2011ರ ವಿಶ್ವಕಪ್ ಫೈನಲ್: ಝಹೀರ್ ಖಾನ್ ಗೆ ಪಂದ್ಯಶ್ರೇಷ್ಠ ಗೌರವ ಸಿಗಬೇಕಿತ್ತು ಎಂದ ಗಂಭೀರ್
Photo : bcci
ಹೊಸದಿಲ್ಲಿ: ಭಾರತ ಹಾಗೂ ಶ್ರೀಲಂಕಾ ನಡುವಿನ 2011ರ ಏಕದಿನ ವಿಶ್ವಕಪ್ ಫೈನಲ್ ಪಂದ್ಯದ ಕುರಿತಂತೆ ತನ್ನ ಪ್ರಮುಖ ಹೇಳಿಕೆಯ ಮೂಲಕ ಭಾರತದ ಮಾಜಿ ಆರಂಭಿಕ ಬ್ಯಾಟರ್ ಗೌತಮ್ ಗಂಭೀರ್ ಮತ್ತೊಮ್ಮೆ ಸುದ್ದಿಯಾಗಿದ್ದಾರೆ.
ಔಟಾಗದೆ 91 ರನ್ ಗಳಿಸಿ ಭಾರತವು 275 ರನ್ ಗುರಿಯನ್ನು ಯಶಸ್ವಿಯಾಗಿ ಚೇಸ್ ಮಾಡಿ 2ನೇ ಬಾರಿ ಏಕದಿನ ವಿಶ್ವಕಪ್ ಜಯಿಸಲು ನೆರವಾಗಿದ್ದ ಎಂ.ಎಸ್. ಧೋನಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದಿದ್ದರು. ಆದರೆ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಇನ್ನೊಬ್ಬ ಆಟಗಾರನಿಗೆ ನೀಡಬೇಕಾಗಿತ್ತು ಎಂದು ಗಂಭೀರ್ ಅಭಿಪ್ರಾಯಪಟ್ಟಿದ್ದಾರೆ. ಸ್ವತಃ ಗಂಭೀರ್ ಫೈನಲ್ ಪಂದ್ಯದಲ್ಲಿ ನಿರ್ಣಾಯಕ 97 ರನ್ ಗಳಿಸಿದ್ದರು.
ಎಂ.ಎಸ್. ಧೋನಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದಿದ್ದರು. ನನ್ನ ಪ್ರಕಾರ ಝಹೀರ್ ಖಾನ್ ಗೆ ಈ ಪ್ರಶಸ್ತಿ ಸಿಗಬೇಕಾಗಿತ್ತು. ಝಹೀರ್ ಆ ಸ್ಪೆಲ್ ಎಸೆಯದೇ ಇರುತ್ತಿದ್ದರೆ ಶ್ರೀಲಂಕಾ ಸುಮಾರು 350 ರನ್ ಗಳಿಸುತ್ತಿತ್ತು. ಯಾರು ಕೂಡ ಅವರ ಬೌಲಿಂಗನ್ನು ನೆನಪಿಸಿಕೊಳ್ಳುತ್ತಿಲ್ಲ. ನನ್ನ ಇನಿಂಗ್ಸ್ ಹಾಗೂ ಧೋನಿಯವರ ಸಿಕ್ಸರ್ ಬಗ್ಗೆಯೇ ನಾವು ಮಾತನಾಡುತ್ತೇವೆ. ಫೈನಲ್ ನಲ್ಲಿ ಝಹೀರ್ ಮಿಂಚಿದ್ದರು ಎಂದು ಬಾಂಗ್ಲಾದೇಶ-ನ್ಯೂಝಿಲ್ಯಾಂಡ್ ವಿಶ್ವಕಪ್ ಪಂದ್ಯದ ವೇಳೆ ವೀಕ್ಷಕ ವಿವರಣೆ ನೀಡುವಾಗ ಗಂಭೀರ್ ಹೇಳಿದ್ದಾರೆ.
ಎಡಗೈ ವೇಗದ ಬೌಲರ್ ಝಹೀರ್ ಖಾನ್ 10 ಓವರ್ಗಳಲ್ಲಿ 60 ರನ್ ಗೆ 2 ವಿಕೆಟ್ ಳನ್ನು ಕಬಳಿಸಿದ್ದರು. ಫೈನಲ್ ನಲ್ಲಿ ಅಮೋಘ ಪ್ರದರ್ಶನ ನೀಡಿದ್ದ ಅವರು ಶ್ರೀಲಂಕಾವನ್ನು ಕಡಿಮೆ ಮೊತ್ತಕ್ಕೆ ನಿಯಂತ್ರಿಸಿದ್ದರು.
ಸತತ ಮೂರು ಮೇಡನ್ ಓವರ್ ಎಸೆದಿದ್ದ ಝಹೀರ್ 7ನೇ ಓವರ್ ನಲ್ಲಿ ಉಪುಲ್ ತರಂಗ ವಿಕೆಟನ್ನು ಉರುಳಿಸಿದ್ದರು. 5 ಓವರ್ಗಳ ಮೊದಲ ಸ್ಪೆಲ್ ನಲ್ಲಿ ಕೇವಲ 6 ರನ್ ನೀಡಿದ್ದರು.