ನಾಯಿ ಕಚ್ಚಿದ್ದ ಘಟನೆಯನ್ನು ಪೋಷಕರಿಗೆ ತಿಳಿಸದೆ ಪ್ರಾಣ ತೆತ್ತ ಬಾಲಕ
Phoot: PTI
ಗಾಝಿಯಾಬಾದ್: ಒಂದು ತಿಂಗಳ ಹಿಂದೆ ನಾಯಿ ಕಚ್ಚಿದ ಘಟನೆಯನ್ನು ಪೋಷಕರಿಗೆ ತಿಳಿಸದೆ ಮುಚ್ಚಿಟ್ಟಿದ್ದ 14 ವರ್ಷದ ಬಾಲಕ ರೇಬಿಸ್ ನಿಂದ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.
8 ನೇ ತರಗತಿಯ ವಿದ್ಯಾರ್ಥಿ ಶಹವಾಝ್ ಆರೋಗ್ಯ ಸ್ಥಿತಿ ಹದಗೆಟ್ಟ ನಂತರ ಸೋಮವಾರ ಸಂಜೆ ಮೃತಪಟ್ಟಿದ್ದಾನೆ ಎಂದು ಅವರು ಹೇಳಿದರು.
ವಿಜಯ್ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಚರಣ್ ಸಿಂಗ್ ಕಾಲೋನಿ ನಿವಾಸಿ ಶಹವಾಝ್ ಎಂಬಾತನಿಗೆ ಒಂದೂವರೆ ತಿಂಗಳ ಹಿಂದೆ ನೆರೆಮನೆಯ ನಾಯಿ ಕಚ್ಚಿದ್ದರೂ ಭಯದಿಂದ ಪೋಷಕರಿಗೆ ಅದನ್ನು ಮುಚ್ಚಿಟ್ಟಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಬಾಲಕ ರೇಬೀಸ್ ಗೆ ತುತ್ತಾಗಿದ್ದ. ಅಸಹಜವಾಗಿ ವರ್ತಿಸಲು ಆರಂಭಿಸಿದ್ದನು. ಸೆಪ್ಟೆಂಬರ್ 1 ರಂದು ಆಹಾರ ತಿನ್ನುವುದನ್ನು ನಿಲ್ಲಿಸಿದ್ದ. ಆಗ ಬಾಲಕನು ತಮ್ಮ ನೆರೆಮನೆಯ ನಾಯಿ ಕಚ್ಚಿದೆ ಎಂದು ತಮ್ಮ ಕುಟುಂಬ ಸದಸ್ಯರಿಗೆ ತಿಳಿಸಿದ್ದಾನೆ ಎಂದು ಪೊಲೀಸರು ಹೇಳಿದರು.
ಶಹವಾಝ್ ಅವರ ಕುಟುಂಬವು ಆತನನ್ನು ದಿಲ್ಲಿ ಸರಕಾರಿ ಆಸ್ಪತ್ರೆಗಳಿಗೆ ಕರೆದೊಯ್ದರು. ಆದರೆ ಅಲ್ಲಿ ಬಾಲಕನನ್ನು ಚಿಕಿತ್ಸೆಗಾಗಿ ದಾಖಲಿಸಲಿಲ್ಲ. ಕೊನೆಗೆ ಬುಲಂದ್ ಶಹರ್ ನಲ್ಲಿರುವ ಆಯುರ್ವೇದ ವೈದ್ಯರ ಬಳಿ ಚಿಕಿತ್ಸೆಗಾಗಿ ಕರೆದುಕೊಂಡು ಹೋದರು ಎಂದು ಮನೆಯವರು ಪೊಲೀಸರಿಗೆ ತಿಳಿಸಿದ್ದಾರೆ.
ಆಂಬ್ಯುಲೆನ್ಸ್ ನಲ್ಲಿ ಗಾಝಿಯಾಬಾದ್ ಗೆ ವಾಪಸ್ ಕರೆತರುವಾಗ ಬಾಲಕ ಮೃತಪಟ್ಟಿದ್ದಾನೆ. ಈ ಸಂಬಂಧ ದೂರು ದಾಖಲಾಗಿದ್ದು, ನಾಯಿ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಕೊತ್ವಾಲಿ ವಲಯದ ಸಹಾಯಕ ಪೊಲೀಸ್ ಆಯುಕ್ತ ನಿಮಿಷ್ ಪಾಟೀಲ್ ತಿಳಿಸಿದ್ದಾರೆ.