ʼಫಿಕ್ಸರ್ʼ ಎಂದ ಗೌತಮ್ ಗಂಭೀರ್: ಕ್ರಿಕೆಟಿಗ ಶ್ರೀಶಾಂತ್ ಆರೋಪ
'ಲೆಜೆಂಡ್ಸ್ ಲೀಗ್ʼ ಪಂದ್ಯದ ವೇಳೆ ನಡೆದ ಘಟನೆ
ಎಸ್.ಶ್ರೀಶಾಂತ್,ಗೌತಮ್ ಗಂಭೀರ್ | Photo : X
ಸೂರತ್: ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್, 'ಲೆಜೆಂಡ್ಸ್ ಲೀಗ್' ಕ್ರಿಕೆಟ್ ಪಂದ್ಯದ ನಡುವೆ ತಮ್ಮನ್ನು 'ಫಿಕ್ಸರ್' ಎಂದು ಅವಹೇಳನ ಮಾಡಿದ್ದಾರೆ ಎಂದು ವೇಗದ ಬೌಲರ್ ಎಸ್.ಶ್ರೀಶಾಂತ್ ಗುರುವಾರ ಆರೋಪಿಸಿದ್ದಾರೆ.
ಭಾರತ ತಂಡವು 2007ರ ಚೊಚ್ಚಲ ಟಿ20 ವಿಶ್ವಕಪ್, 2011ರ ಏಕದಿನ ಕ್ರಿಕೆಟ್ ವಿಶ್ವಕಪ್ ಗೆದ್ದ ತಂಡದ ಭಾಗವಾಗಿದ್ದ ಗಂಭೀರ್ ಮತ್ತು ಶ್ರೀಶಾಂತ್, ಪ್ರಸಕ್ತ ನಡೆಯುತ್ತಿರುವ 'ಲೆಜೆಂಡ್ಸ್ ಲೀಗ್'ನಲ್ಲಿ ಇಂಡಿಯಾ ಕ್ಯಾಪಿಟಲ್ಸ್ ಮತ್ತು ಗುಜರಾತ್ ಜೈಂಟ್ಸ್ ತಂಡಗಳಲ್ಲಿ ಆಡುತ್ತಿದ್ದಾರೆ.
ಈ ತಂಡಗಳು ಬುಧವಾರ ನಡೆದ ಎಲಿಮನೇಟರ್ ಪಂದ್ಯದಲ್ಲಿ ಮುಖಾಮುಖಿಯಾಗಿದ್ದವು. ಪಂದ್ಯದ ನಡುವೆ ಉಭಯ ಆಟಗಾರರ ನಡುವೆ ಮಾತಿನ ಚಕಮಕಿ ನಡೆಯಿತು. ಅಂಪೈರ್ಗಳು ಮಧ್ಯಪ್ರವೇಶಿಸಿ, ವಾತಾವರಣ ತಿಳಿಗೊಳಿಸಿದರು.
ಪಂದ್ಯದ ಬಳಿಕ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಲೈವ್ ಬಂದು ಈ ಕುರಿತು ಮಾತನಾಡಿದ ಶ್ರೀಶಾಂತ್, 'ಗಂಭೀರ್ ಕ್ರೀಸ್ ಮಧ್ಯದಲ್ಲಿ ನಿಂತು ನನ್ನನ್ನು ಫಿಕ್ಸರ್, ಫಿಕ್ಸರ್ ಎಂದು ಕರೆಯುತ್ತಿದ್ದರು' ಎಂದು ದೂರಿದ್ದಾರೆ.
ನಾನು ಅದನ್ನು ತಮಾಷೆಯಾಗಿ ತೆಗೆದುಕೊಂಡು 'ಏನು ಹೇಳುತ್ತಿರುವೆ' ಎಂದು ಕೇಳಿದೆ. ಅಂಪೈರ್ಗಳು ವಾತಾವರಣ ತಿಳಿಗೊಳಿಸಲು ಪ್ರಯತ್ನಿಸಿದರೂ, ಗಂಭೀರ್ ಅದೇ ಧಾಟಿಯಲ್ಲಿ ಮಾತು ಮುಂದುವರಿಸಿದರು' ಎಂದು ಶ್ರೀಶಾಂತ್ ಹೇಳಿದ್ದಾರೆ.
'ನಾನು ಯಾವುದೇ ಆಕ್ಷೇಪಾರ್ಹ ಪದ ಬಳಕೆ ಮಾಡಲಿಲ್ಲ. ಗಂಭೀರ್ ಇದೇ ರೀತಿ ಹಲವರೊಂದಿಗೆ ನಡೆದುಕೊಂಡಿದ್ದಾರೆ. ಅವರು ಏಕೆ ಆ ರೀತಿ ಮಾಡಿದರು ಎಂಬುದೇ ಗೊತ್ತಾಗುತ್ತಿಲ್ಲ' ಎಂದು ಶ್ರೀಶಾಂತ್ ಬೇಸರ ವ್ಯಕ್ತಪಡಿಸಿದ್ದಾರೆ.
ʼಈಗ ಅವರ ಅಭಿಮಾನಿಗಳು 'ಗಂಭೀರ್ ಸಿಕ್ಸರ್' ಎಂದರು ಎನ್ನುತ್ತಿದ್ದಾರೆ. ಗಂಭೀರ್ ಹೇಳಿದ್ದು ಫಿಕ್ಸರ್, ಫಿಕ್ಸರ್ ಎಂದು. ಇದು ಮಾತನಾಡುವ ರೀತಿಯಲ್ಲ. ನಾನು ಈ ವಿಚಾರವನ್ನು ಬಿಟ್ಟು ಮುಂದೆ ಹೋಗಲು ನೋಡಿದರೆ, ಅವರ ಬೆಂಬಲಿಗರು ಗಂಭೀರ್ ಅವರನ್ನು ರಕ್ಷಿಸಲು ನೋಡುತ್ತಿದ್ದಾರೆʼ ಎಂದಿದ್ದಾರೆ.
ಕಾಲುಕೆರೆದು ಜಗಳ ಆರಂಭಿಸುವ ಗಂಭೀರ್
ಗೌತಮ್ ಗಂಭೀರ್, ಕ್ರೀಡಾಂಗಣದಲ್ಲಿ ವಾಗ್ವಾದ ನಡೆಸುತ್ತಿರುವುದು ಮೊದಲಲ್ಲ. ವಿರಾಟ್ ಕೊಹ್ಲಿ ಅವರೊಂದಿಗೆ ಐಪಿಎಲ್ ಪಂದ್ಯಗಳ ಸಂದರ್ಭದಲ್ಲಿ ಅವರು ಮಾಡಿದ್ದ ವಾಗ್ವಾದ ಅಂಗಣದ ಹೊರಗೂ ಚರ್ಚೆಯಾಗಿತ್ತು. ಸದ್ಯ ಅವರು ಐಪಿಎಲ್ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಸೇರಿಕೊಂಡಿದ್ದಾರೆ.
ಸ್ಪಾಟ್ ಫಿಕ್ಸಿಂಗ್ ಪಾಶಕ್ಕೆ ಸಿಲುಕಿದ್ದ ಶ್ರೀಶಾಂತ್
ಬಿಸಿಸಿಐ ಶಿಸ್ತು ಸಮಿತಿಯು, 2013ರ ಐಪಿಎಲ್ ನಲ್ಲಿ ಸ್ಪಾಟ್ ಫಿಕ್ಸಿಂಗ್ ಪ್ರಕರಣದಲ್ಲಿ ಭಾಗಿಯಾದ ಆರೋಪ ಹೊರಿಸಿ ಶ್ರೀಶಾಂತ್ ಗೆ ಆಜೀವ ನಿಷೇಧ ಹೇರಿತ್ತು. ಸುಪ್ರೀಂ ಕೋರ್ಟ್ ನಿಷೇಧವನ್ನು 2019ರಲ್ಲಿ 7 ವರ್ಷಕ್ಕೆ ಇಳಿಸಿತ್ತು. ಶಿಕ್ಷೆಯ ಅವಧಿ 2020ರ ಸೆಪ್ಟೆಂಬರ್ನಲ್ಲಿ ಮುಕ್ತಾಯವಾಗಿತ್ತು. 2021 ರಲ್ಲಿ ಮತ್ತೆ ಕೇರಳ ರಣಜಿ ತಂಡಕ್ಕೆ ಆಯ್ಕೆಯಾಗಿದ್ದ ಶ್ರೀಶಾಂತ್ ಕ್ರೀಡಾಂಗಣಕ್ಕೆ ಮರಳಿದ್ದರು. 2022ರಲ್ಲಿ ಅವರು ದೇಶೀಯ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ್ದರು.