ಫ್ರೆಂಚ್ ಓಪನ್ | ಸತತ ನಾಲ್ಕನೇ ಬಾರಿ ಸೆಮಿ ಫೈನಲ್ ಗೆ ಪ್ರವೇಶಿಸಿದ ಝ್ವೆರೆವ್
PC: PTI
ಪ್ಯಾರಿಸ್: ಆಸ್ಟ್ರೇಲಿಯದ ಆಟಗಾರ ಅಲೆಕ್ಸ್ ಮಿನೌರ್ ರನ್ನು ಮಣಿಸಿದ ಅಲೆಕ್ಸಾಂಡರ್ ಝ್ವೆರೆವ್ ಫ್ರೆಂಚ್ ಓಪನ್ ಟೆನಿಸ್ ಟೂರ್ನಿಯಲ್ಲಿ ಸತತ ನಾಲ್ಕನೇ ಬಾರಿ ಸೆಮಿ ಫೈನಲ್ ಗೆ ತಲುಪಿದ್ದಾರೆ.
ಬುಧವಾರ ನಡೆದ ಪುರುಷರ ಸಿಂಗಲ್ಸ್ ನ ಕ್ವಾರ್ಟರ್ ಫೈನಲ್ ನಲ್ಲಿ ತನ್ನ ಪ್ರತಿರೋಧ ಹಾಗೂ ಶಕ್ತಿಯನ್ನು ತೋರ್ಪಡಿಸಿದ ಜರ್ಮನಿಯ 4ನೇ ಶ್ರೇಯಾಂಕದ ಆಟಗಾರ ಝ್ವೆರೆವ್ 11ನೇ ಶ್ರೇಯಾಂಕದ ಮಿನೌರ್ ರನ್ನು 6-4, 7-6(7/5), 6-4 ಸೆಟ್ ಗಳ ಅಂತರದಿಂದ ಸೋಲಿಸಿದ್ದಾರೆ.
ರವಿವಾರ ನಡೆಯಲಿರುವ ಫೈನಲ್ ನಲ್ಲಿ ಸ್ಥಾನ ಗಿಟ್ಟಿಸಲು ಝ್ವೆರೆವ್ ಮುಂದಿನ ಸುತ್ತಿನಲ್ಲಿ ನಾರ್ವೆ ಆಟಗಾರ ಕಾಸ್ಪರ್ ರೂಡ್ ರನ್ನು ಎದುರಿಸಲಿದ್ದಾರೆ. ನೊವಾಕ್ ಜೊಕೊವಿಕ್ ಗಾಯದ ಸಮಸ್ಯೆಯ ಕಾರಣದಿಂದ ಕ್ವಾರ್ಟರ್ ಫೈನಲ್ ಸ್ಪರ್ಧೆಯಿಂದ ಹಿಂದೆ ಸರಿದ ಕಾರಣ ಎದುರಾಳಿ ರೂಡ್ ಸೆಮಿ ಫೈನಲ್ ಗೆ ವಾಕ್ಓವರ್ ಪಡೆದಿದ್ದರು.
ಇತ್ತೀಚೆಗೆ ರೋಮ್ ಮಾಸ್ಟರ್ಸ್ನ ನಲ್ಲಿ ಪ್ರಶಸ್ತಿ ಗೆದ್ದಿರುವುದು ಸೇರಿದಂತೆ ಸತತ 11 ಪಂದ್ಯಗಳಲ್ಲಿ ಜಯ ಸಾಧಿಸಿ ಆತ್ಮವಿಶ್ವಾಸದಲ್ಲಿ ತೇಲುತ್ತಿರುವ ಝ್ವೆರೆವ್ ಫ್ರೆಂಚ್ ಓಪನ್ ನಲ್ಲಿ ಮೊದಲ ಬಾರಿ ಫೈನಲ್ ತಲುಪುವ ಗುರಿ ಇಟ್ಟುಕೊಂಡಿದ್ದಾರೆ.
ಮತ್ತೊಮ್ಮೆ ಸಮಿ ಫೈನಲ್ ತಲುಪಿರುವುದು ನನಗೆ ಸಂತೋಷವಾಗುತ್ತಿದೆ. ಈ ಪಂದ್ಯವನ್ನು ಗೆಲ್ಲುವ ವಿಶ್ವಾಸ ನನಗಿದೆ ಎಂದು ಝ್ವೆರೆವ್ ಹೇಳಿದ್ದಾರೆ.
ಹಲ್ಲೆಯ ಆರೋಪದಲ್ಲಿ ಬರ್ಲಿನ್ ನಲ್ಲಿ ತನ್ನ ವಿರುದ್ಧ ವಿಚಾರಣೆ ನಡೆಯುತ್ತಿರುವ ನಡುವೆಯೂ ಸೆಮಿ ಫೈನಲ್ ಗೆ ತಲುಪಿರುವ ಝ್ವೆರೆವ್ ತನ್ನ ಟೆನಿಸ್ ಮಹತ್ವಾಕಾಂಕ್ಷೆಯತ್ತ ಹೆಚ್ಚು ಗಮನ ಹರಿಸಿದ್ದಾರೆ. ಫ್ರೆಂಚ್ ಓಪನ್ ನಲ್ಲಿ 2022ರಲ್ಲಿ ರಫೆಲ್ ನಡಾಲ್ ವಿರುದ್ಧ ಪಂದ್ಯದಲ್ಲಿ ಗಂಭೀರ ಮೊಣಕಾಲು ನೋವು ಹಾಗೂ 2021ರಲ್ಲಿ ಸ್ಟೆಫನೊಸ್ ಸಿಟ್ಸಿಪಾಸ್ ವಿರುದ್ಧ 5 ಸೆಟ್ ಗಳಿಂದ ಸೋತಿದ್ದ ಝ್ವೆರೆವ್ ಈ ಬಾರಿ ಇಂತಹದ್ದೆಲ್ಲ ಅಡೆತಡೆ ದಾಟುವ ವಿಶ್ವಾಸದಲ್ಲಿದ್ದಾರೆ.