ನಾವು ಯಾವುದೇ ರೀತಿಯ ಪಿಚ್ ಗೆ ಸಿದ್ಧ : ಆಸ್ಟ್ರೇಲಿಯಕ್ಕೆ ಗಂಭೀರ್ ಸವಾಲು
ಗೌತಮ್ ಗಂಭೀರ್ | PC : PTI
ಹೊಸದಿಲ್ಲಿ : ಯಾವುದೇ ರೀತಿಯ ಪಿಚ್ ಸಿದ್ಧಪಡಿಸಿ, ನಾವು ಅದಕ್ಕೆ ಸಿದ್ಧವಿದ್ದೇವೆ ಎಂದು ಭಾರತದ ಮುಖ್ಯ ಕೋಚ್ ಹಾಗೂ ಮಾಜಿ ಬ್ಯಾಟ್ಸ್ಮನ್ ಗೌತಮ್ ಗಂಭೀರ್ ಆಸ್ಟ್ರೇಲಿಯಕ್ಕೆ ಸವಾಲೆಸೆದಿದ್ದಾರೆ.
ಬಾರ್ಡರ್-ಗವಾಸ್ಕರ್ ಟ್ರೋಫಿಗಾಗಿ ನಡೆಯುವ ಟೆಸ್ಟ್ ಸರಣಿಗೆ ಆಯ್ಕೆ ಮಾಡಿರುವ ಭಾರತೀಯ ಟೆಸ್ಟ್ ತಂಡವು ಯಾವುದೇ ರೀತಿಯ ಪಿಚ್ ಅನ್ನು ಎದುರಿಸಲು ಸಿದ್ಧವಿದೆ ಎಂದು ಗಂಭೀರ್ ಒತ್ತಿ ಹೇಳಿದರು.
ಭಾರತ ಕ್ರಿಕೆಟ್ ತಂಡ ಬಾರ್ಡರ್-ಗವಾಸ್ಕರ್ ಟ್ರೋಫಿಗಾಗಿ ಆಸ್ಟ್ರೇಲಿಯ ವಿರುದ್ಧ ನಡೆಯುವ ಐದು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯವನ್ನು ನವೆಂಬರ್ 22ರಂದು ಪರ್ತ್ನಲ್ಲಿ ಆಡಲಿದೆ.
ಭಾರತೀಯ ಆಟಗಾರರೊಂದಿಗೆ ಆಸ್ಟ್ರೇಲಿಯಕ್ಕೆ ಪ್ರಯಾಣ ಬೆಳೆಸುವ ಮೊದಲು ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಗಂಭೀರ್, ಟೆಸ್ಟ್ ಸರಣಿಗೆ ಆಸ್ಟ್ರೇಲಿಯ ಸಿದ್ಧಪಡಿಸುವ ಪಿಚ್ಗಳನ್ನು ಎದುರಿಸಲು ಭಾರತ ತಂಡ ಸಜ್ಜಾಗಿದೆ ಎಂದರು.
ಪಿಚ್ ಗಳ ಮೇಲೆ ನಮಗೆ ನಿಯಂತ್ರಣ ಇರುವುದಿಲ್ಲ, ನಾವು ಯಾವುದೇ ರೀತಿಯ ಪಿಚ್ ನಲ್ಲಿ ಆಡಲು ಸಜ್ಜಾಗಿದ್ದೇವೆ. ಯಾವ ರೀತಿಯ ಪಿಚ್ ಸಿದ್ಧಪಡಿಸಬೇಕೆನ್ನುವುದು ಕ್ಯುರೇಟರ್ಗೆ ಬಿಟ್ಟ ವಿಚಾರ. ನಾವು ಎಲ್ಲ ರೀತಿಯ ಪರಿಸ್ಥಿತಿಗೆ ಹೊಂದಿಕೊಳ್ಳಲು ಸಿದ್ದರಾಗಿದ್ದೇವೆ. ನಾವು ಅತ್ಯುತ್ತಮ ಕ್ರಿಕೆಟ್ ಆಡಿದರೆ, ಆಸ್ಟ್ರೇಲಿಯ ತಂಡವನ್ನು ಸೋಲಿಸಬಹುದು ಎಂದು ಗಂಭೀರ್ ಹೇಳಿದ್ದಾರೆ.
ಮೊದಲ ಟೆಸ್ಟ್ ಆರಂಭವಾಗುವ 10 ದಿನಗಳ ಮುಂಚಿತವಾಗಿಯೇ ಭಾರತ ತಂಡವು ಆಸ್ಟ್ರೇಲಿಯಕ್ಕೆ ತೆರಳಲಿದೆ. ಇದರಿಂದ ಅಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳಲು ಹಾಗೂ ಪರ್ತ್ ನ ಬೌನ್ಸಿ ಪಿಚ್ಗಳಲ್ಲಿ ಪ್ರಾಕ್ಟೀಸ್ ನಡೆಸಲು ಸಾಕಷ್ಟು ಸಮಯ ನೀಡಲಿದೆ.
ನೆಟ್ ನಲ್ಲಿ ಹೆಚ್ಚು ಸಮಯ ಕಳೆಯಲು ಟೀಮ್ ಇಂಡಿಯಾವು ಆಸ್ಟ್ರೇಲಿಯ ʼಎʼ ವಿರುದ್ಧದ ತನ್ನ ಪ್ರಾಕ್ಟೀಸ್ ಪಂದ್ಯವನ್ನು ರದ್ದುಪಡಿಸಿದೆ. ಭಾರತ ತಂಡವು ವಾಕಾದಲ್ಲಿ ತರಬೇತಿ ನಡೆಸಲಿದ್ದು, ಮೊದಲ ಪಂದ್ಯವು ಒಪ್ಟಸ್ ಕ್ರೀಡಾಂಗಣದಲ್ಲಿ ನಡೆಯಲಿದೆ.
ನನ್ನ ಪ್ರಕಾರ ಸರಣಿ ಆರಂಭವಾಗುವ ಮೊದಲು ಸರಿಯಾದ ತಯಾರಿಗೆ 10 ದಿನಗಳು ಸಾಕಾಗುತ್ತದೆ. ಈ 10 ದಿನಗಳು ಅತ್ಯಂತ ನಿರ್ಣಾಯಕ ಎನ್ನುವುದು ಖಚಿತ. ಹಲವು ಬಾರಿ ಆಸ್ಟ್ರೇಲಿಯಕ್ಕೆ ತೆರಳಿರುವ ಸಾಕಷ್ಟು ಅನುಭವ ಹೊಂದಿರುವ ಆಟಗಾರರು ನಮ್ಮಲ್ಲಿದ್ದಾರೆ. ಇವರ ಅನುಭವವು ಯುವ ಆಟಗಾರರಿಗೂ ನೆರವಾಗಬಹುದು ಎಂದು ಗಂಭೀರ್ ಹೇಳಿದ್ದಾರೆ.
ಬಾರ್ಡರ್-ಗವಾಸ್ಕರ್ ಟ್ರೋಫಿಗಿಂತ ಮೊದಲು ಭಾರತವು ಸೂಕ್ತ ತಯಾರಿ ನಡೆಸಿಲ್ಲ. ಈಗಾಗಲೇ ಸ್ವದೇಶದಲ್ಲಿ ನಡೆದಿರುವ ನ್ಯೂಝಿಲ್ಯಾಂಡ್ ವಿರುದ್ಧದ 3 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 0-3 ಅಂತರದಿಂದ ವೈಟ್ ವಾಶ್ ಮುಖಭಂಗ ಅನುಭವಿಸಿದೆ. ಹಿರಿಯ ಆಟಗಾರರಾದ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಸದ್ಯ ಉತ್ತಮ ಫಾರ್ಮ್ನಲ್ಲಿಲ್ಲ.