ಸರಣಿ ಮುಖಭಂಗ | ಕೋಚ್ ಗೌತಮ್ ಬಗ್ಗೆ ಬಿಸಿಸಿಐ 'ಗಂಭೀರ' ಚಿಂತನೆ : ವರದಿ
Photo credit: PTI
ಮುಂಬೈ: ಶ್ರೀಲಂಕಾ ಮತ್ತು ನ್ಯೂಝಿಲ್ಯಾಂಡ್ ವಿರುದ್ಧದ ಸರಣಿ ಸೋಲುಗಳು ಗೌತಮ್ ಗಂಭೀರ್ ಅವರನ್ನು ಒತ್ತಡಲ್ಲಿ ಸಿಲುಕಿಸಿದೆ. ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗಿ ನೇಮಕಗೊಂಡ ಕೇವಲ ಮೂರು ತಿಂಗಳೊಳಗೆ ಗೌತಮ್ ಕೋಚ್ ಹಾದಿ 'ಗಂಭೀರ'ವಾಗಿದೆ.
ದೇಶಿ ಕೋಚ್ ಗೆ ಒಲವು ತೋರಿದ ಬಿಸಿಸಿಐಯು ಗೌತಮ್ ಗಂಭೀರ್ ಅವರನ್ನು ಕೋಚ್ ಹುದ್ದೆಗೆ ನೇಮಿಸಿತು. ಅಲ್ಲದೇ ಆಸ್ಟ್ರೇಲಿಯಾ ಪ್ರವಾಸಕ್ಕಾಗಿನ ಆಯ್ಕೆ ಸಮಿತಿಯ ಸಭೆಯಲ್ಲೂ ಭಾಗವಹಿಸಲು ಅವಕಾಶ ನೀಡಿತು. ಆ ಮೂಲಕ ತಂಡದ ಆಯ್ಕೆಯಲ್ಲಿ ಅವರಿಗೆ ಮುಕ್ತ ಅವಕಾಶ ಸಿಕ್ಕಿತು.
ಆದರೆ ಗಂಭೀರ್ ಕೋಚ್ ಹುದ್ದೆ ವಹಿಸಿಕೊಂಡ ಕೂಡಲೇ, ಭಾರತವು 27 ವರ್ಷಗಳಲ್ಲಿ ಮೊದಲ ಬಾರಿಗೆ ಶ್ರೀಲಂಕಾ ವಿರುದ್ಧ ಏಕದಿನ ಸರಣಿಯನ್ನು ಸೋತಿತು. ತನ್ನ ತವರಿನಲ್ಲಿಯೇ ನ್ಯೂಝಿಲ್ಯಾಂಡ್ ವಿರುದ್ಧ ರವಿವಾರ ಮೂರೇ ದಿನಕ್ಕೆ ಮುಕ್ತಾಯಗೊಂಡ ಟೆಸ್ಟ್ನಲ್ಲಿ 3-0 ಯಿಂದ ಸರಣಿ ಸೋತಿತು. ಸುದೀರ್ಘವಾದ ಕ್ರಿಕೆಟ್ ಪಯಣದಲ್ಲಿ ಭಾರತ ತಂಡ ಈ ರೀತಿಯ ಮುಖಭಂಗ ಅನುಭವಿಸಿರಲಿಲ್ಲ. ಆದರೆ ಉತ್ತುಂಗಕ್ಕೆ ಏರಿದ್ದ ತಂಡವು ಒಮ್ಮೆಲೇ ಕುಸಿಯುತ್ತಿರುವುದು ಬಿಸಿಸಿಐ ಗೆ ತಲೆನೋವು ತಂದಿದೆ.
ಕೋಚ್ ಒಂದು ಹಂತದ ವರೆಗೆ ತಂಡವನ್ನು ಸಿದ್ಧಪಡಿಸಬಹುದಾದರೂ, ಕಳೆದ ಆರರಿಂದ ಏಳು ವರ್ಷಗಳಲ್ಲಿ ಗುಣಮಟ್ಟದ ಸ್ಪಿನ್ ವಿರುದ್ಧ ಅಗ್ರ ಕ್ರಮಾಂಕವು ಪದೇ ಪದೇ ವಿಫಲವಾಗಿದೆ. ಇದಕ್ಕೆ ಮುಂಬೈ ನಲ್ಲಿ ನಡೆದ ಅಂತಿಮ ಟೆಸ್ಟ್ ಕೂಡ ಸಾಕ್ಷಿಯಾಗಿದೆ. ಭಾರತೀಯ ಕ್ರಿಕೆಟ್ನೊಂದಿಗೆ ನಿಕಟ ಸಂಬಂಧ ಹೊಂದಿರುವ ಗಂಭೀರ್ ಅವರು ತಮ್ಮ 'ಕ್ರಿಕೆಟ್ ತತ್ವಶಾಸ್ತ್ರ'ವನ್ನು ಪ್ರಸಕ್ತ ತಂಡದೊಂದಿಗೆ ಸಮೀಕರಿಸಲು ವಿಫಲರಾಗಿರುವುದೂ ಕಂಡು ಬರುತ್ತಿದೆ.
ಮುಂಬೈನಲ್ಲಿ ನಡೆದ ನ್ಯೂಝಿಲ್ಯಾಂಡ್ ವಿರುದ್ಧದ ಮೂರನೇ ಟೆಸ್ಟ್ನಲ್ಲಿ ಎರಡನೇ ದಿನ ಮುಹಮ್ಮದ್ ಸಿರಾಜ್ ಗೆ ನೀಡಿದ ಸ್ಥಾನ ಮತ್ತು ಸರ್ಫರಾಝ್ ಖಾನ್ ಅವರನ್ನು ನಂ.8 ರಲ್ಲಿ ಆಡಿಸಿರುವ ಅವರ ತಂತ್ರಗಾರಿಕೆಯು ಹಲವರಿಗೆ ಅಪಥ್ಯವೆನಿಸಿದೆ.
"ಗೌತಮ್ ಗಂಭೀರ್ ಅವರಿಗೆ ಹಿಂದಿನ ಕೋಚ್ ಗಳಾದ ರವಿಶಾಸ್ತ್ರಿ ಮತ್ತು ರಾಹುಲ್ ದ್ರಾವಿಡ್ ಇಲ್ಲದ ವಿಶೇಷ ಮನ್ನಣೆ ನೀಡಿ ಆಯ್ಕೆ ಸಮಿತಿ ಸಭೆಯಲ್ಲಿ ಪ್ರವೇಶ ನೀಡಲಾಯಿತು. BCCI ಯ ನಿಯಮದಂತೆ ಕೋಚ್ ಗಳಿಗೆ ಆಯ್ಕೆ ಸಮಿತಿ ಸಭೆಗಳಲ್ಲಿ ಭಾಗವಹಿಸಲು ಅವಕಾಶವಿಲ್ಲ. ಆದರೆ ಆಸ್ಟ್ರೇಲಿಯಾ ಪ್ರವಾಸದ ಆಯ್ಕೆ ಸಭೆಗೆ ಗೌತಮ್ ಗಂಭೀರ್ ಗೆ ಅವಕಾಶ ನೀಡಲಾಗಿದೆ" ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.
ಅದೇ ಕಾರಣಕ್ಕೆ ಮುಖ್ಯ ಕೋಚ್ ಒತ್ತಾಸೆಯಿಂದಲೇ ದಿಲ್ಲಿ ಮತ್ತು KKR ವೇಗಿ ಹರ್ಷಿತ್ ರಾಣಾ ಮತ್ತು ಆಂಧ್ರ ಮತ್ತು SRH ಆಲ್ ರೌಂಡರ್ ನಿತೀಶ್ ರೆಡ್ಡಿ ಅವರು ಬಾರ್ಡರ್-ಗವಾಸ್ಕರ್ ಟ್ರೋಫಿ ತಂಡದಲ್ಲಿ ಸ್ಥಾನ ಪಡೆದಿದ್ದಾರೆ ಎನ್ನಲಾಗಿದೆ.
ಈ ಎಲ್ಲದರ ನಡುವೆ ಆಸ್ಟ್ರೇಲಿಯಾ ಸರಣಿಯು ಗೌತಮ್ ರಿಗೆ 'ಗಂಭೀರ' ಪರೀಕ್ಷೆಯಾಗಲಿದೆ. ಈ ಸರಣಿಯ ಬಳಿಕ ತಂಡದಲ್ಲಿ ಹಿರಿಯರ ಸ್ಥಾನಗಳನ್ನು ಬಿಸಿಸಿಐ ನಿರ್ಧರಿಸಲಿದೆ ಎನ್ನಲಾಗಿದೆ. ಆ ಮೂಲಕ ಕೋಚ್ ಗಂಭೀರ್ ಸ್ಥಾನದ ಬಗ್ಗೆಯೂ ಬಿಸಿಸಿಐ ಯೋಚಿಸಲಿದೆ ಎನ್ನುವ ಲೆಕ್ಕಾಚಾರ ಶುರುವಾಗಿದೆ ಎಂದು NDTV ವರದಿ ಮಾಡಿದೆ.