯಮ್ನ ಅನುಭವಿ ಆಟಗಾರ ಡೇವಿಡ್ ಗೊಫಿನ್ ರನ್ನು 7-6(4), 6-2, 6-2 ಸೆಟ್ ಗಳ ಅಂತರದಿಂದ ಮಣಿಸಿದರು.ಈ ಮೂಲಕ ಫ್ರೆಂಚ್ ಓಪನ್ ಟೆನಿಸ್ ಟೂರ್ನಿಯಲ್ಲಿ ಮೂರನೇ ಸುತ್ತು ತಲುಪಿದ್ದಾರೆ.
ಜರ್ಮನಿ ಆಟಗಾರ ಝ್ವೆರೆವ್ ಮೊದಲ ಸುತ್ತಿನ ಪಂದ್ಯದಲ್ಲಿ 14 ಬಾರಿ ಫ್ರೆಂಚ್ ಓಪನ್ ಚಾಂಪಿಯನ್ ಆಗಿರುವ ನಡಾಲ್ ರನ್ನು ಸೋಲಿಸಿ ಶಾಕ್ ನೀಡಿದ್ದರು. ಗುರುವಾರ ನಡೆದ 2ನೇ ಸುತ್ತಿನ ಪಂದ್ಯದಲ್ಲಿ ಮೊದಲ ಸೆಟ್ ನಲ್ಲಿ ಟೈ-ಬ್ರೇಕರ್ ಎದುರಿಸಿದರೂ ಅದನ್ನು ಮೆಟ್ಟಿ ನಿಲ್ಲುವಲ್ಲಿ ಯಶಸ್ವಿಯಾದರು. ಎರಡನೇ ಸೆಟ್ ನಲ್ಲಿ ಆರಂಭಿಕ ಮೇಲುಗೈ ಸಾಧಿಸಿ 6-2 ಅಂತರದಿಂದ ಜಯ ಸಾಧಿಸಿದರು.
ನಾನು ಉತ್ತಮವಾಗಿ ಆಡಿದ್ದಕ್ಕೆ ಸಂತೋಷವಾಗುತ್ತಿದೆ ಎಂದು 2022ರ ಫ್ರೆಂಚ್ ಓಪನ್ ಸೆಮಿ ಫೈನಲ್ ನಲ್ಲಿ ಮಂಡಿನೋವಿಗೆ ಒಳಗಾಗಿದ್ದ ಝ್ವೆರೆವ್ ಹೇಳಿದ್ದಾರೆ.
ಝ್ವೆರೆವ್ ಮೂರನೇ ಸುತ್ತಿನಲ್ಲಿ ಇಟಲಿಯ ಲುಸಿಯಾನೊ ಡಾರ್ಡೆರಿ ಅಥವಾ ಡಚ್ ನ ಟಲ್ಲೊನ್ ಗ್ರೀಕ್ಸ್ಪೂರ್ ರನ್ನು ಎದುರಿಸಲಿದ್ದಾರೆ.
ಆರನೇ ಶ್ರೇಯಾಂಕದ ಆಂಡ್ರೆ ರುಬ್ಲೆವ್ ಗೆ ಸೋಲು
ಅಮೋಘ ಪ್ರದರ್ಶನ ನೀಡಿದ ಇಟಲಿಯ ಮ್ಯಾಟಿಯೊ ಅರ್ನಾಲ್ಡಿ ಆರನೇ ಶ್ರೇಯಾಂಕದ ಆಂಡ್ರೆ ರುಬ್ಲೆವ್ ರನ್ನು ಮಣಿಸಿ ಫ್ರೆಂಚ್ ಓಪನ್ ಟೆನಿಸ್ ಟೂರ್ನಿಯಲ್ಲಿ ಅಂತಿಮ-16ರ ಸುತ್ತು ಪ್ರವೇಶಿಸಿದ್ದಾರೆ.
ಶುಕ್ರವಾರ ನಡೆದ ಪುರುಷರ ಸಿಂಗಲ್ಸ್ ಪಂದ್ಯದಲ್ಲಿ ಪ್ರತಿರೋಧ ತೋರಿದ 23ರ ಹರೆಯದ ಅರ್ನಾಲ್ಡಿ ಅವರು ರುಬ್ಲೆವ್ ರನ್ನು 7-6(8), 6-2, 6-4 ನೇರ ಸೆಟ್ ಗಳ ಅಂತರದಿಂದ ಸೋಲಿಸಿದರು.
ಪಂದ್ಯ ಮುಂದುವರಿದಂತೆ ರಶ್ಯದ ಆಟಗಾರ ರುಬ್ಲೆವ್ ತನ್ನ ಕಾಲಿನಿಂದ ರಾಕೆಟನ್ನು ಹೊಡೆದು ತನ್ನ ಹತಾಶೆ ವ್ಯಕ್ತಪಡಿಸಿದರು. ಮತ್ತೊಂದೆಡೆ ಅರ್ನಾಲ್ಡಿ ಪಂದ್ಯದುದ್ದಕ್ಕೂ ಉತ್ತಮ ಪ್ರದರ್ಶನ ಕಾಯ್ದುಕೊಂಡರು. ಕಡಿಮೆ ತಪ್ಪೆಸಗಿ ವೃತ್ತಿಜೀವನದಲ್ಲಿ ಅತ್ಯಂತ ಮಹತ್ವದ ಗೆಲುವು ದಾಖಲಿಸಿದರು.
ರುಬ್ಲೆವ್ ಈ ಹಿಂದೆ 10 ಬಾರಿ ಗ್ರ್ಯಾನ್ಸ್ಲಾಮ್ ಟೂರ್ನಿಯಲ್ಲಿ ಕ್ವಾರ್ಟರ್ ಫೈನಲ್ ತಲುಪಿದ್ದರೂ ಅನಾರ್ಲ್ಡಿ ಅವರ ನಿಖರತೆ ಹಾಗೂ ಶಕ್ತಿಯ ಮುಂದೆ ಮಂಕಾದರು.
ರುಬ್ಲೆವ್ ಸೋಲಿನೊಂದಿಗೆ ಗರಿಷ್ಠ ರ್ಯಾಂಕಿನ ಆಟಗಾರ ಪುರುಷರ ಸಿಂಗಲ್ಸ್ನಿಂದ ನಿರ್ಗಮಿಸಿದಂತಾಗಿದೆ.
ಅರ್ನಾಲ್ಡಿ ಪ್ರಿ-ಕ್ವಾರ್ಟರ್ ಫೈನಲ್ನಲ್ಲಿ ಗ್ರೀಸ್ನ ಸ್ಟೆಫನೊಸ್ ಸಿಟ್ಸಿಪಾಸ್ ಅಥವಾ ಚೀನಾದ ಝಾಂಗ್ ಝಿಝೆನ್ರನ್ನು ಎದುರಿಸಲಿದ್ದಾರೆ.
ನಾಲ್ಕನೇ ಸುತ್ತಿಗೆ ತಲುಪಿದ ಕೊಕೊ ಗೌಫ್
ಫ್ರೆಂಚ್ ಓಪನ್ ಟೂರ್ನಿಯಲ್ಲಿ ಶುಕ್ರವಾರ ಅಮೆರಿಕದ ಮೂರನೇ ಶ್ರೇಯಾಂಕದ ಆಟಗಾರ್ತಿ ಕೊಕೊ ಗೌಫ್ ಉಕ್ರೇನ್ನ ಡಯಾನಾ ಯಾಸ್ಟ್ರೆಂಸ್ಕಾರನ್ನು 6-2, 6-4 ನೇರ ಸೆಟ್ಗಳ ಅಂತರದಿಂದ ಮಣಿಸಿದರು. ಈ ಗೆಲುವಿನ ಮೂಲಕ 4ನೇ ಸುತ್ತಿಗೇರಿದ್ದಾರೆ. ಮೂರು ವರ್ಷಗಳ ಪ್ರಶಸ್ತಿ ಬರ ನೀಗಿಸಿಕೊಳ್ಳುವತ್ತ ದಿಟ್ಟ ಹೆಜ್ಜೆ ಇಟ್ಟಿದ್ದಾರೆ.
ಕಳೆದ ವರ್ಷ ಪ್ಯಾರಿಸ್ನಲ್ಲಿ ಫೈನಲ್ಗೆ ತಲುಪಿರುವ, 2021ರಲ್ಲಿ ಕ್ಲೇ-ಕೋರ್ಟ್ ಪ್ರಶಸ್ತಿ ಜಯಿಸಿದ್ದ, ಅಮೆರಿಕನ್ ಓಪನ್ ಚಾಂಪಿಯನ್ ಗೌಫ್ ಈ ವರ್ಷದ ಆಸ್ಟ್ರೇಲಿಯನ್ ಓಪನ್ನಲ್ಲಿ ಸೆಮಿ ಫೈನಲ್ ತಲುಪಿ ಅಚ್ಚರಿ ಮೂಡಿಸಿದ್ದ ಡಯಾನಾ ವಿರುದ್ಧದ ಮೊದಲ ಸೆಟನ್ನು ಸುಲಭವಾಗಿ ಗೆದ್ದುಕೊಂಡರು. ಗೌಫ್ ಎರಡನೇ ಸೆಟ್ನಲ್ಲಿ ಸ್ವಲ್ಪ ಮಟ್ಟಿನ ಸವಾಲು ಎದುರಿಸಿದರು.
ಗೌಫ್ ಮುಂದಿನ ಸುತ್ತಿನಲ್ಲಿ ಇಟಲಿಯ ವಿಶ್ವದ ನಂ.51ನೇ ಆಟಗಾರ್ತಿ ಎಲಿಸಾಬೆಟ್ಟಾರನ್ನು ಎದುರಿಸಲಿದ್ದಾರೆ.