ಒಂದೇ ವರ್ಷದಲ್ಲಿ ಸ್ವದೇಶಿ ಟೆಸ್ಟ್ ಪಂದ್ಯದಲ್ಲಿ ಸಾವಿರಕ್ಕೂ ಅಧಿಕ ರನ್ | ಜಿ. ವಿಶ್ವನಾಥ್, ಸುನೀಲ್ ಗವಾಸ್ಕರ್ ಅವರಿದ್ದ ಪಟ್ಟಿಗೆ ಜೈಸ್ವಾಲ್ ಸೇರ್ಪಡೆ
ಜೈಸ್ವಾಲ್ | PC : PTI
ಪುಣೆ : ಭಾರತದ ಯುವ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ ಟೆಸ್ಟ್ ಕ್ರಿಕೆಟ್ನಲ್ಲಿ ತನ್ನ ಶ್ರೇಷ್ಠ ಫಾರ್ಮ್ ಮುಂದುವರಿಸಿದ್ದು, ಮತ್ತೊಮ್ಮೆ ದಾಖಲೆ ಪುಸ್ತಕದಲ್ಲಿ ತನ್ನ ಹೆಸರು ದಾಖಲಿಸಿದ್ದಾರೆ.
2023ರ ಜುಲೈನಲ್ಲಿ ಭಾರತದ ಪರ ಚೊಚ್ಚಲ ಪಂದ್ಯ ಆಡಿದ್ದ 22ರ ಹರೆಯದ ಎಡಗೈ ಆಟಗಾರ ಒಂದೇ ಕ್ಯಾಲೆಂಡರ್ ವರ್ಷದಲ್ಲಿ ಸ್ವದೇಶಿ ಟೆಸ್ಟ್ ಪಂದ್ಯದಲ್ಲಿ 1,000ಕ್ಕೂ ಅಧಿಕ ರನ್ ಗಳಿಸಿದ ಭಾರತದ ಮೂರನೇ ಕ್ರಿಕೆಟಿಗನೆಂಬ ಕೀರ್ತಿಗೆ ಭಾಜನರಾಗಿ ಶನಿವಾರ ಮತ್ತೊಂದು ಮೈಲಿಗಲ್ಲು ತಲುಪಿದರು.
ಭಾರತದ ಲೆಜೆಂಡ್ಗಳಾದ ಗುಂಡಪ್ಪ ವಿಶ್ವನಾಥ್(1,047 ರನ್)ಹಾಗೂ ಸುನೀಲ್ ಗವಾಸ್ಕರ್(1,013 ರನ್)ಅವರನ್ನೊಳಗೊಂಡ ಎಲೈಟ್ ಪಟ್ಟಿಗೆ ಜೈಸ್ವಾಲ್ ಸೇರ್ಪಡೆಯಾದರು. ವಿಶ್ವನಾಥ್ ಹಾಗೂ ಗವಾಸ್ಕರ್ 1979ರಲ್ಲಿ ಈ ಸಾಧನೆ ಮಾಡಿದ್ದರು.
23 ವರ್ಷಕ್ಕೆ ಕಾಲಿಡುವ ಮೊದಲೇ ಕ್ಯಾಲೆಂಡರ್ ವರ್ಷದಲ್ಲಿ 1,000 ಟೆಸ್ಟ್ ರನ್ ಗಳಿಸಿದ ಭಾರತದ ಮೊದಲ ಕ್ರಿಕೆಟಿಗನೆಂಬ ಹಿರಿಮೆಗೆ ಪಾತ್ರರಾದ ಮರುದಿನವೇ ಈ ಸಾಧನೆ ಮಾಡಿದ್ದಾರೆ. ತನ್ನ ಕಿರು ವೃತ್ತಿಜೀವನದಲ್ಲಿ ಅಮೋಘ ಪ್ರದರ್ಶನದ ಮೂಲಕ ಸುಮಾರು 60ರ ಸರಾಸರಿಯಲ್ಲಿ ಮೂರು ಶತಕ ಹಾಗೂ 8 ಅರ್ಧಶತಕಗಳ ಸಹಿತ 1,300ಕ್ಕೂ ಅಧಿಕ ರನ್ ಗಳಿಸಿದ್ದಾರೆ.
ನ್ಯೂಝಿಲ್ಯಾಂಡ್ ವಿರುದ್ಧದ 2ನೇ ಟೆಸ್ಟ್ ಪಂದ್ಯದ 2ನೇ ಇನಿಂಗ್ಸ್ನಲ್ಲಿ ಕ್ಯಾಲೆಂಡರ್ ವರ್ಷದಲ್ಲಿ ಟೆಸ್ಟ್ ಕ್ರಿಕೆಟಿನಲ್ಲಿ 30ಕ್ಕೂ ಅಧಿಕ ಸಿಕ್ಸರ್ಗಳನ್ನು ಸಿಡಿಸಿದ ಭಾರತದ ಮೊದಲ ಹಾಗೂ ವಿಶ್ವದ ಎರಡನೇ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಜೈಸ್ವಾಲ್ ಅವರು ನ್ಯೂಝಿಲ್ಯಾಂಡ್ನ ಬ್ರೆಂಡನ್ ಮೆಕಲಮ್ ಅವರ ಸಾಧನೆ ಸರಿಗಟ್ಟಿದರು. ಮೆಕಲಮ್ 2014ರಲ್ಲಿ ಈ ಮೈಲಿಗಲ್ಲು ತಲುಪಿದ್ದಾರೆ.
ಪ್ರಸಕ್ತ ಟೆಸ್ಟ್ ಪಂದ್ಯದಲ್ಲಿ ಭಾರತವು 359 ರನ್ ಚೇಸ್ ಮಾಡುವಾಗ ಜೈಸ್ವಾಲ್ 65 ಎಸೆತಗಳಲ್ಲಿ 77 ರನ್ ಗಳಿಸಿ ದಿಟ್ಟ ಹೋರಾಟ ನೀಡಿದರು. ಶುಭಮನ್ ಗಿಲ್(23 ರನ್)ಅವರೊಂದಿಗೆ 2ನೇ ವಿಕೆಟ್ಗೆ 62 ರನ್ ಜೊತೆಯಾಟವನ್ನು ನಡೆಸಿದರು.
ನಿರಂತರವಾಗಿ ದಾಖಲೆಗಳನ್ನು ನಿರ್ಮಿಸುತ್ತಿರುವ ಮುಂಬೈ ಬ್ಯಾಟರ್ ಜೈಸ್ವಾಲ್ ಭಾರತದ ಟೆಸ್ಟ್ ಕ್ರಿಕೆಟಿನ ಓರ್ವ ಯುವ ಪ್ರತಿಭಾವಂತ ಆಟಗಾರನಾಗಿ ಹೊರಹೊಮ್ಮಿದ್ದಾರೆ.
► ಕ್ಯಾಲೆಂಡರ್ ವರ್ಷದಲ್ಲಿ ಸ್ವದೇಶಿ ಟೆಸ್ಟ್ನಲ್ಲಿ 1,000ಕ್ಕೂ ಅಧಿಕ ರನ್ ಗಳಿಸಿದವರು
1,047: ಗುಂಡಪ್ಪ ವಿಶ್ವನಾಥ್(1979)
1,013: ಸುನೀಲ್ ಗವಾಸ್ಕರ್(1979)
1,058: ಗ್ರಹಾಂ ಗೂಚ್(1990)
1,012: ಜಸ್ಟಿನ್ ಲ್ಯಾಂಗರ್(2004)
1,126: ಮುಹಮ್ಮದ್ ಯೂಸುಫ್(2006)
1,407: ಮೈಕಲ್ ಕ್ಲಾರ್ಕ್(2012)
1,000: ಯಶಸ್ವಿ ಜೈಸ್ವಾಲ್(2024)