ಒಂದೇ ತಿಂಗಳಲ್ಲಿ ಕೀನ್ಯದ ಮುಖ್ಯ ಕೋಚ್ ಹುದ್ದೆ ಕಳೆದುಕೊಂಡ ದೊಡ್ಡ ಗಣೇಶ್
ಗಣೇಶ್ | PC : X
ನೈರೋಬಿ : ಭಾರತ ಹಾಗೂ ಕರ್ನಾಟಕವನ್ನು ಪ್ರತಿನಿಧಿಸಿರುವ ಮಾಜಿ ವೇಗದ ಬೌಲರ್ ದೊಡ್ಡ ಗಣೇಶ್ ಅವರನ್ನು ಕೀನ್ಯ ಪುರುಷರ ಕ್ರಿಕೆಟ್ ತಂಡದ ಮುಖ್ಯ ಕೋಚ್ ಸ್ಥಾನದಿಂದ ಕೆಳಗಿಳಿಸಲಾಗಿದೆ. ಗಣೇಶ್ ಕಳೆದ ತಿಂಗಳಷ್ಟೇ ಮುಖ್ಯ ಕೋಚ್ ಹುದ್ದೆಗೆ ನೇಮಕಗೊಂಡಿದ್ದರು.
ಗಣೇಶ್ ಆಗಸ್ಟ್ 14ರಂದು ಕೋಚ್ ಹುದ್ದೆಗಾಗಿ ಒಂದು ವರ್ಷದ ಒಪ್ಪಂದ ಸಹಿ ಹಾಕಿದ್ದರು. ಹುದ್ದೆವಹಿಸಿಕೊಂಡು ಒಂದು ತಿಂಗಳೊಳಗೆ 51ರ ಹರೆಯದ ದೊಡ್ಡ ಗಣೇಶ್ರನ್ನು ಕರ್ತವ್ಯದಿಂದ ಮುಕ್ತಗೊಳಿಸಲಾಗಿದೆ.
ಗಣೇಶ್ ಅವರ ನೇಮಕಾತಿಯನ್ನು ಸರಿಯಾಗಿ ನಡೆಸಲಾಗಿಲ್ಲ ಎಂದು ಕ್ರಿಕೆಟ್ ಕೀನ್ಯದ ಕಾರ್ಯಕಾರಿ ಮಂಡಳಿಯು ಘೋಷಿಸಿದೆ ಎಂದು ನೇಶನ್ ಡಾಟ್ ಆಫ್ರಿಕ ಪ್ರಕಟಿಸಿರುವ ವರದಿಯನ್ನು ಉಲ್ಲೇಖಿಸಿ ಐಎಎನ್ಎಸ್ ತಿಳಿಸಿದೆ.
ಕ್ರಿಕೆಟ್ ಕೀನ್ಯದ ಮಹಿಳಾ ಕ್ರಿಕೆಟ್ನ ನಿರ್ದೇಶಕಿ ಪರ್ವಿನ್ ಒಮಾಮಿ ಮಂಡಳಿಯ ಇತರ ಸದಸ್ಯರ ಪರವಾಗಿ ಸಹಿ ಹಾಕಿದ್ದರು.
ಆಗಸ್ಟ್ 28,2024ರ ಕ್ರಿಕೆಟ್ ಕೀನ್ಯದ ಕಾರ್ಯನಿರ್ವಾಹಕ ಮಂಡಳಿಯಲ್ಲಿ ಅಂಗೀಕರಿಸಿರುವ ನಿರ್ಣಯದ ಅಡಿಯಲ್ಲಿ ಸ್ಥಾಪಿತ ಕಾರ್ಯವಿಧಾನಗಳನ್ನು ಅನುಸರಿಸಲು ಪುರುಷರ ಕ್ರಿಕೆಟ್ ರಾಷ್ಟ್ರೀಯ ತಂಡದ ಮುಖ್ಯ ತರಬೇತುದಾರರಾಗಿ ನಿಮ್ಮ ನೇಮಕಾತಿಯನ್ನು ಅನುಮೋದಿಸಲು ನಿರಾಕರಿಸಿದೆ ಎಂದು ನಾವು ನಿಮಗೆ ತಿಳಿಸಲು ಬಯಸುತ್ತೇವೆ. ಆಗಸ್ಟ್ 7,2024ರಂದು ಮನೋಜ್ ಪಟೇಲ್ ಹಾಗೂ ನಿಮ್ಮ ನಡುವೆ ಮಾಡಲಾದ ಒಪ್ಪಂದವನ್ನು ರದ್ದುಗೊಳಿಸಲಾಗಿದೆ. ಈ ಒಪ್ಪಂದಕ್ಕೆ ಕ್ರಿಕೆಟ್ ಕೀನ್ಯ ಬದ್ಧವಾಗಿಲ್ಲ ಹಾಗೂ ಬದ್ದವಾಗಿರುವುದಿಲ್ಲ ಎಂದು ಗಣೇಶ್ಗೆ ಕಳುಹಿಸಿರುವ ಪತ್ರದಲ್ಲಿ ತಿಳಿಸಲಾಗಿದೆ.
ಗಣೇಶ್ ಅವರ ದಿಢೀರ್ ನಿರ್ಗಮನದ ನಂತರ ಮಾಜಿ ಅಂತರ್ರಾಷ್ಟ್ರೀಯ ಆಟಗಾರ ಲ್ಯಾಮೆಕ್ ಒನ್ಯಾಂಗೊರನ್ನು ಕೀನ್ಯ ಪುರುಷರ ಕ್ರಿಕೆಟ್ ತಂಡದ ನೂತನ ಮುಖ್ಯ ಕೋಚ್ರನ್ನಾಗಿ ನೇಮಿಸಲಾಗಿದೆ. ಇನ್ನೋರ್ವ ಅಂತರ್ರಾಷ್ಟ್ರೀಯ ಆಟಗಾರ ಜೋಸೆಫ್ ಅಂಗಾರರನ್ನು ಸಹ ಕೋಚ್ ಆಗಿ ನೇಮಿಸಲಾಗಿದೆ. ಈ ಇಬ್ಬರು ಸೆಪ್ಟಂಬರ್ನಲ್ಲಿ ನೈರೋಬಿಯಲ್ಲಿ ಆರಂಭವಾಗಲಿರುವ ಐಸಿಸಿ ಡಿವಿಜನ್ 2 ಚಾಲೆಂಜ್ ಲೀಗ್ಗೆ ಕೀನ್ಯ ತಂಡವನ್ನು ಸಜ್ಜುಗೊಳಿಸಲಿದ್ದಾರೆ. ಈ ಪಂದ್ಯಾವಳಿಯಲ್ಲಿ ಕೀನ್ಯ ತಂಡವು ಪಪುವಾ ನ್ಯೂಗಿನಿ, ಕತರ್, ಡೆನ್ಮಾರ್ಕ್ ಹಾಗೂ ಜರ್ಸಿ ತಂಡಗಳನ್ನು ಎದುರಿಸಲಿದೆ.