ಜಯ್ ಶಾ ಭೇಟಿಯಾದ ಗೌತಮ್ ಗಂಭೀರ್ : ಟೀಮ್ ಇಂಡಿಯಾದ ಮುಖ್ಯ ಕೋಚ್ ಹುದ್ದೆ ಕುರಿತು ಚರ್ಚೆ?
ಗೌತಮ್ ಗಂಭೀರ್ , ಜಯ್ ಶಾ | PC: X
ಹೊಸದಿಲ್ಲಿ : ಚೆನ್ನೈನ ಎಂ.ಎ.ಚಿದಂಬರಂ ಕ್ರೀಡಾಂಗಣದಲ್ಲಿ ರವಿವಾರ ರಾತ್ರಿ ಸನ್ರೈಸರ್ಸ್ ಹೈದರಾಬಾದ್ ತಂಡವನ್ನು ಸುಲಭವಾಗಿ ಸೋಲಿಸಿ ತನ್ನ ತಂಡ ಮೂರನೇ ಬಾರಿ ಐಪಿಎಲ್ ಪ್ರಶಸ್ತಿ ಜಯಿಸಿದ ನಂತರ ಕೋಲ್ಕತಾ ನೈಟ್ ರೈಡರ್ಸ್ ನ ಮೆಂಟರ್ ಗೌತಮ್ ಗಂಭೀರ್ ಸಂಭ್ರಮದ ಅಲೆಯಲ್ಲಿ ತೇಲಾಡುತ್ತಿದ್ದಾರೆ.
ಕೆಕೆಆರ್ ಯಶಸ್ಸಿನಲ್ಲಿ ಮುಖ್ಯ ಪಾತ್ರವಹಿಸಿದ್ದ ಗಂಭೀರ್ ಆಟಗಾರರೊಂದಿಗೆ ಸಂಭ್ರಮಿಸುತ್ತಿರುವುದು, ಅಭಿಮಾನಿಗಳೊಂದಿಗೆ ಫೋಟೊ ತೆಗೆಸಿಕೊಳ್ಳುತ್ತಿರುವುದು ಕಂಡುಬಂದಿದೆ. ಈ ಸಂಭ್ರಮಾಚರಣೆಯ ನಡುವೆಯೇ ಗಂಭೀರ್ ಬಿಡುವು ಮಾಡಿಕೊಂಡು ಬಿಸಿಸಿಐ ಕಾರ್ಯದರ್ಶಿ ಜಯ್ ಶಾರನ್ನು ಭೇಟಿಯಾಗಿದ್ದಾರೆ. ಈ ಭೇಟಿಯು ಗಂಭೀರ್, ಭಾರತದ ಮುಖ್ಯ ಕೋಚ್ ಹುದ್ದೆ ವಹಿಸಿಕೊಳ್ಳಲಿದ್ದಾರೆಂಬ ವದಂತಿಗೆ ಪುಷ್ಠಿ ನೀಡಿದೆ.
ಈವರ್ಷದ ಜೂನ್ ನಲ್ಲಿ ಟಿ20 ವಿಶ್ವಕಪ್ ಮುಕ್ತಾಯದ ನಂತರ ಭಾರತದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರ ಅಧಿಕಾರದ ಅವಧಿಯು ಕೊನೆಯಾಗಲಿದೆ. ದ್ರಾವಿಡ್ ರಿಂದ ತೆರವಾದ ಸ್ಥಾನ ತುಂಬುವ ಸ್ಪರ್ಧೆಯಲ್ಲಿರುವವರ ಪೈಕಿ ಗಂಭೀರ್ ಮುಂಚೂಣಿಯಲ್ಲಿದ್ದಾರೆ. ದ್ರಾವಿಡ್ ಕೋಚ್ ಹುದ್ದೆಗೆ ಮತ್ತೆ ಅರ್ಜಿಯನ್ನು ಸಲ್ಲಿಸಿಲ್ಲ. ಹೀಗಾಗಿ ಬಿಸಿಸಿಐ ಹೊಸ ಕೋಚ್ ಗಾಗಿ ಹುಡುಕಾಟ ನಡೆಸುತ್ತಿದೆ. ನೂತನ ಕೋಚ್ ಒಪ್ಪಂದದ ಅವಧಿಯು 2027ರ ಏಕದಿನ ವಿಶ್ವಕಪ್ ಅಂತ್ಯದ ತನಕ ಇರಲಿದೆ.
ರಿಕಿ ಪಾಂಟಿಂಗ್ ಹಾಗೂ ಜಸ್ಟಿನ್ ಲ್ಯಾಂಗರ್ ಸಹಿತ ಆಸ್ಟ್ರೇಲಿಯದ ಹಲವು ಕ್ರಿಕೆಟ್ ದಂತಕತೆಗಳು ಭಾರತದ ಕೋಚ್ ಹುದ್ದೆ ವಹಿಸಿಕೊಳ್ಳಲು ಆಸಕ್ತರಾಗಿದ್ದಾರೆ ಎನ್ನಲಾಗಿತ್ತು. ಆದರೆ ನಾವು ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸಿಲ್ಲ ಎಂದು ಪಾಂಟಿಂಗ್ ಹಾಗೂ ಲ್ಯಾಂಗರ್ ಸ್ಪಷ್ಟಪಡಿಸಿದ್ದಾರೆ. ದೇಶೀಯ ಕ್ರಿಕೆಟನ್ನು ಚೆನ್ನಾಗಿ ಬಲ್ಲ ಭಾರತೀಯ ಕೋಚ್ ಗೆ ಬಿಸಿಸಿಐ ಆದ್ಯತೆ ನೀಡುತ್ತದೆ ಎಂದು ಜಯ್ ಶಾ ಸ್ಪಷ್ಟನೆ ನೀಡಿದ್ದರು. ಶಾ ಹೇಳಿಕೆಯ ಹಿನ್ನೆಲೆಯಲ್ಲಿ ಗಂಭೀರ್ ಮುಖ್ಯ ಕೋಚ್ ಹುದ್ದೆ ವಹಿಸಿಕೊಳ್ಳುವ ನೆಚ್ಚಿನ ಅಭ್ಯರ್ಥಿಯಾಗಿದ್ದಾರೆ.
ರವಿವಾರ ಗಂಭೀರ್ ಜೊತೆ ಶಾ ಸಂವಾದವು ಎಲ್ಲ ವದಂತಿಗೆ ಪುಷ್ಟಿ ನೀಡಿದೆ. ಬಿಸಿಸಿಐ ಕಾರ್ಯದರ್ಶಿ ಶಾ ಅವರು ಗಂಭೀರ್ ರನ್ನು ಅಭಿನಂದಿಸಿ ಅವರೊಂದಿಗೆ ಫೋಟೊ ತೆಗೆದುಕೊಳ್ಳುತ್ತಿರುವುದು ಕಂಡುಬಂದಿದೆ. ಚೆನ್ನೈನಲ್ಲಿ ಕೆಕೆಆರ್ ತಂಡ ಟ್ರೋಫಿ ಗೆದ್ದ ಸಂಭ್ರಮದಲ್ಲಿದ್ದಾಗ ಶಾ ಹಾಗೂ ಗಂಭೀರ್ ಸುದೀರ್ಘ ಕಾಲ ಚರ್ಚೆ ನಡೆಸಿದ್ದರು.
ಒಬ್ಬ ಆಟಗಾರ ಹಾಗೂ ಮಾರ್ಗದರ್ಶಕ(ಮೆಂಟರ್)ನಾಗಿ ಗಂಭೀರ್ ಅವರ ವ್ಯಾಪಕ ಅನುಭವ ಹಾಗೂ ಯಶಸ್ವಿ ದಾಖಲೆಯನ್ನು ಪರಿಗಣಿಸಿದರೆ ಮುಖ್ಯ ಕೋಚ್ ಆಗಿ ಅವರು ನೇಮಕವಾಗುವ ಸಾಧ್ಯತೆ ಹೆಚ್ಚಿದೆ.