ಫ್ರೆಂಚ್ ಓಪನ್ ಟೆನಿಸ್ ಟೂರ್ನಮೆಂಟ್ | ಹಾಲಿ ಚಾಂಪಿಯನ್ ಇಗಾ ಸ್ವಿಯಾಟೆಕ್ ಗೆ ಜಯ
PC : NDTV
ಪ್ಯಾರಿಸ್: ಪ್ರತಿ ಹೋರಾಟ ನೀಡಿ ಜಪಾನ್ ಆಟಗಾರ್ತಿ ನವೊಮಿ ಒಸಾಕಾರನ್ನು ಮಣಿಸಿದ ಹಾಲಿ ಚಾಂಪಿಯನ್ ಇಗಾ ಸ್ವಿಯಾಟೆಕ್ ಫ್ರೆಂಚ್ ಓಪನ್ಟೆನಿಸ್ ಟೂರ್ನಮೆಂಟ್ ನಲ್ಲಿ ಮೂರನೇ ಸುತ್ತು ತಲುಪಿದ್ದಾರೆ.
ನಾಲ್ಕು ಬಾರಿ ಗ್ರ್ಯಾನ್ಸ್ಲಾಮ್ ಚಾಂಪಿಯನ್ ಗಳಾದ ಸ್ವಿಯಾಟೆಕ್ ಹಾಗೂ ಒಸಾಕಾ ನಡುವೆ ತೀವ್ರ ಹೋರಾಟ ಕಂಡುಬಂದಿದ್ದು 2020 ಹಾಗೂ 2022ರಲ್ಲಿ ಫ್ರೆಂಚ್ ಓಪನ್ ಪ್ರಶಸ್ತಿ ಜಯಿಸಿದ್ದ ಸ್ವಿಯಾಟೆಕ್ 2023ರಲ್ಲಿ ಮತ್ತೊಂದು ಪ್ರಶಸ್ತಿ ಜಯಿಸಿದ್ದರು.
ಮಹಿಳೆಯರ ಸಿಂಗಲ್ಸ್ ನ ಎರಡನೇ ಸುತ್ತಿನ ಪಂದ್ಯದಲ್ಲಿ ಸ್ವಿಯಾಟೆಕ್ 7-6(1), 1-6, 7-5 ಸೆಟ್ ಗಳ ಅಂತರದಿಂದ ಜಯ ಸಾಧಿಸಿದರು.
ಈ ಪಂದ್ಯವು ತೀವ್ರ ಪೈಪೋಟಿಯಿಂದ ಕೂಡಿತ್ತು. 2ನೇ ಸುತ್ತಿನಲ್ಲಿ ನಾನು ನಿರೀಕ್ಷೆ ಮಾಡಿದ್ದಕ್ಕಿಂತ ಹೆಚ್ಚು ಸ್ಪರ್ಧೆ ಇತ್ತು. ನಾನು ಮುಂದಿನ ಬಾರಿ ಹೆಚ್ಚು ತಯಾರಿ ನಡೆಸುವೆ. ನವೊಮಿ ಕೆಲವು ಅದ್ಭುತ ಟೆನಿಸ್ ಆಡಿದರು ಎಂದು ಪಂದ್ಯದ ನಂತರ ಸ್ವಿಯಾಟೆಕ್ ಹೇಳಿದ್ದಾರೆ.
ಒಸಾಕಾ ಅವರು ಹೆರಿಗೆ ರಜೆಯ ನಂತರ 2022ರ ಬಳಿಕ ಫ್ರೆಂಚ್ ಓಪನ್ ಟೂರ್ನಿಗೆ ವಾಪಸಾದರು. ಒಸಾಕಾ ಎರಡನೇ ಸೆಟ್ನಲ್ಲಿ ಅತ್ಯುತ್ತಮ ಫಾರ್ಮ್ ಪ್ರದರ್ಶಿಸಿದರು.
ಮೂರನೇ ಸೆಟ್ನಲ್ಲಿ ಒಸಾಕಾ 5-2 ಮುನ್ನಡೆ ಪಡೆದಿದ್ದರೂ ಹಲವು ಅನಗತ್ಯ ತಪ್ಪೆಸಗಿ ಅದೇ ತೀವ್ರತೆ ಕಾಯ್ದುಕೊಳ್ಳುವಲ್ಲಿ ವಿಫಲರಾದರು. ಎದುರಾಳಿ ಸ್ವಿಯಾಟೆಕ್ ಸತತ 5 ಗೇಮ್ಗಳನ್ನು ಗೆಲ್ಲಲು ಅನುವು ಮಾಡಿಕೊಟ್ಟರು. ಅಂತಿಮವಾಗಿ ಸ್ವಿಯಾಟೆಕ್ ಪಂದ್ಯವನ್ನು ಜಯಿಸಿದರು. ಇತ್ತೀಚೆಗೆ ಮ್ಯಾಡ್ರಿಡ್ ಹಾಗೂ ರೋಮ್ನಲ್ಲಿ ಯಶಸ್ಸು ಗಳಿಸಿದ್ದ ಸ್ವಿಯಾಟೆಕ್ ಸತತ ಗೆಲುವಿನ ಓಟವನ್ನು 14 ಪಂದ್ಯಗಳಿಗೆ ವಿಸ್ತರಿಸಿದರು.
ಪ್ರತಿಕೂಲ ಹವಾಮಾನದಿಂದಾಗಿ ಕೇವಲ 9 ಪಂದ್ಯಗಳು ಪೂರ್ಣಗೊಂಡಿವೆ. ಕಾರ್ಲೊಸ್ ಅಲ್ಕರಾಝ್, ಸ್ಟೆಫನೊಸ್ ಸಿಟ್ಸಿಪಾಸ್, ಕೊಕೊ ಗೌಫ್ ಹಾಗೂ ಜನ್ನಿಕ್ ಸಿನ್ನೆರ್ ಮೂರನೇ ಸುತ್ತಿಗೆ ತಲುಪಿದರು.
ಕೊಕೊ ಗೌಫ್ ಮೂರನೇ ಸುತ್ತಿಗೆ ಪ್ರವೇಶ
ಅಮೆರಿಕದ ಟೆನಿಸ್ ಆಟಗಾರ್ತಿ ಕೊಕೊ ಗೌಫ್ ಫ್ರೆಂಚ್ ಓಪನ್ನ ಎರಡನೇ ಸುತ್ತಿನ ಪಂದ್ಯದಲ್ಲಿ ಸ್ಲೋವೆನಿಯದ ಟಮಾರಾ ಝಿದಾನ್ಸೆಕ್ರನ್ನು 6-3, 6-4 ನೇರ ಸೆಟ್ಗಳಿಂದ ಮಣಿಸಿದರು.
ಆರು ಡಬಲ್ ಫಾಲ್ಟ್ನ ಮೂಲಕ ಸ್ವಲ್ಪಮಟ್ಟಿನ ಸಂಕಷ್ಟ ಎದುರಿಸಿದ ಹೊರತಾಗಿಯೂ ಗೌಫ್ ಮೂರನೇ ಸುತ್ತಿಗೆ ಪ್ರವೇಶಿಸಿದರು.
ಗೌಫ್ ಮುಂದಿನ ಸುತ್ತಿನಲ್ಲಿ ಚೀನಾದ ವಾಂಗ್ ಯಫನ್ ಅಥವಾ ಉಕ್ರೇನ್ನ ಡಯಾನಾ ಯಸ್ಟ್ರೆಂಸ್ಕಾರನ್ನು ಎದುರಿಸಲಿದ್ದಾರೆ.
ಯು.ಎಸ್. ಓಪನ್ನಲ್ಲಿ ತನ್ನ ಮೊದಲ ಪ್ರಮುಖ ಪ್ರಶಸ್ತಿ ಗೆದ್ದುಕೊಂಡಿರುವ ಗೌಫ್ ಎರಡನೇ ಸೆಟ್ಟನ್ನು ಸುಲಭವಾಗಿ ಗೆದ್ದುಕೊಂಡರು.
ನಾನು ಆಡಿರುವ ರೀತಿಯು ನನಗೆ ಖುಷಿಕೊಟ್ಟಿದೆ ಎಂದು ವಿಶ್ವದ ಮೂರನೇ ರ್ಯಾಂಕಿನ ಆಟಗಾರ್ತಿ ಗೌಫ್ ಹೇಳಿದ್ದಾರೆ.
ವಿಶ್ವದ ನಂ.2ನೇ ಆಟಗಾರ ಜನ್ನಿಕ್ ಸಿನ್ನೆರ್ ಮೂರನೇ ಸುತ್ತಿಗೆ ಲಗ್ಗೆ
ವಿಶ್ವ ಟೆನಿಸ್ ರ್ಯಾಂಕಿಂಗ್ನಲ್ಲಿ ಸದ್ಯ 2ನೇ ಸ್ಥಾನದಲ್ಲಿರುವ ಜನ್ನಿಕ್ ಸಿನ್ನೆರ್ ಫ್ರೆಂಚ್ ಓಪನ್ ಟೆನಿಸ್ ಟೂರ್ನಮೆಂಟ್ನಲ್ಲಿ ಮೂರನೇ ಸುತ್ತು ತಲುಪಿದ್ದಾರೆ.
ಬುಧವಾರ ನಡೆದ ಪುರುಷರ ಸಿಂಗಲ್ಸ್ನ ಎರಡನೇ ಸುತ್ತಿನ ಪಂದ್ಯದಲ್ಲಿ ಈ ಹಿಂದೆ ಆಸ್ಟ್ರೇಲಿಯನ್ ಓಪನ್ ಚಾಂಪಿಯನ್ ಆಗಿರುವ ಸಿನ್ನೆರ್ ಅವರು ರಿಚರ್ಡ್ ಗ್ಯಾಸ್ಕ್ಕೆಟ್ ವಿರುದ್ಧ 6-4, 6-2, 6-4 ನೇರ ಸೆಟ್ಗಳ ಅಂತರದಿಂದ ಜಯ ಸಾಧಿಸಿದರು.
ಈ ಗೆಲುವಿನ ಮೂಲಕ ಸಿನ್ನೆರ್ ಗ್ರ್ಯಾನ್ಸ್ಲಾಮ್ ಟೂರ್ನಿಯಲ್ಲಿ ನಾಲ್ಕನೇ ಬಾರಿ ಅಂತಿಮ-32ರ ಸುತ್ತು ತಲುಪಿದ್ದಾರೆ. ಸ್ಪರ್ಧಾವಳಿಯಲ್ಲಿ ಉತ್ತಮ ಪ್ರದರ್ಶನ ನೀಡುತ್ತಿರುವ ಸಿನ್ನೆರ್ ವೃತ್ತಿಜೀವನದಲ್ಲಿ ಎರಡನೇ ಬಾರಿ ಗ್ರ್ಯಾನ್ಸ್ಲಾಮ್ ಪ್ರಶಸ್ತಿ ಗೆಲ್ಲುವುದಲ್ಲದೆ, ವಿಶ್ವ ರ್ಯಾಂಕಿಂಗ್ನಲ್ಲಿ ಅಗ್ರ ಸ್ಥಾನಕ್ಕೇರುವ ಗುರಿ ಇಟ್ಟುಕೊಂಡಿದ್ದಾರೆ.
37ರ ಹರೆಯದ ಗ್ಯಾಸ್ಕ್ಕೆಟ್ 2002ರಲ್ಲಿ ಫ್ರೆಂಚ್ ಓಪನ್ನಲ್ಲಿ ಮೊದಲ ಪಂದ್ಯ ಆಡಿದಾಗ ಇಟಲಿಯ ಸಿನ್ನೆರ್ 9 ತಿಂಗಳು ಮಗುವಾಗಿದ್ದರು.
ಸಿನ್ನೆರ್ ಮುಂದಿನ ಸುತ್ತಿನಲ್ಲಿ ಪಾವೆಲ್ ಕೊಟೊವ್ ಅವರ ಸವಾಲನ್ನು ಎದುರಿಸಲಿದ್ದಾರೆ. ಕೊಟೊವ್ ಬುಧವಾರ ನಡೆದ ಪಂದ್ಯದಲ್ಲಿ 2015ರ ಫ್ರೆಂಚ್ ಓಪನ್ ಚಾಂಪಿಯನ್ ಸ್ಟ್ಯಾನ್ ವಾವ್ರಿಂಕರನ್ನು ಸೋಲಿಸಿದ್ದಾರೆ.
ಕೊಟೊವ್ ವಿರುದ್ಧ ಮುಂಬರುವ ಪಂದ್ಯವು ಸಿನ್ನೆರ್ಗೆ ನಿರ್ಣಾಯಕವಾಗಿದೆ. ಈ ಪಂದ್ಯದಲ್ಲಿ ಅವರು ಜಯ ಸಾಧಿಸಿದರೆ ಅಂತಿಮ-16ರ ಸುತ್ತು ತಲುಪಿ ಗ್ರ್ಯಾನ್ಸ್ಲಾಮ್ ಗೆಲ್ಲುವತ್ತ ಹೆಜ್ಜೆ ಇಡಬಹುದು.
ಆರನೇ ಶ್ರೇಯಾಂಕದ ಆಂಡ್ರೆ ರುಬ್ಲೆವ್ ಅವರು ಪೆಡ್ರೊ ಮಾರ್ಟಿನೆಝ್ರನ್ನು ನೇರ ಸೆಟ್ಗಳ ಅಂತರದಿಂದ ಮಣಿಸಿದರು.