ಯುವ ಕ್ರಿಕೆಟಿಗರಿಗೆ ವಿರಾಟ್ ಕೊಹ್ಲಿ ಮಾದರಿ ಎಂದ ಗೌತಮ್ ಗಂಭೀರ್!
ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ತಾಳ್ಮೆಯ ಆಟಕ್ಕೆ ಕೊಹ್ಲಿಯ ಗುಣಗಾನ
PHOTO : PTI
ಚೆನ್ನೈ : ಭಾರತದ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಅವರು ಆಸ್ಟ್ರೇಲಿಯಾ ವಿರುದ್ಧದ 2023 ರ ವಿಶ್ವಕಪ್ ನ ಆರಂಭಿಕ ಪಂದ್ಯದಲ್ಲಿ 116 ಎಸೆತಗಳಲ್ಲಿ 85 ರನ್ ಗಳಿಸಿದ ಭಾರತದ ಬ್ಯಾಟರ್ ವಿರಾಟ್ ಕೊಹ್ಲಿಯನ್ನು ಯುವ ಕ್ರಿಕೆಟಿಗರಿಗೆ ಮಾದರಿ ಎಂದು ಶ್ಲಾಘಿಸಿದ್ದಾರೆ.
ಐಪಿಎಲ್ ಟೂರ್ನಿಯಲ್ಲಿ ಕೊಹ್ಲಿಯೊಂದಿಗೆ ಮುನಿಸಿಕೊಂಡಿದ್ದ ಗೌತಮ್ ಗಂಭೀರ್, ವಿಶ್ವಕಪ್ ಪಂದ್ಯದ ಬಳಿಕ ಕೊಹ್ಲಿಯ ಗುಣಾಗಾನ ಮಾಡಿ ಸುದ್ದಿಯಾಗಿದ್ದಾರೆ.
ಪಂದ್ಯ ಮುಗಿದ ಬಳಿಕ starsports ಜೊತೆ ಮಾತನಾಡಿದ ಮಾಜಿ ಕ್ರಿಕೆಟಿಗ ಗಂಭೀರ್, " 2 ರನ್ ಗೆ 3 ವಿಕೆಟ್ ಕಳದುಕೊಂಡಿದ್ದಾಗ ತಂಡದ ಸ್ಥಿತಿ ನೀವು ಊಹಿಸಿಕೊಳ್ಳಿ. ಒತ್ತಡ ಹೆಚ್ಚಿರುತ್ತದೆ. ಬ್ಯಾಟ್ ಬೀಸಲು ಸಾಧ್ಯವಿಲ್ಲದ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಅದಕ್ಕಾಗಿಯೇ ಕೊಹ್ಲಿ ತುಂಬಾ ಸ್ಥಿರ ಪ್ರದರ್ಶನ ನೀಡಿದರು. ತಾಳ್ಮೆಯ ಆಟವಾಡಿ ಭರವಸೆ ತುಂಬಿದರು. ಅದು ಬಹಳ ಮುಖ್ಯ. ಯುವ ಕ್ರಿಕೆಟಿಗರಿಗೆ ವಿರಾಟ್ ಕೊಹ್ಲಿ ಮಾದರಿ. ಅವರಿಂದ ತುಂಬಾ ಕಲಿಯುತ್ತಾರೆ " ಎಂದು ಗಂಭೀರ್ ಹೇಳಿದರು.
“ಡ್ರೆಸ್ಸಿಂಗ್ ರೂಮ್ನಲ್ಲಿರುವ ಈ ಯುವ ಕ್ರಿಕೆಟಿಗರು ಫಿಟ್ನೆಸ್ನ ಪ್ರಾಮುಖ್ಯತೆ, ವಿಕೆಟ್ಗಳ ನಡುವೆ ರನ್ ಗಾಗಿ ಓಟದ ಪ್ರಾಮುಖ್ಯತೆ ಮತ್ತು ಸ್ಟ್ರೈಕ್ ಅನ್ನು ಹೇಗೆ ತಿರುಗಿಸಬೇಕು ಎಂಬುದರ ಕುರಿತು ಕಲಿಯುತ್ತಾರೆ ಎಂದು ನಾನು ಭಾವಿಸುತ್ತೇನೆ. T20 ಕ್ರಿಕೆಟ್ ನ ಸ್ಪರ್ಧಾತ್ಮಕ ಯುಗದಲ್ಲಿ ಯುವ ಬ್ಯಾಟರ್ಗಳು ಬೌಂಡರಿಯಿಂದ ಹೊರಗೆ ಚೆಂಡು ಅಟ್ಟುವುದಕ್ಕೇ ಹೆಚ್ಚು ಪ್ರಾಮುಖ್ಯತೆ ನೀಡುತ್ತಾರೆ” ಎಂದರು.
ಭಾರತ ತಂಡವು ಚೆನ್ನೈನ ಚೆಪಾಕ್ ನಲ್ಲಿ ಆಸ್ಟ್ರೇಲಿಯಾ ವಿರುದ್ಧ 2 ರನ್ ಗೆ 3 ವಿಕೆಟ್ ಕಳೆದುಕೊಂಡಿದ್ದಾಗ ತೀವ್ರ ಓತ್ತಡಕ್ಕೊಳಗಾಗಿತ್ತು. ಆಗ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಗೆ ಇಳಿದಿದ್ದ ವಿರಾಟ್ ಕೊಹ್ಲಿ ತಾಳ್ಮೆಯ ಆಟವಾಡಿ ತಂಡಕ್ಕೆ ಭರವಸೆ ತುಂಬುವ ಕೆಲಸ ಮಾಡಿದರು. ಒಂದು ಹಂತದವರೆಗೆ ಅವರು ಕೇವಲ ಸಿಂಗಲ್ಸ್ ಗಳಿಸುವ ಮೂಲಕ ತಂಡದ ಮೊತ್ತ ಹೆಚ್ಚಿಸಿದ್ದರು. ಬ್ಯಾಟ್ ಬೀಸುವ ಬದಲು ತಂಡಕ್ಕೆ ಗೆಲುವಿನ ವಿಶ್ವಾಸ ಮೂಡಿಸಿದ್ದರು. ಕೆ ಎಲ್ ರಾಹುಲ್ ಜೊತೆಗೂಡಿ 165 ರನ್ ಗಳ ಜೊತೆಯಾಟದಲ್ಲಿ ತಂಡದ ಗೆಲುವಿನಲ್ಲಿ ಮಹತ್ತರ ಪಾತ್ರ ವಹಿಸಿದ್ದರು.